ಪುನೀತ್ ರಾಜಕುಮಾರ್ ಅವರ ಜೇಮ್ಸ್ ಹಾಡಿನಲ್ಲಿ ಕಾಣಿಸಿಕೊಂಡರು ಮೂರು ನಟಿಯರು

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಅಂತಿಮ ಸಿನಿಮಾ ಜೇಮ್ಸ್ ಸಿನಿಮಾದ ಟ್ರೇಡ್ ಮಾರ್ಕ್ ಎಂಬ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ ಆಗಿ ಟ್ರೆಂಡಿಂಗ್ ನಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ. ಬಹದ್ದೂರ್, ಭರಾಟೆ, ಭರ್ಜರಿ ಅಂತಹ ಸೂಪರ್ ಹಿಟ್ ಚಿತ್ರಗಳನ್ನ ನಿರ್ದೇಶನ ಮಾಡಿದ ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಜೇಮ್ಸ್ ಸಿನಿಮಾ ಈಗಾಗಲೇ ಪೋಸ್ಟರ್ ಮತ್ತು ಟೀಸರ್ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಇದೀಗ ಜೇಮ್ಸ್ ಚಿತ್ರತಂಡ ಅಪ್ಪು ಅವರ ಅನುಪಸ್ಥಿತಿಯ ನೋವಿನಲ್ಲಿಯೂ ಕೂಡ ಜೇಮ್ಸ್ ಚಿತ್ರದ ಟ್ರೇಡ್ ಮಾರ್ಕ್ ಎಂಬ ಲಿರಿಕಲ್ ಹಾಡೊಂದನ್ನ ರಿಲೀಸ್ ಮಾಡಿದ್ದಾರೆ.

ಈ ಟ್ರೇಡ್ ಮಾರ್ಕ್ ಎಂಬ ಸಾಂಗ್ ಇದೀಗ ಡಿಜಿಟಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಅಚ್ಚರಿ ಅಂದರೆ ಈ ಟ್ರೇಡ್ ಮಾರ್ಕ್ ಸಾಂಗ್ ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್, ಆಶಿಕಾ ರಂಗನಾಥ್ ಮತ್ತು ಶ್ರೀ ಲೀಲಾ ಈ ಮೂವರು ನಾಯಕಿಯರು ಕೂಡ ಬಿಂದಾಸ್ ಸ್ಟೆಪ್ ಹಾಕುವ ಮೂಲಕ ಕಾಣಿಸಿಕೊಂಡಿದ್ದಾರೆ. ಜೇಮ್ಸ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಜೋಡಿಯಾಗಿ ನಟಿ ಪ್ರಿಯಾ ಆನಂದ್ ಅವರು ನಟಿಸಿದ್ದಾರೆ. ಈ ಹಿಂದೆ ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನದಲ್ಲಿ ಮೂಡಿಬಂದ ರಾಜಕುಮಾರ ಚಿತ್ರದಲ್ಲಿ ಜೊತೆಯಾಗಿ ನಟಿಸಿ ಸೂಪರ್ ಹಿಟ್ ಜೋಡಿ ಎಂದೆನಿಸಿಕೊಂಡಿತು. ಹೀಗಾಗಿ ಜೇಮ್ಸ್ ಸಿನಿಮಾದಲ್ಲಿ ಕೂಡ ಅಪ್ಪು ಅವರಿಗೆ ಜೋಡಿಯಾಗಿ ಪ್ರಿಯಾ ಆನಂದ್ ಅವರನ್ನೇ ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದೀಗ ಟ್ರೇಡ್ ಮಾರ್ಕ್ ಸಾಂಗ್ ನಲ್ಲಿ ರಚಿತಾ ರಾಮ್, ಶ್ರೀ ಲೀಲಾ, ಆಶಿಕಾ ರಂಗನಾಥ್ ಈ ಮೂವರು ನಾಯಕಿಯರು ಕಾಣಿಸಿಕೊಂಡಿರುವುದು ಸಿನಿ ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದೆ.

ಈ ಬಗ್ಗೆ ನಿರ್ದೇಶಕರು ಹೆಚ್ಚು ಗುಟ್ಟು ಬಿಟ್ಟು ಕೊಡದೇ ಸಿನಿಮಾ ನೋಡಿ ನಿಜಕ್ಕೂ ಸರ್ಪ್ರೈಸ್ ಇದೆ ಎಂದು ತಿಳಿಸಿದ್ದಾರೆ. ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರ ಅದ್ದೂರಿ ನಿರ್ಮಾಣದಲ್ಲಿ ತಯಾರಾಗಿರುವ ಜೇಮ್ಸ್ ಸಿನಿಮಾದ ಇದೇ ಮಾರ್ಚ್ 17ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಜೇಮ್ಸ್ ಸಿನಿಮಾದ ಸ್ಯಾಟಲೈಟ್ಸ್ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆಯಂತೆ. ಇನ್ನು ಜೇಮ್ಸ್ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದು, ನಿರ್ದೇಶಕ ಚೇತನ್ ಕುಮಾರ್ ಅವರೇ ಸಾಹಿತ್ಯ ಬರೆದಿದ್ದಾರೆ. ಇನ್ನು ಜೇಮ್ಸ್ ಚಿತ್ರದ ಪಾತ್ರ ವರ್ಗದಲ್ಲಿ ಅನು ಪ್ರಭಾಕರ್, ಮೆಕಾ ಶ್ರೀಕಾಂತ್, ಶರತ್ ಕುಮಾರ್, ಹರೀಶ್ ಪರೇದಿ, ಹಾಸ್ಯ ನಟ ಸಾಧುಕೋಕಿಲ, ತಿಲಕ್ ಶೇಖರ್, ಮುಕೇಶ್ ರಿಷಿ, ಆದಿತ್ಯ ಮೆನನ್, ರಂಗಾಯಣ ರಘು, ಅವಿನಾಶ್, ಚಿಕ್ಕಣ್ಣ, ನಾನ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಅಂತಹ ನಟರು ಬಣ್ಣ ಹಚ್ಚಿದ್ದಾರೆ.

%d bloggers like this: