ಅಪ್ಪು ಇನ್ಮುಂದೆ ‘ಡಾಕ್ಟರ್ ಪುನೀತ್ ರಾಜ್‍ಕುಮಾರ್’

ನಮ್ಮೆಲ್ಲರ ನೆಚ್ಚಿನ ನಟ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ವಿಶ್ವವಿದ್ಯಾಲಯವೊಂದು ಗೌರವ ಡಾಕ್ಟರೇಟ್ ನೀಡಲಾಗುವುದು ಎಂದು ಘೋಷಣೆ ಮಾಡಿದೆ. ಹೌದು ಪುನೀತ್ ನಮ್ಮೆಲ್ಲರಲ್ಲೂ ಅಜರಾಮರ. ನಮ್ಮೆಲ್ಲರಿಗಾಗಿ ಅವರು ಹಲವಾರು ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಕೇವಲ ನಟನೆಯಿಂದ ಅಷ್ಟೇ ಅಲ್ಲದೆ ಮುಗ್ಧತೆ, ಒಳ್ಳೆಯ ಮನಸ್ಸು, ಗುಣ, ಉತ್ತಮ ನಡವಳಿಕೆಯಿಂದ ರೀಲ್ ಲೈಫ್ನಲ್ಲಿ ಮಾತ್ರವಲ್ಲದೆ ರಿಯಲ್ ಲೈಫ್ ನಲ್ಲೂ ಹೀರೋ ಎನಿಸಿಕೊಂಡಿದ್ದಾರೆ. ಕನ್ನಡದ ಮೇರುನಟ ಡಾಕ್ಟರ್ ರಾಜಕುಮಾರ್ ಅವರ ಪುತ್ರರಾದರೂ ಸ್ವಲ್ಪವೂ ಕೂಡ ಸ್ಟಾರ್ ನಟ ಎಂಬ ಅಹಂಕಾರವಿಲ್ಲದ, ಮುಗ್ದ ಮನಸ್ಸಿನ ವ್ಯಕ್ತಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ತುಂಬಿದ ಕೊಡ ತುಳುಕುವುದಿಲ್ಲ ಎನ್ನುವ ಹಾಗೆ ಒಳ್ಳೆಯ ನಡವಳಿಕೆ, ಒಳ್ಳೆಯ ಮನಸ್ಸು, ತಿಳುವಳಿಕೆಯುಳ್ಳ ವ್ಯಕ್ತಿಗಳು ಎಂದಿಗೂ ಅಹಂ ತೋರಿಸುವುದಿಲ್ಲ.

ಇಂತಹ ವ್ಯಕ್ತಿಗಳಿಗೆ ಉದಾಹರಣೆ ಎಂದರೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಬದುಕಿದ್ದಾಗ ಅವರು ಅನಾಥಾಲಯಗಳಿಗೆ, ವೃದ್ಧಾಶ್ರಮಗಳಿಗೆ, ಬಡವರಿಗೆ ಅನಾಥ ಮಕ್ಕಳಿಗೆ ಮಾಡಿದ ಸಹಾಯಗಳಷ್ಟೋ ಲೆಕ್ಕವಿಲ್ಲ. ಇದುವರೆಗೂ ತಾವು ಮಾಡಿರುವ ಸಹಾಯವನ್ನು ಒಂದು ಕಡೆಯೂ ಹೇಳಿಕೊಳ್ಳದ ಅಪರೂಪದ ವ್ಯಕ್ತಿ ನಮ್ಮ ಅಪ್ಪು ಅವರು. ಅಪ್ಪು ಅವರು ನಮ್ಮೆಲ್ಲರನ್ನು ಅಗಲಿ ಹಲವು ತಿಂಗಳುಗಳಾದರೂ ಕರುನಾಡಿನಲ್ಲಿ ಇನ್ನೂ ಶೋಕ ಆವರಿಸಿದೆ. ಇದುವರೆಗೂ ಅವರು ನಮ್ಮ ಜೊತೆ ಇಲ್ಲ ಎಂದು ನಂಬಲಾಗುತ್ತಿಲ್ಲ. ಇದೇ ಮಾರ್ಚ್ ನಲ್ಲಿ ಅವರ ಹುಟ್ಟುಹಬ್ಬದ ದಿನದಂದು ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದು ಪುನೀತ್ ರಾಜಕುಮಾರ್ ಅವರಿಗೆ ಗೌರವಾರ್ಥವಾಗಿ ಮರಣೋತ್ತರ ಡಾಕ್ಟರೇಟ್ ಪ್ರದಾನ ಮಾಡಲು ನಿರ್ಧರಿಸಿದೆ.

ಹೌದು ಪುನೀತ್ ರಾಜ್ ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊಫೆಸರ್ ಹೇಮಂತ್ ಕುಮಾರ್ ಘೋಷಣೆ ಮಾಡಿದ್ದಾರೆ. ಈ ಕುರಿತು ಪುನೀತ್ ಅವರ ಪತ್ನಿ ಅಶ್ವಿನಿ ಹಾಗೂ ಕುಟುಂಬವನ್ನು ಸಂಪರ್ಕಿಸಲಾಗಿತ್ತು. ಅಶ್ವಿನಿ ಅವರು ಘಟಿಕೋತ್ಸವದ ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ. ಮಾರ್ಚ್ 22ನೇ ತಾರೀಕು ಮೈಸೂರು ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವದ ಕಾರ್ಯಕ್ರಮ ಜರುಗಲಿದೆ. ಘಟಿಕೋತ್ಸವದಂದು 28581 ಅಭ್ಯರ್ಥಿಗಳಿಗೆ ಪದವಿ ಪ್ರದಾನ, 5677 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುವುದು. ವಿವಿಧ ಅಭ್ಯರ್ಥಿಗಳು ಚಿನ್ನದ ಪದಕ ಹಾಗೂ ಬಹುಮಾನಗಳನ್ನು ಪಡೆಯಲಿದ್ದಾರೆ.

ಈ ಕಾರ್ಯಕ್ರಮವನ್ನು ಎಸ್.ಸಿ ಶರ್ಮ ಅವರು ನಡೆಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ಹೇಮಂತ್ ಕುಮಾರ್ ಹೇಳಿದ್ದಾರೆ. ಮತ್ತು ಅದೇ ದಿನ ಮೂವರು ಮಹನೀಯರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು. ಹಿರಿಯ ವಿಜ್ಞಾನಿ ಡಾಕ್ಟರ್ ವಿ.ಎಸ್ ಅತ್ರೆ ಮತ್ತು ಜನಪದ ಗಾಯಕ ಮಳವಳ್ಳಿ ಮಹಾದೇವಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್ ಹಾಗೂ ನಮ್ಮ ನೆಚ್ಚಿನ ನಾಯಕ ನಟ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಡಾಕ್ಟರೇಟ್ ನೀಡಲಾಗುತ್ತಿದೆ. ಮಗುವಾಗಿ ಆಟವಾಡುವ ವಯಸ್ಸಿನಲ್ಲಿ ನಟಿಸಿ, ನ್ಯಾಷನಲ್ ಅವಾರ್ಡ್ ಗಳಿಸಿ, ದುಡ್ಡು ಮಾಡುವ ವಯಸ್ಸಿನಲ್ಲಿ ದಾನ ಮಾಡಿ, ಬದುಕಿ ಬಾಳಬೇಕಾದ ವಯಸ್ಸಿನಲ್ಲಿ ನಮ್ಮೆಲ್ಲರನ್ನು ಅಗಲಿರುವ ಪುನೀತ್, ಇಷ್ಟು ಸಣ್ಣ ವಯಸ್ಸಿಗೆ ಡಾಕ್ಟರೇಟ್ ಪಡೆಯುತ್ತಿರುವುದು ಹೆಮ್ಮೆಯ ವಿಷಯ.

%d bloggers like this: