ಬಡವರಿಗೆ ಉಚಿತ ವಾಹನ ನೀಡಿದ ದಕ್ಷಿಣ ಭಾರತದ ಸ್ಟಾರ್ ನಟ

ದಾನ ಧರ್ಮ ಅನ್ನೋದು ಕೆಲವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಶ್ರೀಮಂತ ಕುಟುಂಬದ ಹಿನ್ನೆಲೆಯಿಂದ ಬಂದಂತಹ ಒಂದಷ್ಟು ಮಂದಿ ತಾವು ಉನ್ನತ ಸ್ಥಾನದಲ್ಲಿ ಇದ್ದರೆ ಅವರು ಉದಾರತೆಯ ಗುಣ ಹೊಂದಿದ್ದರೆ ಅವರು ಸಮಾಜದಲ್ಲಿ ಇರುವ ಬಡ ಜನರಿಗೆ ಸಹಾಯ ಮಾಡಲು ಮುಂದಾಗುತ್ತಾರೆ. ಇನ್ನ ಕೆಲವ್ರು ವ್ಯಕ್ತಿಗಳು ತಾವು ಸ್ವತಃ ಕಷ್ಟಗಳನ್ನ ಅನುಭವಿಸಿ ಬಡತನದ ಬೇಗೆಯಲ್ಲಿ ಬೆಂದು ತದ ನಂತರ ಶ್ರಮ ಪಟ್ಟು ಬೆಳೆದು ಸಮಾಜದಲ್ಲಿ ಒಬ್ಬ ಯಶಸ್ವಿ ವ್ಯಕ್ತಿಯಾದ ನಂತರ ತನ್ನಂತೆ ಕಷ್ಟ ಪಡುತ್ತಾ ಜೀವನ ನಡೆಸುವ ಬಡ ಬಗ್ಗರಿಗೆ ಅವರು ಮುಲಾಜಿಲ್ಲದೆ ನೆರವಾಗುತ್ತಾರೆ. ಯಾಕಂದ್ರೆ ಅವರಿಗೆ ಆ ಬಡತನದ ಬವಣೆ ಚೆನ್ನಾಗಿ ತಿಳಿದಿರುತ್ತದೆ. ಇದೀಗ ತಮಿಳಿನ ಸ್ಟಾರ್ ನಟರಾದ ಸೂರ್ಯ ಅವರು ಕೂಡ ಇದೀಗ ಅಂಥದ್ದೇ ಮಾನವೀಯ ಕಾರ್ಯವನ್ನ ಮಾಡಿದ್ದಾರೆ.ಹೌದು ತಮಿಳುನಾಡಿನ ಪೊಲೀಸರು ಬೀದಿ ಬದಿಯಲ್ಲಿ ವಾಸಿಸುವ ನಿರಾಶ್ರಿತರು, ನಿರ್ಗತಿಕರ ನೆರವಿಗಾಗಿ ಕಾವಲ್ ಕರಂಗಲ್ ಎಂಬ ಮಹತ್ವಾಕಾಂಕ್ಷೆ ಯೋಜನೆಯೊಂದನ್ನ ಆರಂಭಿಸಿದ್ದಾರೆ.

ಈ ಯೋಜನೆಗೆ ನಟ ಸೂರ್ಯ ಅವರು ತಮ್ಮ ಟುಡಿ ಎಂಟರ್ಟೈನ್ ಮೆಂಟ್ ನಿರ್ಮಾಣ ಸಂಸ್ಥೆಯ ಮೂಲಕ ಆರು ಲಕ್ಷ ರೂಪಾಯಿ ಮೌಲ್ಯದ ಮಾರುತಿ ಸುಜುಕಿ ಇಕೋ ವ್ಯಾನ್ ಅನ್ನ ಉಚಿತವಾಗಿ ನೀಡಿದ್ದಾರೆ. ಚೆನ್ನೈ ಕಾರ್ಪೋರೇಶನ್ ಕಮೀಶನರ್ ಆಗಿರುವ ಗಗನ್ ದೀಪ್ ಸಿಂಗ್, ಚೆನ್ನೈ ಪೊಲೀಸ್ ಕಮೀಶನರ್ ಶಂಕರ್ ಜಿವಾಲ್ ಮತ್ತು ಶರಣ್ಯ ರಾಜಶೇಖರ್ ಅವರು ನಟ ಸೂರ್ಯ ನೀಡಿದ ವಾಹನಕ್ಕೆ ಚಾಲನೆ ನೀಡಿದ್ದಾರೆ. ಈ ಕಾವಲ್ ಕರಂಗಲ್ ಎಂಬ ಯೋಜನೆಯನ್ನು ಆರಂಭಿಸಿ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದೆಯಂತೆ. ಈ ಸಂಧರ್ಭದಲ್ಲಿ ನಟ ಸೂರ್ಯ ಅವರು ಚೆನ್ನೈ ಪೊಲೀಸರ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ನಟ ಸೂರ್ಯ ಅವರು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ತಮ್ಮ ಸಂಸ್ಥೆಯ ಮುಖಾಂತರ ನೂರಾರು ಬಡ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಇದೀಗ ಸೂರ್ಯ ಅವರ ಮತ್ತೊಂದು ಕಾರ್ಯಕ್ಕೆ ಸೋಶೀಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

%d bloggers like this: