ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಜೊತೆ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಮಾಡುವುದು ಬಹುತೇಕ ಖಚಿತವಾಗಿದೆ, ಈ ಸಿನಿಮಾ ಐತಿಹಾಸಿಕ ಚಿತ್ರವಾಗಲಿದೆ ಎಂದು ತಿಳಿದು ಬಂದಿದೆ. ಇದಕ್ಕೂ ಮುನ್ನ ರಾಕಿಂಗ್ ಸ್ಟಾರ್ ಯಶ್ ಅವರು ತೆಲುಗಿನ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಇದು ಸದ್ಯಕ್ಕೆ ಸುಳ್ಳಾಗಿದ್ದು, ಇದೀಗ ಶಂಕರ್ ಅವರ ನಿರ್ದೇಶನದಲ್ಲಿ ಯಶ್ ಅಭಿನಯಿಸಲಿದ್ದಾರೆ ಎಂಬ ಮಾಹಿತಿ ಸ್ಪಷ್ಟವಾಗಿ ತಿಳಿದು ಬಂದಿದೆ. ಇನ್ನು ಭಾರತೀಯ ಚಿತ್ರರಂಗದ ಟಾಪ್ ಟೆನ್ ಪ್ರಖ್ಯಾತ ನಿರ್ದೇಶಕರಲ್ಲಿ ಶಂಕರ್ ಕೂಡ ಒಬ್ಬರು. ಇವರು ರಜನಿಕಾಂತ್ ಅವರೊಂದಿಗೆ ಮಾಡಿದ ಎಂದಿರನ್ (ರೋಬೋ) ಚಿತ್ರ ವಿಶ್ವದಾಖಲೆ ನಿರ್ಮಾಣ ಮಾಡಿ ಭಾರಿ ಜನಪ್ರಿಯಗೊಂಡಿತ್ತು.

ನಟ ಅರ್ಜುನ್ ಸರ್ಜಾ ಮತ್ತು ಮಧುಬಾಲಾ ಅವರ ಮುಖ್ಯ ಭೂಮಿಕೆಯಲ್ಲಿ ತೆರೆಕಂಡ ಜಂಟಲ್ ಮನ್ ಚಿತ್ರವನ್ನು ಮೊಟ್ಟ ಮೊದಲ ಬಾರಿಗೆ ಶಂಕರ್ ನಿರ್ದೇಶನ ಮಾಡಿದ್ದರು. ಮೊದಲ ಚಿತ್ರಕ್ಕೆ ದಕ್ಷಿಣ ಭಾರತದ ಫಿಲ್ಮ್ ಫೇರ್ ಪ್ರಶಸ್ತಿ ಮತ್ತು ತಮಿಳು ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದರು. ಇವರ ನಿರ್ದೇಶನದ ಮುಂದಿನ ಚಿತ್ರ ಕಮಲ್ ಹಾಸನ್ ಮುಖ್ಯಭೂಮಿಕೆಯಲ್ಲಿ ಬರುತ್ತಿರುವ ಇಂಡಿಯನ್ 2 ಸಿನಿಮಾ ಭಾರತೀಯ ಚಿತ್ರರಂಗದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾವಾಗಿದೆ.

ಇಂತಹ ವಿಷನರಿ ನಿರ್ದೇಶಕ ಕನ್ನಡದ ಹೆಮ್ಮೆಯ ನಟ ರಾಗಿರುವ ರಾಕಿಂಗ್ ಸ್ಟಾರ್ ಯಶ್ ಅವರಿಗೆ ನಿರ್ದೇಶನ ಮಾಡುತ್ತಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ. ಈ ಸಿನಿಮಾ ಐತಿಹಾಸಿಕ ಕಥೆಯುಳ್ಳ ಚಿತ್ರವಾಗಿದ್ದು,ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಚಿತ್ರೀಕರಣ, ಸಿನಿಮಾದ ಕೆಲಸ ಕಾರ್ಯಗಳು ನಡೆಯಲಿದೆ ಎಂಬ ಮಹತ್ವದ ಮಾಹಿತಿಗಳು ಹೊರಬಿದ್ದಿವೆ. ಆದರೆ ಅದಕ್ಕೂ ಮೊದಲು ರಾಕಿಂಗ್ ಸ್ಟಾರ್ ಯಶ್ ಮಫ್ತಿ ಸಿನಿಮಾದ ನಿರ್ದೇಶಕ ನರ್ತನ್ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸುದ್ದಿಗಳು ಉನ್ನತ ಮೂಲಗಳಿಂದ ಬಂದಿದ್ದರಿಂದ ಬಹುತೇಕ ಅಭಿಮಾನಿಗಳು ಶಂಕರ್ ಜೊತೆ ಯಶ್ ಮಾಡಲಿದ್ದಾರೆ ಎಂದು ಹೇಳುತ್ತಿದ್ದಾರೆ, ಇನ್ನು ಮೇಲಷ್ಟೇ ಚಿತ್ರತಂಡದಿಂದ ಅಧಿಕೃತವಾದ ಮಾಹಿತಿ ಹೊರ ಬರಬೇಕಾಗಿದೆ.