ಅಪ್ಪು ಅವರನ್ನು ಆರಾಧಿಸಲು ಬರುತ್ತಿವೆ 5 ಹೆಲಿಕಾಪ್ಟರ್ ಗಳು

ಜೇಮ್ಸ್ ಚಿತ್ರದ ಬಿಡುಗಡೆಗೆ ಇನ್ನೇನು ಕೌಂಟ್ ಡೌನ್ ಶುರುವಾಗಿದೆ. ಪುನೀತ್ ಅವರ ಕೊನೆಯ ಸಿನಿಮಾವನ್ನು ಅವರ ಹುಟ್ಟುಹಬ್ಬದಂದು ಅದ್ದೂರಿಯಾಗಿ ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ಪಣತೊಟ್ಟಿತ್ತು. ಈಗ ಆ ಸಮಯ ಬಂದಾಗಿದೆ. ಮಾರ್ಚ್ ಬಂದಾಗಿದೆ ಎಲ್ಲೆಲ್ಲೂ ಪುನೀತ್ ರಾಜಕುಮಾರ್ ಅಭಿನಯದ ಚಿತ್ರದ ಬಗ್ಗೆ ಕ್ರೇಜ್ ಹೆಚ್ಚಾಗುತ್ತಿದೆ. ಜೇಮ್ಸ್ ಚಿತ್ರದ ಟೀಸರ್ ಬಿಡುಗಡೆಯಾಗುವುದಕ್ಕೂ ಮುನ್ನ ನಿರ್ದೇಶಕ ಬಹದ್ದೂರ್ ಚೇತನ್ ಅವರು ಮಾರ್ಚ್ 17 ರಂದು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದು ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲೂ ಜೇಮ್ಸ್ ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದರು. ಜೇಮ್ಸ್ ಚಿತ್ರದ ರಿಲೀಸ್ ಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇರುವುದರಿಂದ, ಐದು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು ಚಿತ್ರತಂಡವು ಭರ್ಜರಿ ತಯಾರಿ ನಡೆಸುತ್ತಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಚಿತ್ರವನ್ನು ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಜೇಮ್ಸ್ ಚಿತ್ರದ ಫಸ್ಟ್ ಲುಕ್ ಹಾಗೂ ಟೀಸರ್ ನಿಂದಲೇ ಥ್ರಿಲ್ ಆಗಿರುವ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು, ಸಿನಿಮಾ ನೋಡಲು ಕಾದು ಕುಳಿತಿದ್ದಾರೆ. ಜೇಮ್ಸ್ ಚಿತ್ರವು ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರವಾದ್ದರಿಂದ ಈ ಚಿತ್ರದ ಮೇಲೆ ನಿರೀಕ್ಷೆಗಳು ನೂರೆಂಟಿವೆ. ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದು ಜೇಮ್ಸ್ ಬಡುಗಡೆಯಾಗುತ್ತಿರುವುದರಿಂದ ಅಪ್ಪು ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಒಟ್ಟು 15 ದೇಶಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಈ ಮೂಲಕ ಪುನೀತ್ ಅವರ ಕೊನೆಯ ಸಿನಿಮಾವನ್ನು ಪ್ರಪಂಚದ ಮೂಲೆ ಮೂಲೆಗೂ ತಲುಪಿಸುವುದು ಜೇಮ್ಸ್ ಚಿತ್ರತಂಡದ ಉದ್ದೇಶ.

ಜೇಮ್ಸ್ ಸಿನಿಮಾ ಜರ್ಮನಿ ಆಸ್ಟ್ರೇಲಿಯಾ, ಪೋಲ್ಯಾಂಡ್ ನೆದರ್ಲ್ಯಾಂಡ್, ಭಾರತ ಸೇರಿದಂತೆ 15 ದೇಶಗಳಲ್ಲಿ ರಿಲೀಸ್ ಆಗುತ್ತಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು. ಜೇಮ್ಸ್ ಚಿತ್ರದ ಅಬ್ಬರ ಬಿಡುಗಡೆಗೂ ಮುನ್ನವೇ ಸಮುದ್ರದ ಅಲೆಯಂತೆ ಸಪ್ಪಳ ಮಾಡುತ್ತಿದೆ. ಜೇಮ್ಸ್ ಚಿತ್ರದ ತೂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಿನಿಮಾ ವಿತರಕರು ಹೆಚ್ಚಿನ ಹಣ ನೀಡಿ ಜೇಮ್ಸ್ ಸಿನಿಮಾ ದಕ್ಕಿಸಿಕೊಳ್ಳಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಜೇಮ್ಸ್ ಸಿನೆಮಾ ಯಾವೆಲ್ಲಾ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎನ್ನುವ ಸಂಪೂರ್ಣ ಮಾಹಿತಿ ಇತ್ತೀಚಿಗೆ ಬಿಡುಗಡೆಯಾಗಿದೆ. ಹೀಗಾಗಿ ಜೇಮ್ಸ್ ಚಿತ್ರಕ್ಕೆ ಎಲ್ಲಿಲ್ಲದ ಬೇಡಿಕೆ ಬಂದುಬಿಟ್ಟಿದೆ. ಮಾರ್ಚ್ 17 ಕ್ಕೆ ಜೇಮ್ಸ್ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ವಿತರಕರು ಸಿನಿಮಾಗಾಗಿ ಮುಗಿಬಿದ್ದಿದ್ದಾರೆ.

ಜೇಮ್ಸ್ ತಂಡ ಈಗಾಗಲೇ ಮೊದಲ ಹಂತದಲ್ಲಿ ಸುಮಾರು 130 ಕ್ಕೂ ಹೆಚ್ಚು ಚಿತ್ರಮಂದಿರಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಮಲ್ಟಿಫ್ಲೆಕ್ಸ್ ಗಳನ್ನು ಬಿಟ್ಟು ಕೇವಲ ಸಿಂಗಲ್ ಸ್ಕ್ರೀನ್ ನಲ್ಲಿಯೇ 130 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಜೇಮ್ಸ್ ಬಿಡುಗಡೆಯಾಗಲಿದೆ. ಬೆಂಗಳೂರು ಸೇರಿದಂತೆ ಹೊಸಪೇಟೆ, ಬಳ್ಳಾರಿ, ಚಿತ್ರದುರ್ಗ, ಉತ್ತರ ಕರ್ನಾಟಕ, ಶಿವಮೊಗ್ಗ ಸೇರಿದಂತೆ ಎಲ್ಲ ತಾಲೂಕುಗಳಲ್ಲೂ ಜೇಮ್ಸ್ ಚಿತ್ರ ರಿಲೀಸ್ ಆಗಲಿದೆ. ಪವರ್ ಸ್ಟಾರ್ ಅಭಿಮಾನಿಗಳಿಗೆ ಜೇಮ್ಸ್ ಒಂದು ಪ್ರತಿಷ್ಠೆಯ ಸಿನಿಮಾ ಎನ್ನಬಹುದು. ಪುನೀತ್ ಅಭಿನಯದ ಕೊನೆಯ ಸಿನಿಮಾವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಬೇಕು ಎಂದು ಪುನೀತ್ ಅಭಿಮಾನಿಗಳು ಪಣತೊಟ್ಟಿದ್ದಾರೆ. ಕರ್ನಾಟಕದಲ್ಲಿರುವ ಪುನೀತ್ ಅಭಿಮಾನಿಗಳು ಚಿತ್ರ ಬಿಡುಗಡೆಯ ದಿನ ಜೇಮ್ಸ್ ಜಾತ್ರೆ ಮಾಡುವುದಕ್ಕೆ ಸಿದ್ದರಾಗಿದ್ದಾರೆ.

ಬಿಡುಗಡೆಯ ದಿನ ಪುನೀತ್ ಅವರ ಕಟ್ ಔಟ್ ಹಾಗೂ ಸಮಾಧಿಯ ಬಳಿ ಪುಷ್ಪಾಲಂಕಾರ, ಪಟಾಕಿ, ಮೆರವಣಿಗೆ ಹೀಗೆ ಅಭಿಮಾನಿಗಳು ಖರ್ಚು ಮಾಡುತ್ತಿರುವ ಹಣದ ಮೊತ್ತವನ್ನು ಕೇಳಿದರೆ ನೀವು ಶಾಕ್ ಆಗುವುದು ಖಂಡಿತ. ಹೌದು ಎರಡು ಹೆಲಿಕ್ಯಾಪ್ಟರ್ ನಿಂದ ಹಿಡಿದು ಚಿತ್ರಮಂದಿರದ ಮುಂದೆ ಸೆಲೆಬ್ರೇಶನ್, ಮೆರವಣಿಗೆ, ಊಟದ ವ್ಯವಸ್ಥೆ ಎಲ್ಲದರ ಖರ್ಚನ್ನು ಪುನೀತ್ ಅಭಿಮಾನಿಗಳೆ ನಿಭಾಯಿಸುತ್ತಿದ್ದಾರೆ. ಪುನೀತ್ ಅಭಿಮಾನಿಗಳು ಜೇಮ್ಸ್ ಸಿನಿಮಾ ಬಿಡುಗಡೆ ಹಾಗೂ ಅಪ್ಪು ಅವರ ಹುಟ್ಟುಹಬ್ಬದ ಅಂಗವಾಗಿ ಎರಡು ಹೆಲಿಕಾಪ್ಟರ್ ಗಳನ್ನು ಬುಕ್ ಮಾಡಿದ್ದಾರೆ. ಈ ಹೆಲಿಕ್ಯಾಪ್ಟರ್ ಮೂಲಕ ವೀರೇಶ್ ಚಿತ್ರಮಂದಿರ, ಪ್ರಸನ್ನ ಹಾಗೂ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ವೀರೇಶ್ ಹಾಗೂ ಪ್ರಸನ್ನ ಚಿತ್ರಮಂದಿರಕ್ಕೆ ಒಂದು ಹೆಲಿಕಾಪ್ಟರ್ ಹಾಗೂ ಕಂಠೀರವ ಸ್ಟುಡಿಯೋಕ್ಕೆ ಮತ್ತೊಂದು ಹೆಲಿಕ್ಯಾಪ್ಟರ್ ಮೂಲಕ ಹೂವಿನ ಮಳೆಯನ್ನೇ ಸುರಿಸಲಿದ್ದಾರೆ.

ಈ ಎರಡು ಚಾಪರ್ ಗಳಿಗೆ ಒಟ್ಟು ಏಳರಿಂದ ಎಂಟು ಲಕ್ಷ ರೂಪಾಯಿ ಹಣವನ್ನು ಅಭಿಮಾನಿಗಳು ಖರ್ಚು ಮಾಡುತ್ತಿದ್ದಾರೆ. ಕರ್ನಾಟಕದಾದ್ಯಂತ ಪ್ಲೆಕ್ಸ್ ಹಾಗೂ ಪೋಸ್ಟರ್ ಗಳಿಗೆ 8 ಲಕ್ಷ ಖರ್ಚಾಗಿದೆ. ಇದರಲ್ಲಿ 3000 ದಷ್ಟು ಹ್ಯಾಪಿ ಬರ್ತಡೆ ಅಪ್ಪು ಎನ್ನುವ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಹಾಗೂ ಚಿತ್ರಮಂದಿರಗಳ ಮುಂದೆ 4 ಕಡೆ ಪ್ರತಿ ಶೋಗಳಿಗೂ ಪಟಾಕಿ ಸಿಡಿಸಲು ನಿರ್ಧರಿಸಿದ್ದಾರೆ. ಅಭಿಮಾನಿಗಳ ಲೆಕ್ಕಾಚಾರದ ಪ್ರಕಾರ ಪಟಾಕಿಗೆ ಎರಡು ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಈಗಾಗಲೇ ಪಟಾಕಿಗಳನ್ನು ಖರೀದಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ 4 ದಿನವೂ ವೀರೇಶ್ ಚಿತ್ರಮಂದಿರದಲ್ಲಿ ಸಿಹಿ ಹಂಚಲಾಗುತ್ತದೆ ಮತ್ತು ಕೆಲವೆಡೆ ಊಟದ ವ್ಯವಸ್ಥೆ ಮಾಡಲಾಗಿದೆ. ಮಾರ್ಚ್ 20 ರಂದು ಭಾನುವಾರ ಬೆಂಗಳೂರಿನ ರಾಜಾಜಿನಗರದ ಆರನೇ ಹಂತದಿಂದ ವೀರೇಶ್ ಚಿತ್ರಮಂದಿರದವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಂಡಿದ್ದಾರೆ.

ಹೂವಿನ ಪಲ್ಲಕ್ಕಿ ಮೂಲಕ ಅಪ್ಪು ಭಾವಚಿತ್ರವನ್ನು ಹಿಡಿದು ಸಾವಿರಾರು ಅಭಿಮಾನಿಗಳು ಭಾಗವಹಿಸಲಿದ್ದಾರೆ. ಮೆರವಣಿಗೆ ಹಾದು ಹೋಗುವ ದಾರಿಯಲ್ಲಿ ಟೋಲ್ ಗೇಟ್ ಬಳಿ 10 ಜೆಸಿಬಿಗಳ ಮೂಲಕ ಅಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಅಪ್ಪು ಅವರ ಕಟೌಟ್ ಎಲ್ಲದಕ್ಕಿಂತ ಎತ್ತರದಲ್ಲಿರುತ್ತದೆ. ಈ ರೀತಿಯಾಗಿ ಅಪ್ಪು ಅಭಿಮಾನಿಗಳು ಜೇಮ್ಸ್ ಜಾತ್ರೆಯನ್ನು ಪ್ಲಾನ್ ಮಾಡಿಕೊಂಡಿದ್ದಾರೆ. ಕಡಿಮೆ ಅಂದರೂ ಈ ಎಲ್ಲಾ ಕಾರ್ಯಕ್ರಮಗಳಿಗೆ 30 ರಿಂದ 35 ಲಕ್ಷ ರೂಪಾಯಿಯನ್ನು ಅಭಿಮಾನಿಗಳು ಖರ್ಚು ಮಾಡುತ್ತಿದ್ದಾರೆ. ಈ ಹಣವನ್ನು ಯಾರಿಂದಲೂ ಸಂಗ್ರಹ ಮಾಡದೆ ಅಭಿಮಾನಿಗಳೇ ಕೂಡಿಸಿ ಖರ್ಚು ಮಾಡುತ್ತಿದ್ದಾರೆ ಎಂದು ಕೇಳಿಬಂದಿದೆ. ಅಪ್ಪು ಅಭಿಮಾನಿಗಳ ಈ ಪ್ರೀತಿ ನಿಜಕ್ಕೂ ಎಲ್ಲರ ಕಣ್ತುಂಬಿ ಬರುವಂತಿದೆ.

%d bloggers like this: