ಕೆಜಿಎಫ್ ಚಾಪ್ಟರ್ 1 ನ ಹಿಂದಿ ಅವತರಿಣಿಕೆಯಲ್ಲಿ ಗಲಿ ಗಲಿ ಹಾಡಿಗೆ ಹೆಜ್ಜೆಹಾಕಿದ್ದ ಬಾಲಿವುಡ್ ನ ಖ್ಯಾತ ನಟಿ ಇತ್ತೀಚೆಗೆ ತಮ್ಮ ಜೀವನದ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಇತ್ತೀಚೆಗೆ ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಜೊತೆ ಗೋವಾದ ವೇಗೆಟರ್ ಬೀಚ್ ನಲ್ಲಿ ಮೌನಿ ರಾಯ್ ವಿವಾಹ ಜರುಗಿತ್ತು. ಕುಟುಂಬಸ್ಥರು ಹಾಗೂ ವಿಶೇಷ ಅತಿಥಿಗಳನ್ನು ಮಾತ್ರ ಮದುವೆಗೆ ಆಹ್ವಾನಿಸಲಾಗಿತ್ತು. ಇದೀಗ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಅವರು ಬೆಂಗಳೂರಿನಲ್ಲಿ ತಮ್ಮ ವೆಡ್ಡಿಂಗ್ ಪಾರ್ಟಿ ಇಟ್ಟುಕೊಂಡಿದ್ದಾರೆ ಎಂದು ಸುದ್ದಿ ಹರಡಿದೆ. ಹೌದು ಮೌನಿ ರಾಯ್ ಅವರ ಪತಿ ಸೂರಜ್ ನಂಬಿಯಾರ್ ಅವರು ದುಬೈನಲ್ಲಿ ಉದ್ಯಮಿ ಆಗಿದ್ದರೂ ಕೂಡ ಅವರು ಬೆಳೆದದ್ದು ಬೆಂಗಳೂರಿನಲ್ಲಿ. ಅಲ್ಲದೆ ಮೌನಿ ರಾಯ್ ಅವರಿಗೂ ಕೂಡ ಬೆಂಗಳೂರಿನಲ್ಲಿ ಹಲವು ಸ್ನೇಹಿತರಿದ್ದಾರೆ.

ಇನ್ನು ಸೂರಜ್ ನಂಬಿಯಾರ್ ಅವರ ಕುಟುಂಬ ಸದಸ್ಯರೆಲ್ಲರೂ ಬೆಂಗಳೂರಿನಲ್ಲಿ ಇರುವುದರಿಂದ ಬೆಂಗಳೂರಿನ ಅವರ ಮನೆಯಲ್ಲಿ ಒಂದು ಕಾಕ್ಟೈಲ್ ಪಾರ್ಟಿ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ಇವರಿಬ್ಬರ ಮದುವೆ ಗೋವಾದಲ್ಲಿ ಕೆಲವೇ ಕೆಲವು ಗಣ್ಯರ ಸಮ್ಮುಖದಲ್ಲಿ ಮಾತ್ರ ನಡೆದಿತ್ತು. ಆದ್ದರಿಂದ ಈ ವಿಶೇಷ ಪಾರ್ಟಿಯನ್ನು ಈ ಜೋಡಿ ಹಮ್ಮಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಖಾಸಗಿ ಸಂದರ್ಶನದಲ್ಲಿ ಸೂರಜ್ ನಂಬಿಯಾರ್ ಅವರ ತಂದೆ ರಾಜಾರಾಮ್ ನಂಬಿಯಾರ್ ಅವರು ಇವರಿಬ್ಬರ ಬಗ್ಗೆ ಕೆಲವು ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಸೂರಜ್ ಹುಟ್ಟಿದ್ದು ಮುಂಬೈನಲ್ಲಿ. ಆದರೆ ಬೆಳೆದದ್ದು ಬೆಂಗಳೂರಿನಲ್ಲಿ.

ಬೆಂಗಳೂರಿನ ಜೈನ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಇವರ ವ್ಯಾಸಂಗ ಮುಗಿದಿದ್ದು, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಹಾಗೂ ಸ್ಟ್ಯಾನ್ಫೋರ್ಡ್ ಯುನಿವರ್ಸಿಟಿಯಲ್ಲಿ ಅಧ್ಯಯನ ಮಾಡಲು ಹೋಗುವ ಮೊದಲು, ಆರ್ ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಸಿವಿಲ್ ಇಂಜಿನಿಯರಿಂಗ್ ಮಾಡಿದ್ದಾನೆ. ಹೀಗಾಗಿ ನಾವು ಬೆಂಗಳೂರಿನಲ್ಲಿ ಮನೆಯನ್ನು ಹೊಂದಿದ್ದೇವೆ. ಆದ್ದರಿಂದ ಇಲ್ಲಿ ಡಿಜೆ ಮತ್ತು ಕಾಕ್ಟೈಲ್ ಪಾರ್ಟಿ ಇರುತ್ತದೆ. ನಮ್ಮದು ಜೈನ ಕುಟುಂಬ ಆದರೆ ಸೂರಜ್ ಬಗ್ಗೆ ಬೇರೆಯದೇ ರೀತಿಯಾಗಿ ಮಾಧ್ಯಮದಲ್ಲಿ ವರದಿ ಮಾಡಿದ್ದಾರೆ. ಇದೆಲ್ಲವೂ ಸುಳ್ಳು. ನಮ್ಮ ಕುಟುಂಬದ ಬಗ್ಗೆ ತಪ್ಪು ಮಾಹಿತಿಯನ್ನು ನೀಡಲಾಗುತ್ತಿದೆ.

ಮೂಲತಹ ನಾವು ಮಲಬಾರ್ ಪ್ರದೇಶದವರು ಮತ್ತು ನಮ್ಮ ಪೂರ್ವಜರು ಕೃಷಿಯಿಂದ ಬಂದವರು ನಾನು ಬಿಜೆಪಿಯಲ್ಲಿ ಸಕ್ರಿಯನಾಗಿದ್ದೇನೆ. ಹಾಗೆಯೇ ರಿಯಲ್ ಎಸ್ಟೇಟ್ ಉದ್ಯಮ ನಮ್ಮ ಕುಟುಂಬದ ಒಂದು ಭಾಗ ಎಂದು ರಾಜಾರಾಮ್ ನಂಬಿಯಾರ್ ಅವರು ತಿಳಿಸಿದ್ದಾರೆ. ಮೌನಿ ರಾಯ್ ಮತ್ತು ಸೂರಜ್ ಅವರ ಪರಿಚಯದ ಬಗ್ಗೆಯೂ ಮಾತನಾಡಿರುವ ಅವರು ಒಂದೆರಡು ವರ್ಷಗಳ ಹಿಂದೆ ಹೊಸ ವರ್ಷದ ಸಂದರ್ಭದಲ್ಲಿ ಇವರಿಬ್ಬರಿಗೂ ದುಬೈನಲ್ಲಿ ಮೊದಲು ಪರಿಚಯವಾಗಿದೆ. ಸೂರಜ್ ದುಬೈನಲ್ಲಿ ಮನೆಯನ್ನು ಹೊಂದಿದ್ದಾನೆ. ಹೀಗಾಗಿ ಆ ಮನೆಗೆ ಸೂರಜ್ ಸ್ನೇಹಿತರ ಜೊತೆಗೆ ಮೌನಿ ಕೂಡ ಬಂದಿದ್ದಳು.

ಆಗ ಸೂರಜ್ ಮತ್ತು ಮೌನಿ ರಾಯ್ ಅವರಿಗೆ ಪರಸ್ಪರ ಪರಿಚಯವಿರಲಿಲ್ಲ. ಆದರೆ ಮೌನಿ ರಾಯ್ ಒಬ್ಬ ನಟಿ ಮತ್ತು ಡ್ಯಾನ್ಸರ್ ಎಂಬುದು ಮಾತ್ರ ಅವನಿಗೆ ತಿಳಿದಿತ್ತು. ಆ ದಿನ ಪರಿಚಯವಾದ ಇಬ್ಬರೂ ಪರಸ್ಪರ ಮೊಬೈಲ್ ನಂಬರ್ ಬದಲಿಸಿಕೊಂಡರು. ಹೀಗೆ ಆಕಸ್ಮಿಕವಾಗಿ ಅವರಿಬ್ಬರ ಸ್ನೇಹ ಶುರುವಾಗಿತ್ತು. ಇದೀಗ ಪ್ರೀತಿಯಾಗಿ ಬದಲಾಗಿದೆ. ಹೀಗೆ ಎರಡು ವಿಭಿನ್ನ ಹಿನ್ನೆಲೆಯವರು ಪರಿಚಯವಾಗಿ ಈಗ ಮದುವೆ ಕೂಡ ಆಗುತ್ತಿದ್ದಾರೆ ಎಂದು ರಾಜಾರಾಮ್ ನಂಬಿಯಾರ್ ಅವರು ತಿಳಿಸಿದರು. ಫೆಬ್ರುವರಿ 26 ರಂದು ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಅವರ ಪಾರ್ಟಿ ನಡೆಯಲಿದ್ದು, ಸೂರಜ್ ಅವರ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆಗೆ ಮೌನಿಯವರ ಚಿತ್ರರಂಗದ ಕೆಲವು ಸ್ನೇಹಿತರು ಕೂಡ ಭಾಗವಹಿಸಲಿದ್ದಾರೆ.