ಅಪ್ಪು ಅವರ ಆಸೆಯನ್ನು ಈಡೇರಿಸುತ್ತಿದೆ ಕರ್ನಾಟಕ ಸರ್ಕಾರ

ಕೇವಲ ನಾವಷ್ಟೇ ಬೆಳೆದರೆ ಸಾಲದು, ನಮ್ಮ ಜೊತೆಗಿರುವ ಇತರರು ಬೆಳೆಯಲು ಸಹಾಯ ಮಾಡಬೇಕು ಎಂದು ನಮ್ಮ ಅಮ್ಮ ಪಾರ್ವತಮ್ಮ ರಾಜಕುಮಾರ್ ಹೇಳುತ್ತಿದ್ದರು ಎಂದು ಪುನೀತ್ ರಾಜಕುಮಾರ್ ಪದೇ ಪದೇ ಹೇಳುತ್ತಿದ್ದರು. ಹಲವಾರು ಜನ ಶ್ರೀಮಂತರು ತಾವಾಯಿತು ತಮ್ಮ ಹಣವಾಯಿತು ಎಂದು ಇದ್ದುಬಿಡುತ್ತಾರೆ. ಆದರೆ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಸಮಾಜಸೇವೆಗಾಗಿ ತಾವು ಸ್ವತಹ ದುಡಿದ ದುಡ್ಡನ್ನು ಸದುಪಯೋಗ ಪಡಿಸುತ್ತಾರೆ. ಇಂತಹವರಲ್ಲಿ ಡಾಕ್ಟರ್ ರಾಜಕುಮಾರ್ ಪರಿವಾರವು ಒಂದು. ಹೌದು ಮೊದಲಿನಿಂದಲೂ ಡಾಕ್ಟರ್ ರಾಜಕುಮಾರ್ ಅವರ ಕುಟುಂಬ ತಮ್ಮ ಸಂಪಾದನೆಯ ಒಂದಿಷ್ಟು ಭಾಗವನ್ನು ಸಮಾಜಸೇವೆಗಾಗಿ ಮೀಸಲಿಡುತ್ತಿದ್ದರು. ಅವರ ಹಾದಿಯಲ್ಲಿ ನಡೆದ ಡಾಕ್ಟರ್ ರಾಜಕುಮಾರ್ ಅವರ ಮುದ್ದಿನ ಮಗ ನಮ್ಮೆಲ್ಲರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೂಡ ಅನೇಕ ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆ, ಶಕ್ತಿಧಾಮ ಹೀಗೆ ಅನೇಕ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರು ಬದುಕಿದ್ದಾಗ ತಮ್ಮ ಸಂಪಾದನೆಯ ಒಂದು ಭಾಗವನ್ನು ಶಕ್ತಿಧಾಮಗಳಿಗೆ ಮೀಸಲಿಡುತ್ತಿದ್ದರು ಎಂಬ ಮಾಹಿತಿ ಇತ್ತೀಚೆಗೆ ಬೆಳಕಿಗೆ ಬಂದಿದೆ. ಬಲಗೈ ಮಾಡುವ ದಾನ ಎಡಗೈಗೆ ಗೊತ್ತಾಗಬಾರದು ಎನ್ನುವ ಹಾಗೆ ಪುನೀತ್ ರಾಜಕುಮಾರ್ ಅವರು ಮಾಡಿರುವ ಅನೇಕ ಪರೋಪಕಾರಿ ಕಾರ್ಯಗಳು ಅವರ ಅಕಾಲಿಕ ನಿಧನದ ನಂತರ ಒಂದಾದಮೇಲೊಂದು ಬೆಳಕಿಗೆ ಬರುತ್ತಿವೆ. ಇದರಿಂದ ಪುನೀತ್ ರಾಜಕುಮಾರ್ ಅವರ ಮೇಲಿನ ಗೌರವ ಇನ್ನಷ್ಟು ಹೆಚ್ಚಾಗುತ್ತಿದೆ. ಪುನೀತ್ ರಾಜ್ ಕುಮಾರ್ ಅವರು ಚಿತ್ರಗಳಲ್ಲಿ ನಟಿಸುವುದಷ್ಟೇ ಅಲ್ಲದೇ ಕನ್ನಡದ ಕೋಟ್ಯಾಧಿಪತಿ ಎಂಬ ರಿಯಾಲಿಟಿ ಶೋ ಹೋಸ್ಟ್ ಮಾಡುತ್ತಿದ್ದರು.

ಈ ರಿಯಾಲಿಟಿ ಶೋನಲ್ಲಿ ಕಷ್ಟ ಎಂದು ಹೇಳಿದವರಿಗೆ ಕ್ಯಾಮೆರಾ ಕಣ್ಣಿಗೆ ಕಾಣದ ಹಾಗೆ ಪುನೀತ್ ಅವರು ಎಷ್ಟೋ ಬಾರಿ ಸಹಾಯ ಮಾಡಿದ್ದಾರೆ. ಅದೇ ರೀತಿ ಮೊದಲ ಬಾರಿ ಪುನೀತ್ ರಾಜಕುಮಾರ್ ಅವರು ಕೋಟ್ಯಾಧಿಪತಿ ಆಟವನ್ನು ಆಡಿದಾಗ 18 ಲಕ್ಷ ರೂಪಾಯಿಯನ್ನು ಗೆದ್ದಿದ್ದರು. ಅವರು ಗೆದ್ದ 18 ಲಕ್ಷ ರೂಪಾಯಿಯನ್ನು ಶಕ್ತಿಧಾಮಕ್ಕೆ ನೀಡಿದ್ದರು. ಅಂದಹಾಗೆ ಈ ಶಕ್ತಿಧಾಮವನ್ನು ಪಾರ್ವತಮ್ಮ ರಾಜ್ ಕುಮಾರ್ ಅವರು ಅನಾಥ ಮಹಿಳೆಯರಿಗೆ ಹಾಗೂ ಹೆಣ್ಣು ಮಕ್ಕಳಿಗೆಂದು 1998 ರಲ್ಲಿ ಶಕ್ತಿ ಧಾಮವನ್ನು ಸ್ಥಾಪಿಸಿದ್ದರು. ಇದೀಗ ಈ ಶಕ್ತಿಧಾಮಕ್ಕೆ 24 ವರ್ಷ ತುಂಬಿದೆ. ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಅವರ ಆಶಯದಂತೆ ಆರಂಭವಾದ ಶಕ್ತಿಧಾಮ, ಸಾವಿರಾರು ಮಹಿಳೆಯರಿಗೆ ಆಶ್ರಯ ನೀಡಿದೆ.

ಅನಾಥ ಹಾಗೂ ದುರ್ಬಲ ಮಹಿಳೆಯರಿಗೆ ಸಮಾಜದಲ್ಲಿ ಸಶಕ್ತರನ್ನಾಗಿ ಮಾಡಲು ಈ ಶಕ್ತಿಧಾಮ ಸಹಾಯ ಮಾಡಿದೆ. ಮಹಿಳೆಯರ ಪುನರ್ವಸತಿ ಹಾಗೂ ಅಭಿವೃದ್ಧಿ ಕೇಂದ್ರದಲ್ಲಿ ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡಲಾಗುತ್ತಿತ್ತು. ವಿದ್ಯಾಭ್ಯಾಸದ ಜೊತೆಗೆ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತಿತ್ತು. ಸುಮಾರು 150 ಕ್ಕೂ ಅಧಿಕ ಹೆಣ್ಣುಮಕ್ಕಳು ಈ ಶಕ್ತಿಧಾಮದಲ್ಲಿದ್ದಾರೆ. ಇದೇ ಶಕ್ತಿಧಾಮದ ಹೆಣ್ಣು ಮಕ್ಕಳಿಗಾಗಿ ಒಂದು ಶಾಲೆಯನ್ನು ಆರಂಭಿಸಬೇಕು ಎಂಬುದು ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕನಸಾಗಿತ್ತು. ಈ ಕನಸನ್ನು ನನಸು ಮಾಡುವ ಹಾದಿಯಲ್ಲಿ ಇರುವಾಗಲೇ ಪುನೀತ್ ಅವರು ನಮ್ಮೆಲ್ಲರನ್ನು ಅಗಲಿದರು.

ಇದೀಗ ಪುನೀತ್ ಅವರ ಕನಸು ನನಸಾಗುವ ಸಂದರ್ಭ ಒದಗಿ ಬಂದಿದೆ. ಹೌದು ಮೈಸೂರಿನ ಶಕ್ತಿ ಧಾಮದಲ್ಲಿ ಶಾಲೆಯೊಂದು ತಲೆಯೆತ್ತಲಿದೆ. ಡಾಕ್ಟರ್ ರಾಜ್ ಕುಟುಂಬ ನೋಡಿಕೊಳ್ಳುತ್ತಿದ್ದ ಈ ಶಕ್ತಿ ಧಾಮದಲ್ಲಿ ಶಾಲೆಯೊಂದನ್ನು ನಿರ್ಮಾಣ ಮಾಡಲು ಇತ್ತೀಚೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಧನಸಹಾಯವನ್ನು ನೀಡುವುದಾಗಿ ಘೋಷಿಸಿದ್ದಾರೆ. ಹೌದು ಇತ್ತೀಚೆಗೆ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಶಕ್ತಿಧಾಮದಲ್ಲಿ ಶಾಲೆಗಳನ್ನು ನಿರ್ಮಿಸಲು ಹಣಕಾಸಿನ ಸಹಾಯ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಹೀಗಾಗಿ ಅತಿ ಶೀಘ್ರದಲ್ಲಿಯೇ ಅಪ್ಪು ಅವರ ಆಸೆಯಂತೆ ಮೈಸೂರಿನ ಶಕ್ತಿಧಾಮದಲ್ಲಿ ಶಾಲೆಯೊಂದು ನಿರ್ಮಾಣವಾಗಲಿದೆ. ಹಾಗೂ ಅತಿ ಶೀಘ್ರದಲ್ಲಿಯೇ ಶಾಲೆಯ ಕಟ್ಟಡ ಕಟ್ಟುವ ಕೆಲಸ ಆರಂಭವಾಗುವ ಸಾಧ್ಯತೆ ಇದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ನಟ ಶಿವರಾಜಕುಮಾರ್ ಶಕ್ತಿಧಾಮದಲ್ಲಿ ಶಾಲೆಯನ್ನು ನಿರ್ಮಾಣ ಮಾಡಲು ಸರ್ಕಾರ ಮುಂದೆ ಬಂದಿರುವುದು ನಿಜಕ್ಕೂ ಸಂತಸದ ಸಂಗತಿ. ನಮ್ಮ ಅಮ್ಮ ಪಾರ್ವತಮ್ಮ ರಾಜಕುಮಾರ್ ಶಕ್ತಿಧಾಮದ ಜಾಗವನ್ನು ಖರೀದಿ ಮಾಡಿದ್ದರು. ಈಗಾಗಲೇ ಶಕ್ತಿ ಧಾಮದಲ್ಲಿ ಜಾಗವಿದೆ. ಸರ್ಕಾರದ ಈ ನಿರ್ಧಾರ ಮತ್ತಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ನಮಗೆ ಶಕ್ತಿ ಕೊಟ್ಟಂತಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾಗೆ ಹೇಳಿಕೆ ನೀಡಿದ್ದಾರೆ. ಇನ್ನು ಅಪ್ಪು ಅವರ ನಿಧನದ ನಂತರ ಹಲವು ಬಾರಿ ಶಕ್ತಿ ಧಾಮಕ್ಕೆ ಶಿವರಾಜ್ ಕುಮಾರ್ ಮತ್ತು ಅವರ ಪತ್ನಿ ಭೇಟಿ ನೀಡಿದ್ದಾರೆ. ಅಲ್ಲಿನ ಮಕ್ಕಳೊಂದಿಗೆ ಆಟವಾಡಿ, ಅವರನ್ನು ಶೂಟಿಂಗ್ ಸ್ಪಾಟ್ ಗೂ ಶಿವರಾಜ್ ಕುಮಾರ್ ಕರೆದುಕೊಂಡು ಹೋಗಿದ್ದಾರೆ. ಇದಷ್ಟೇ ಅಲ್ಲದೆ ನಂದಿಬೆಟ್ಟಕ್ಕೆ ಈ ಮಕ್ಕಳನ್ನು ಪ್ರವಾಸಕ್ಕೆಂದು ಸ್ವತಹ ಶಿವರಾಜ್ ಕುಮಾರ್ ಮತ್ತು ಅವರ ಪತ್ನಿ ಕರೆದುಕೊಂಡು ಹೋಗಿ ಬಂದಿದ್ದಾರೆ.

%d bloggers like this: