ಬೋಲ್ಡ್ ಡೈಲಾಗ್ಸ್ ಮತ್ತು ತಮ್ಮ ಅಭಿನಯದ ಮೂಲಕ ಅಪಾರ ಜನಪ್ರಿಯತೆ ಪಡೆದ ನಟಿ ಶ್ವೇತಾ ಶ್ರೀ ವಾತ್ಸವ್ ಇದೀಗ ಪಬ್ಲಿಕ್ ಸರ್ವೆಂಟ್ ಪಾತ್ರದಲ್ಲಿ ಮಿಂಚಲಿದ್ದಾರೆ. ಹೌದು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ಸಿನಿ ಪ್ರೇಕ್ಷಕರ ಮನ ಗೆದ್ದಿರುವ ನಟಿ ಶ್ವೇತಾ ಶ್ರೀ ವಾತ್ಸವ್ ಅವರು ನಟಿಸಿದ ಚಿತ್ರಗಳು ಕಡಿಮೆ. ಆದರೆ ಅವರು ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳು ಮತ್ತು ಮಾಡಿದ ಪಾತ್ರಗಳು ನನಪಿಗೆ ಉಳಿಯುವಂತವು ಎಂದು ಹೇಳಬಹುದು. ಅದದಂತೆ ಇದೀಗ ಶ್ವೇತಾ ಶ್ರೀ ವಾತ್ಸವ್ ಅವರು ಅಭಿನಯಿಸಿರುವ ಹೋಪ್ ಎಂಬ ಸಿನಿಮಾ ಇದೇ ಜುಲೈ 8ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಹೋಪ್ ಸಿನಿಮಾ ಪ್ರಸ್ತುತ ಸಮಾಜಲ್ಲಿ ನಡೆಯುತ್ತಿರುವ ಕೆಲವು ಸತ್ಯ ಘಟನೆಗಳನ್ನ ಆಧಾರಿಸಿದ ಕಥೆಯ ಎಳೆಯನ್ನ ಹೊಂದಿದೆಯಂತೆ. ಸರ್ಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಒಂದು ಭ್ರಷ್ಟ ಪದ್ದತಿಯ ಸುತ್ತ ಹೆಣೆಯಲಾಗಿರುವ ಕಥೆಯಲ್ಲಿ ಶ್ವೇತಾ ಶ್ರೀ ವಾತ್ಸವ್ ಅವರು ಒಬ್ಬ ದಕ್ಷ ಪ್ರಾಮಾಣಿಕ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ.

ಈ ಪಾತ್ರ ಶ್ವೇತಾ ಶ್ರೀ ವಾತ್ಸವ್ ಅವರಿಗೆ ಒಂದು ಬೇರೆಯದ್ದೇ ಐಡೆಂಟಿಟಿಯನ್ನ ನೀಡಬಹುದಾಗಿರುತ್ತದೆ. ಕಿರಗೂರಿನ ಗಯ್ಯಾಳಿಗಳು ಚಿತ್ರದಲ್ಲಿ ನಟಿ ಶ್ವೇತಾ ಅವರು ಹಳ್ಳಿ ಮಹಿಳೆಯಾಗಿ ವಿಭಿನ್ನವಾಗಿ ಕಾಣಿಸಿಕೊಂಡಿದ್ರು. ಇದೀಗ ಪಬ್ಲಿಕ್ ಸರ್ವೆಂಟ್ ಆಗಿ ವಿಶಿಷ್ಟ ಪಾತ್ರದ ಮೂಲಕ ಗಮನ ಸೆಳೆಯಲಿದ್ದಾರೆ. ಈ ಒಬ್ಬ ದಕ್ಷ ಪ್ರಾಮಾಣಿಕ ಅಧಿಕಾರಿ ವರ್ಗಾವಣೆ ಆದಾಗ ಅದು ಜನ ಸಾಮಾನ್ಯರ ಮೇಲೆ ಯಾವೆಲ್ಲಾ ರೀತಿಯ ಪರಿಣಾಮ ಬೀರಲಿದೆ ಎನ್ನುವ ಕಥಾ ಹಂದರ ಹೊಂದಿರುವ ಹೋಪ್ ಸಿನಿಮಾದಲ್ಲಿ ಸುಮಲತಾ ಅಂಬರೀಶ್, ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ , ಗೋಪಾಲ್ ಕೃಷ್ಣ ದೇಶಪಾಂಡೆ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇವರ ಜೊತೆಗೆ ಮತ್ತೊಂದಷ್ಟು ಕಲಾವಿದರು ಈ ಹೋಪ್ ಸಿನಿಮಾದ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.



ಈ ಹೋಪ್ ಸಿನಿಮಾಗೆ ರಾಷ್ಟ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್ ಅವರು ತಾವೇ ಸ್ವತಃ ಕಥೆ ಬರೆದು ಬಂಡವಾಳ ಹೂಡಿಕೆ ಮಾಡಿದ್ದಾರೆ. ಈ ಮೂಲಕ ಕನ್ನಡದ ಅತ್ಯಂತ ಕಿರಿಯ ನಿರ್ಮಾಪಕಿ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ. ಇನ್ನು ಜ್ವಲಂತಂ ಚಿತ್ರ ನಿರ್ದೇಶನ ಮಾಡಿದ್ದ ನಿರ್ದೇಶಕ ಅಂಬರೀಷ್ ಬಿ.ಎಂ ಅವರು ಹೋಪ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.ಈ ಚಿತ್ರಕ್ಕೆ ಎಸ್. ಹಾಲೇಶ್ ಅವರು ಕ್ಯಾಮರ ವರ್ಕ್ ಮಾಡಿದ್ದು, ರಿತ್ವಿಕ್ ಮುರುಳಿಧರ್ ಅವರು ರಾಗ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕವೇ ಭಾರಿ ಕುತೂಹಲ ಮೂಡಿಸಿ ಸದ್ದು ಮಾಡಿರುವ ಹೋಪ್ ಚಿತ್ರ ನಾಳೆ ಅಂದರೆ ಜುಲೈ8 ಶುಕ್ರವಾರ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಈ ಚಿತ್ರ ಪ್ರೇಕ್ಷಕರಿಂದ ಯಾವ ರೀತಿ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ.