ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ ನಮ್ಮಲ್ಲಿಯೇ ಇದೇ ನೋಡಿ

ಸ್ವಚ್ಛತೆ ಎಂಬುದು ಒಂದು ರಾಜ್ಯದ ಮತ್ತು ಒಂದು ರಾಷ್ಟ್ರದ ಬೆಳವಣಿಗೆಯನ್ನು ಸಹ ಸೂಚಿಸುವಷ್ಟು ಮಹತ್ವವನ್ನು ಪಡೆಯುವಂತಹ ಒಂದು ವಿಷಯ. ಅಲ್ಲಿ ಒಂದು ಹಳ್ಳಿ. ಆ ಹಳ್ಳಿಯ ಜನರಿಗೆ ಸ್ವಚ್ಛತೆಯೇ ಧ್ಯೇಯ. ಆ ಗ್ರಾಮ ಕೇವಲ ಸ್ವಚ್ಛ ಪ್ರದೇಶ ಅಷ್ಟೇ ಅಲ್ಲ ಜೊತೆಗೆ ಒಂದು ಪ್ರವಾಸಿ ತಾಣವೂ ಹೌದು‌. ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಹೌದು ಅಷ್ಟಕ್ಕೂ ಆ ಹಳ್ಳಿ ಯಾವುದು ಎಲ್ಲಿದೆ ಎಂಬುದನ್ನು ತಿಳಿಯುವ ಆಸೆ ಮೂಡದೆ ಇರದು. ಆ ಹಳ್ಳಿ ಮೇಘಾಲಯದ ಮೌಲಿನಾಂಗ್. ಹೌದು ನಮ್ಮ ಭಾರತದ ಈ ಹಳ್ಳಿ ಈಗ ಇಡೀ ಏಷ್ಯಾ ಖಂಡದಲ್ಲಿಯೇ ಅತ್ಯಂತ ಸ್ವಚ್ಛ ಗ್ರಾಮ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಇದನ್ನು ದೇವರ ಸ್ವಂತ ಉದ್ಯಾನವನ ಎಂತಲೂ ಕೂಡ ಕರೆಯಲಾಗುತ್ತದೆ. ಇದೊಂದು ನಿಸರ್ಗ ಸುಂದರವಾದ ಪ್ರವಾಸಿತಾಣವೂ ಕೂಡ. ಇದರ ಬಗ್ಗೆ ನೀವು ಕೇಳಿದರೆ ಆ ಗ್ರಾಮದ ಬಗ್ಗೆ ತಿಳಿದುಕೊಂಡರೆ ಖಂಡಿತವಾಗಿಯೂ ನಿಮಗೆ ಅಲ್ಲಿ ಹೋಗಿ ಒಮ್ಮೆ ಭೇಟಿ ನೀಡಲೇಬೇಕು ಎಂದೆನಿಸುತ್ತದೆ. ಈ ಪ್ರದೇಶಕ್ಕೆ ಭೇಟಿ ನೀಡಲು ಮಳೆಗಾಲ ಅತ್ಯಂತ ಸೂಕ್ತ ಸಮಯ. ಸದಾ ಮಳೆ ಹೊಯ್ಯುತ್ತಿದ್ದರೂ ಆ ಸಮಯದಲ್ಲಿ ಸಿಗುವ ಪ್ರಕೃತಿ ರಮಣೀಯತೆ ಬೇರೆ ಕಾಲದಲ್ಲಿ ಅಷ್ಟಾಗಿ ಸಿಗುವುದಿಲ್ಲ.

ಇಲ್ಲಿನ ಜನ ಸ್ವಚ್ಛತೆ ತಮ್ಮ ಧರ್ಮ ಎಂದು ಪಾಲಿಸುತ್ತಾರೆ. 2007ನೇ ಇಸವಿಯಲ್ಲಿಯೇ ಇಲ್ಲಿನ ಪ್ರತಿಯೊಂದು ಮನೆಗಳು ಶೌಚಾಲಯವನ್ನು ಹೊಂದಿದ್ದು, ಪ್ರತಿ ಮನೆಯ ಎದುರಿಗೆ ಬೀದರನಿಂದ ತಯಾರಿಸಲ್ಪಟ್ಟ ಕಸದಬುಟ್ಟಿಗಳಿರುತ್ತವೆ. ಮನೆಯ ಮುಂದೆ ಹಿಂದೆ ಏನೇ ಕಸಕಡ್ಡಿಗಳು ಬಿದ್ದರೂ ಅವುಗಳನ್ನು ಅಲ್ಲಿಯೇ ತಂದು ಹಾಕುವುದು ಅವರ ಅಭ್ಯಾಸ. ಇಲ್ಲಿ ಪ್ಲಾಸ್ಟಿಕ್ ಮತ್ತು ಧೂಮಪಾನವನ್ನೂ ನಿಷೇಧಿಸಲಾಗಿದೆ. ಇಲ್ಲಿನ ಜನರ ಸ್ವಚ್ಛತೆ ಪ್ರೇಮ ನಿಜಕ್ಕೂ ಶ್ಲಾಘನೀಯ ಮತ್ತು ಅನುಕರಣೀಯ. ಅವರು ಸ್ವಯಂಪ್ರೇರಿತರಾಗಿ ತಮ್ಮ ದಾರಿಗಳನ್ನು ರಸ್ತೆಗಳನ್ನು ಸ್ವಚ್ಛಗೊಳಿಸುತ್ತಾರೆ ಜೊತೆಗೆ ರಸ್ತೆಯ ಅಕ್ಕಪಕ್ಕಗಳಲ್ಲಿ ಸತತವಾಗಿ ಗಿಡಗಳನ್ನು ನೆಡುತ್ತಲೇ ಇರುತ್ತಾರೆ. ಅಲ್ಲದೆ ಇಲ್ಲಿನ ಜನ ಅತಿಥಿ ಸತ್ಕಾರಕ್ಕೆ ಹೆಸರುವಾಸಿ. ಇಷ್ಟೆಲ್ಲಾ ವಿಶೇಷ ಅಂಶಗಳಿರುವ ಈ ಗ್ರಾಮಕ್ಕೆ ಸಾಧ್ಯವಾದರೆ ಬೇಟಿ ನೀಡುವ ಪ್ರಯತ್ನ ಮಾಡಿ.

%d bloggers like this: