ಅಪ್ಪು ಆಸೆಯಂತೆ ಗಾಜನೂರಿನ ಮನೆ ಇನ್ನು ಸಂಗ್ರಹಾಲಯ

ನಟ ಸಾರ್ವಭೌಮ ಡಾ‌.ರಾಜ್ ಕುಮಾರ್ ಅವರು ಹುಟ್ಟಿ ಬೆಳೆದ ಗಾಜನೂರಿನ ಮನೆಯನ್ನು ನವೀಕರಣಗೊಳಿಸುವ ಯೋಜನೆ ಹಾಕಿಕೊಂಡಿದ್ದ ಪುನೀತ್ ರಾಜ್ ಕುಮಾರ್ ಅವರ ಕನಸನ್ನು ಇದೀಗ ಅವರ ಸೋದರರಾದ ಶಿವಣ್ಣ ರಾಘಣ್ಣ ನನಸು ಮಾಡಲು ನಿರ್ಧರಿಸಿದ್ದಾರೆ. ದಿ.ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ತಮ್ಮ ತಂದೆ ಹುಟ್ಟಿದ ಮನೆಯನ್ನ ಹಾಗೂ ತಾವು ಕೂಡ ಆಡಿ ಬೆಳೆದ ಈ ಹಳ್ಳಿ ಮನೆಯನ್ನು ಒಂದು ಸುಂದರ ಸಂಗ್ರಹಾಲಯವಾಗಿ ಮಾಡಬೇಕು. ಈ ಸಂಗ್ರಹಾಲಯದಲ್ಲಿ ತಮ್ಮ ತಂದೆಯ ನೆನಪಿನಾರ್ಥ ಅವರ ಬಳಸಿದ ಒಂದಷ್ಟು ವಸ್ತುಗಳನ್ನು ಇಲ್ಲಿ ಇರಿಸಬೇಕು. ಅಭಿಮಾನಿಗಳಿಗೆ ಈ ಸಂಗ್ರಹಾಲಯಕ್ಕೆ ಮುಕ್ತ ಅವಕಾಶ ಮಾಡಬೇಕು ಎಂಬ ಮಹಾದಾಸೆಯನ್ನು ಹೊಂದಿದ್ದರು.

ಆದರೆ ದುರಾದೃಷ್ಟವಶಾತ್ ಆ ಕನಸು ಈಡೇರುವ ಮುನ್ನವೇ ಅಪ್ಪು ಅವರ ತಮ್ಮ ಜೀವ ಬಿಟ್ಟರು. ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಎರಡು ತಿಂಗಳುಗಳ ಸನಿಹವಾಗುತ್ತಿವೆ. ಅಪ್ಪು ಅವರು ಅಕಾಲಿಕ ನಿಧನದ ಬಳಿಕ ಕನ್ನಡ ಚಿತ್ರರಂಗ ಸಂಪೂರ್ಣ ನೀರವ ಮೌನಕ್ಕೆ ಒಳಗಾಗಿತ್ತು. ಇಂದಿಗೂ ಕೂಡ ಸ್ಯಾಂಡಲ್ ವುಡ್ ನಲ್ಲಿ ಯಾವುದೇ ಸಿನಿಮಾ ಕಾರ್ಯಕ್ರಮಗಳು ನಡೆದರು ಕೂಡ ಪುನೀತ್ ಅವರನ್ನು ನೆನೆದೇ ಸಿನಿಮಾ ಮಾತುಕತೆಗೆ ಮುಂದಾಗುತ್ತಿದ್ದಾರೆ. ಅಪ್ಪು ಅವರು ನಮ್ಮ ಜೊತೆ ದೈಹಿಕವಾಗಿ ಇಲ್ಲದಿದ್ದರು ಕೂಡ ಮಾನಸಿಕವಾಗಿ ಅವರು ಸದಾ ಜೀವಂತರಾಗಿರುತ್ತಾರೆ. ಅವರು ಮಾಡಿದಂತಹ ಸಾಮಾಜಿಕ ಕಾರ್ಯಗಳು, ಅವರು ಮಾಡಿದ ಸಿನಿಮಾಗಳ ಮೂಲಕ ಅಪ್ಪು ಶಾಶ್ವತವಾಗಿರುತ್ತಾರೆ.

ಪುನೀತ್ ಅವರ ಪುಣ್ಯಭೂಮಿಗೆ ಪ್ರತಿನಿತ್ಯ ಕುಟುಂಬ ಸಮೇತ ನೂರಾರು ಅಭಿಮಾನಿಗಳು ಬಂದು ದರ್ಶನ ಪಡೆದು ಸ್ಮರಿಸುತ್ತಿದ್ದಾರೆ. ಅವರ ನಿಧನಕ್ಕೆ ಇಡೀ ಕನ್ನಡನಾಡು ಸೇರಿದಂತೆ ಇಡೀ ಭಾರತೀಯ ಚಿತ್ರರಂಗ ಕಣ್ಣೀರಾಕಿತ್ತು. ಅಪ್ಪು ಅವರು ನಿಧನರಾಗುವ ಒಂದು ದಿನದ ಹಿಂದೆ ತಮ್ಮ ತಂದೆ ಡಾ.ರಾಜ್ ಹುಟ್ಟೂರಾದ ಗಾಜನೂರಿಗೆ ಹೋಗಬೇಕು ಎಂಬ ಯೋಜನೆಯನ್ನು ಕೂಡ ಹಾಕಿಕೊಂಡಿದ್ದರು. ಆದರೆ ಅವರಂದು ಕೊಂಡಿದ್ದ ದಿನ ದುರಾದೃಷ್ಟವಶಾತ್ ಸಾಧ್ಯವಾಗಲಿಲ್ಲ. ಅಪ್ಪು ಅವರಿಗೆ ಗಾಜನೂರು ಅಂದರೆ ಬಹಳ ಅಚ್ಚು ಮೆಚ್ಚು. ಆಗಾಗ ಅಲ್ಲಿಗೆ ಭೇಟಿ ನೀಡುತ್ತಿದ್ದರು. ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿಕೊಂಡು ಅಲ್ಲಿನ ಸುತ್ತಮುತ್ತಲಿನ ಪರಿಸರದಲ್ಲಿ ಸುತ್ತಾಡಿ ಬರುತ್ತಿದ್ದರು.

ಇತ್ತೀಚೆಗೆ ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಅಪ್ಪು ಮತ್ತು ಅಶ್ವಿನಿ ಅವರು ಗಾಜನೂರಿಗೆ ಭೇಟಿಕೊಟ್ಟಿದ್ದರು. ಪುನೀತ್ ಅವರಿಗೆ ರಾಜ್ ಅವರು ಹುಟ್ಟಿ ಬೆಳೆದ ಆ ಪಡಸಾಲೆ ಹೆಂಚಿನ ಮನೆಯನ್ನ ಕಂಡರೆ ಏನೋ ಒಂದು ಆಪ್ತತೆ ಪ್ರೀತಿಯನ್ನು ಇಟ್ಟುಕೊಂಡಿದ್ದರು. ಸುಮಾರು ಇನ್ನೂರು ವರ್ಷಗಳ ಕಾಲದ ಹಿಂದಿನ ಈ ಮಣ್ಣಿನ ಮನೆಯನ್ನ ನವೀಕರಣ ಮಾಡುವ ಯೋಜನೆ ಹಾಕಿಕೊಂಡು ಅಲ್ಲಿ ತಮ್ಮ ತಂದೆಯ ನೆನಪಿನಾರ್ಥ ಒಂದಷ್ಟು ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಅಲ್ಲಿನ ಒಂದಷ್ಟು ಜನರೊಂದಿಗೆ ಹೇಳಿ ಕೊಂಡಿದ್ದರಂತೆ. ಇದೀಗ ಪುನೀತ್ ಅವರ ಕನಸಿನಂತೆ ಶಿವಣ್ಣ, ರಾಘಣ್ಣ ತಮ್ಮ ತಂದೆ ಹುಟ್ಟಿ ಬೆಳೆದ ಮನೆಯ ಕಾಯಕಲ್ಪ ಕಾರ್ಯ ನಡೆಯುತ್ತಿದೆ. ಈ ಮೂಲಕ ಅಪ್ಪು ಅವರ ಆಸೆಯಂತೆ ಗಾಜನೂರಿನ ಹಳ್ಳಿ ಮನೆಯನ್ನ ನವೀಕರಣ ಮಾಡಿ ಅಲ್ಲಿ ರಾಜ್ ಅವರ ಮತ್ತು ಅಪ್ಪು ಅವರ ಒಂದಷ್ಟು ನೆನಪಿನ ಕಾಣಿಕೆಗಳನ್ನ ಇಡುವ ಆಲೋಚನೆ ರಾಜ್ ಕುಟುಂಬದ್ದಾಗಿದೆ.

%d bloggers like this: