14 ವರ್ಷದ ನಂತರವೂ ಇಂಟರ್ನೆಟ್ ಅನ್ನು ಆಳಿದ ರಾಜಕುಮಾರ್, ಇಡೀ ಸಾಮಾಜಿಕ ಜಾಲತಾಣಕ್ಕೆ ಅಚ್ಚರಿ

ಡಾಕ್ಟರ್ ರಾಜಕುಮಾರ್ ಎಂಬ ಒಂದು ಹೆಸರು ನಮ್ಮ ದೇಶದ ಎಲ್ಲ ರಾಜ್ಯಗಳು ಸೇರಿದಂತೆ ಇಡೀ ವಿಶ್ವವೇ ನಮ್ಮ ಕನ್ನಡ ನಾಡಿನನತ್ತ ನಮ್ಮ ಕನ್ನಡ ಭಾಷೆ ಸಂಸ್ಕೃತಿಯತ್ತ ತಿರುಗಿ ನೋಡುವಂತೆ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ನಮ್ಮ ರಾಜ್ಯದ ಹೆಮ್ಮೆ ಆಗಿರುವ ಡಾಕ್ಟರ್ ರಾಜಕುಮಾರ್ ಅವರನ್ನು ಕೇವಲ ಒಬ್ಬ ನಟ ಅಥವಾ ಚಿತ್ರರಂಗದ ವ್ಯಕ್ತಿ ಎಂದು ಯಾರೊಬ್ಬರು ಗುರುತಿಸುವುದಿಲ್ಲ. ಬದಲಾಗಿ ಅವರಿಗೆ ಸಿಕ್ಕ ಸ್ಥಾನ ದೇವರದ್ದು. ಹೌದು ಅವರನ್ನು ಬಹುತೇಕ ಕನ್ನಡಿಗರು ದೇವರ ಪ್ರತಿರೂಪವೆಂದು ಪೂಜಿಸುವವರು ಇದ್ದಾರೆ, ಆರಾಧಿಸುವವರು ಇದ್ದಾರೆ ಇನ್ನು ಕೆಲವರು ಅವರನ್ನು ತಮ್ಮ ಮನೆಯ ಸದಸ್ಯ ಎಂದು ಭಾವಿಸಿದ್ದು ಸಹಜವಾಗಿದೆ. ಅಷ್ಟರ ಮಟ್ಟಿನ ಖ್ಯಾತಿ ವರನಟ ಗಾನ ಗಂಧರ್ವ ಡಾಕ್ಟರ್ ರಾಜಕುಮಾರ್ ಅವರದ್ದು.

ಅವರ ಹೆಸರು ಸೂರ್ಯ ಚಂದ್ರ ಇರುವವರೆಗೂ ಶಾಶ್ವತ ಎಂದರೆ ತಪ್ಪಾಗಲಿಕ್ಕಿಲ್ಲ. ಅವರು ನಮ್ಮನ್ನಗಲಿ ದಶಕದ ಮೇಲೆ ಹಲವು ವರ್ಷಗಳೇ ಕಳೆದರೂ ಇನ್ನೂ ಅವರ ತಾಜಾತನ ಹಾಗೆಯೇ ಇದೆ. ಅದಕ್ಕೆ ನಾವು ಸಾಕಷ್ಟು ಉದಾಹರಣೆಗಳನ್ನು ಸಹ ನೋಡುತ್ತಲೇ ಇರುತ್ತೇವೆ. ಅಂತಹದೇ ಒಂದು ಉದಾಹರಣೆಯನ್ನು ಈಗ ನೀವೇ ನೋಡಿ. ಸರ್ಚ್ ಎಂಜಿನ್ ಗಳಲ್ಲಿ ಒಂದಾದ ಯಾಹೂನ ಮನೋರಂಜನಾ ವಿಭಾಗವು ಭಾರತದ ಸಾರ್ವಕಾಲಿಕ ಅತ್ಯುತ್ತಮ ನಟ ಯಾರು ಎಂಬ ಆನ್ಲೈನ್ ಸಮೀಕ್ಷೆಯನ್ನು ಹಮ್ಮಿಕೊಂಡಿತ್ತು. ಅದರಲ್ಲಿ ನಮ್ಮ ದೇಶದ ವಿವಿಧ ಭಾಷೆಯ ಲೆಜೆಂಡರಿ ನಟರ ಪಟ್ಟಿಯನ್ನು ನೀಡಲಾಗಿತ್ತು.

ಒಬ್ಬ ಯಾಹೂ ಬಳಕೆದಾರನಿಗೆ 10ಜನ ನಟರಿಗೆ ಮತ ಹಾಕುವ ಅವಕಾಶ ನೀಡಲಾಗಿತ್ತು. ಆ ಪಟ್ಟಿಯಲ್ಲಿ ತಮಿಳು ಚಿತ್ರರಂಗದ ದಂತಕಥೆ ರಜನಿಕಾಂತ್ ಕಮಲ್ ಹಾಸನ್, ತೆಲುಗು ಚಿತ್ರರಂಗದ ಎನ್ಟಿಆರ್, ಬಾಲಿವುಡ್ನ ಅಮಿತಾ ಬಚ್ಚನ್ ಅಮೀರ್ ಖಾನ್ ಶಾರುಖ್ ಖಾನ್ ಇನ್ನೂ ಅನೇಕ ದೇಶದ ಪ್ರಮುಖ ನಟರ ಹೆಸರುಗಳಿದ್ದವು. ಕನ್ನಡದಿಂದ ನಟ ಡಾಕ್ಟರ್ ರಾಜಕುಮಾರ್ ಅವರ ಹೆಸರು ಕೂಡ ಇತ್ತು. ಕೊನೆಗೆ ಫಲಿತಾಂಶವನ್ನು ಗಮನಿಸಿದಾಗ ಅತಿ ಹೆಚ್ಚು ಮತಗಳಿಸಿ ಭಾರತದ ಸಾರ್ವಕಾಲಿಕ ಅತ್ಯುತ್ತಮ ನಟನಾಗಿ ಹೊರಹೊಮ್ಮಿದ್ದು ನಮ್ಮ ಅಣ್ಣಾವ್ರು ಡಾಕ್ಟರ್ ರಾಜಕುಮಾರ್ ಅವರು.

ಹೌದು ಇಡೀ ದೇಶದ ಎಲ್ಲ ಶ್ರೇಷ್ಠರನ್ನು ಹಿಂದಿಕ್ಕಿ ತಾವು ಮತ್ತೊಮ್ಮೆ ಶ್ರೇಷ್ಠರಲ್ಲಿ ಶ್ರೇಷ್ಠ ಎಂಬುದನ್ನು ತೋರಿಸಿಕೊಟ್ಟರು. ಡಿಸೆಂಬರ್ ಹತ್ತರವರೆಗಿನ ಮತಗಳಲ್ಲಿ ನಮ್ಮ ರಾಜಕುಮಾರ್ ಅವರು ಪಡೆದದ್ದು ಶೇಕಡ16 ಮತಗಳನ್ನು, ಅಂದರೆ ಭಾರತದಲ್ಲೇ ಅತ್ಯಂತ ಹೆಚ್ಚು ಲಕ್ಷಗಟ್ಟಲೆ ಮತಗಳನ್ನು ರಾಜಕುಮಾರ್ ಅವರು ಪಡೆದು ಅತ್ಯುತ್ತಮ ನಟನಾಗಿ ಹೊರಹೊಮ್ಮಿದ್ದಾರೆ. ತೆಲುಗು ಚಿತ್ರರಂಗದ ದಂತಕಥೆ ದಿವಂಗತ ಎನ್ಟಿಆರ್ ಎರಡನೆಯ ಸ್ಥಾನದಲ್ಲಿ ಇದ್ದಾರೆ. ನೋಡಿ ನಮ್ಮನ್ನಗಲಿ ವರ್ಷಗಳೇ ಕಳೆದರೂ ಅವರ ಹೆಸರು ಹೇಗೆ ಪ್ರಕಾಶಮಾನವಾಗಿ ಹೊಳೆಯುತ್ತಿದೆ ಎಂದು. ಇದು ನಿಜಕ್ಕೂ ಪ್ರತಿಯೊಬ್ಬ ಕನ್ನಡಿಗನು ಗರ್ವದಿಂದ ಹೆಮ್ಮೆಪಡಬೇಕಾದ ವಿಷಯವೇ.

%d bloggers like this: