ನಟ ನೀನಾಸಂ ಸತೀಶ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಇವರಿಬ್ಬರು ಅಯೋಗ್ಯ ಸಿನಿಮಾದ ನಂತರ ಮತ್ತೆ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಅಯೋಗ್ಯ ಸಿನಿಮಾದ ಮೂಲಕ ಹಿಟ್ ಆಗಿದ್ದ ಈ ಜೋಡಿ ಈಗ ಮತ್ತೆ ಒಂದಾಗುತ್ತಿದೆ. ಇನ್ನು ನಟ ಸತೀಶ್ ನಟನೆಯ ಹಲವು ಸಿನಿಮಾಗಳು ಬಿಡುಗಡೆಗೆ ಕಾಯುತ್ತಿದ್ದು, ಕೆಎಸ್ ನಂದೀಶ್ ನಿರ್ದೇಶನದ ಗೋದ್ರಾ ಮತ್ತು ವಿಜಯ್ ಪ್ರಸಾದ್ ಅವರ ಪೆಟ್ರೋಮ್ಯಾಕ್ಸ್ ಬಿಡುಗಡೆಗೆ ಸಜ್ಜಾಗಿವೆ. ಇನ್ನು ಸತೀಶ್ ಹಾಗೂ ರಚಿತಾ ರಾಮ್ ಅವರ ಕಾಂಬಿನೇಷನ್ ಈ ಚಿತ್ರಕ್ಕೆ ಮ್ಯಾಟ್ನಿ ಎಂದು ಹೆಸರಿಡಲಾಗಿದ್ದು, ಈಗಾಗಲೇ ಚಿತ್ರೀಕರಣ ಶೇಖಡಾ 60% ಮುಗಿದಿದೆ. ಇನ್ನು ಮ್ಯಾಟ್ನಿ ಸಿನಿಮಾದ ನಾಲ್ಕನೇ ಶೆಡ್ಯೂಲ್ ಚಿತ್ರೀಕರಣ ಆರಂಭವಾಗಿದ್ದು, ಚಿತ್ರೀಕರಣ ಪೂರ್ಣಗೊಳ್ಳಲು ಒಂದೂವರೆ ತಿಂಗಳು ಬೇಕು ಎಂದು ತಿಳಿಸಿದ್ದಾರೆ.

ಈ ಚಿತ್ರದಲ್ಲಿ ಅರುಣ್ ಎಂಬ ಶ್ರೀಮಂತ ಮನೆತನದಿಂದ ಬಂದ ಹುಡುಗನ ಪಾತ್ರಕ್ಕೆ ಸತೀಶ್ ಅವರು ಬಣ್ಣ ಹಚ್ಚಿದ್ದು, ಪಾರ್ವತಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದು ಮತ್ತು ಕ್ರಾಂತಿ ವರ್ಲ ಅವರು ಛಾಯಾಗ್ರಹಣ ನೀಡಿದ್ದಾರೆ. ನಟ ಸತೀಶ್ ಅವರು ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು ಚಿತ್ರಕ್ಕೆ ಸಹಿ ಹಾಕಿದ್ದು ಇವರ ಮೊದಲ ತಮಿಳು ಚಿತ್ರ ಪಗೈವಾನುಕ್ಕು ಅರುಲ್ವಯಿ. ಈ ಚಿತ್ರವು ಕೂಡ ಫೆಬ್ರುವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಆದರೆ ನಟ ಸತೀಶ್ ಅವರು ತಮ್ಮ ಸಿನಿಮಾ ರಿಲೀಸ್ ಮಾಡಲು ಥಿಯೇಟರ್ ಗಳು ಶೇಕಡ ನೂರರಷ್ಟು ಸೀಟ್ ಆಕ್ಯೂಪನ್ಸಿಗೆ ಸರ್ಕಾರ ಅನುಮತಿ ನೀಡಲು ಕಾಯುತ್ತಿರುವುದಾಗಿ ಹೇಳಿದ್ದಾರೆ.

ಕೋವಿಡ್ ಕಾರಣದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಯಾವುದೇ ಥಿಯೇಟರ್ ಗಳಿಗೆ ಸಂಪೂರ್ಣ ಅನುಮತಿಯನ್ನು ಸರ್ಕಾರ ನೀಡುತ್ತಿಲ್ಲ. ಇದರಿಂದಾಗಿ ಎಲ್ಲ ನಟರಿಗೆ, ನಿರ್ದೇಶಕರಿಗೆ, ನಿರ್ಮಾಪಕರಿಗೆ ತೊಂದರೆಯಾಗುತ್ತಿದೆ. ದೊಡ್ಡ ನಟರ ಸಿನೆಮಾಗಳೂ ಕೂಡ ಇದೇ ಕಾರಣದಿಂದ ತಮ್ಮ ಸಿನೆಮಾಗಳನ್ನು ರಿಲೀಸ್ ಮಾಡದೇ ಕಾಯುತ್ತಿದ್ದಾರೆ. ಕೆಲವು ಚಿತ್ರತಂಡಗಳು ಒಟಿಟಿ ಗಳಲ್ಲಿ ತಮ್ಮ ಸಿನೆಮಾವನ್ನು ರಿಲೀಸ್ ಮಾಡುತ್ತಿದ್ದಾರೆ. ಯಾವಾಗಲೂ ವಿಭಿನ್ನ ಕಥೆಗಳೊಂದಿಗೆ ಪ್ರೇಕ್ಷಕರನ್ನು ರಂಜಿಸುವ ಸತೀಶ್ ಅವರು ಥಿಯೇಟರ್ ಗಳಲ್ಲಿ ಸಿನೆಮಾ ರಿಲೀಸ್ ಮಾಡುವುದರ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತು ತಮ್ಮ ಮುಂದಿನ ಸಿನಿಮಾಗಳ ಸ್ಕ್ರಿಪ್ಟ್ ಕೇಳುತ್ತಿತ್ತು ಸದ್ಯಕ್ಕೆ ಸಹಿ ಮಾಡಿರುವ ಚಿತ್ರಗಳ ಶೂಟಿಂಗ್ ಮುಗಿಸಿ ನಂತರ ಹೊಸ ಚಿತ್ರ ಘೋಷಿಸುವುದಾಗಿ ನಟ ಸತೀಶ್ ಹೇಳಿಕೊಂಡಿದ್ದಾರೆ.