ಭಾರತದ ಕೋಗಿಲೆ ಸರೋಜಿನಿ ನಾಯ್ಡು ಜೀವನ ಚರಿತ್ರೆಯಲ್ಲಿ ಕನ್ನಡ ನಟಿ

ಯಾವುದೇ ವ್ಯಕ್ತಿ ಜೀವನದಲ್ಲಿ ಏನನ್ನಾದರೂ ಸಾಧಿಸಿದ್ದರೆ ಆ ಸಾಧನೆಯ ಹಿಂದೆ ಬಹಳ ಪರಿಶ್ರಮ, ತ್ಯಾಗ, ನೋವು, ಹಸಿವು, ಮುಂತಾದ ಕಷ್ಟಗಳು ಇರುತ್ತವೆ. ಆದರೆ ಅದು ಎಲ್ಲರಿಗೂ ಕಾಣುವುದಿಲ್ಲ. ಕೇವಲ ಆ ವ್ಯಕ್ತಿಗೆ ಮಾತ್ರ ಅದರ ಅನುಭವವಿರುತ್ತದೆ. ಅದೇ ರೀತಿ ಒಬ್ಬ ಸಾಧಕನ ಹಿಂದಿರುವ ಪರಿಶ್ರಮ, ಕಷ್ಟಗಳು ಇನ್ನೊಬ್ಬರ ಜೀವನಕ್ಕೆ ಸ್ಫೂರ್ತಿದಾಯಕವಾಗಲೆಂದು ಸಾಧಕರು ತಮ್ಮ ಜೀವನ ಚರಿತ್ರೆ ಬರೆಯುತ್ತಾರೆ. ಇದನ್ನೇ ಮೂಲವಾಗಿಟ್ಟುಕೊಂಡು ಇತ್ತೀಚೆಗೆ ಹಲವಾರು ನಿರ್ದೇಶಕರು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಜೀವನಾಧಾರಿತ ಕಥೆಯನ್ನು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ತಂದಿಡಲು ಪ್ರಯತ್ನಿಸುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ಮಂದಿ ಇತ್ತೀಚೆಗೆ ಜಾಸ್ತಿ ಬಯೋಪಿಕ್ ಗಳನ್ನು ಸಿನಿಮಾಗಳಾಗಿ ತರುತ್ತಿದ್ದಾರೆ.

ಸದ್ಯಕ್ಕೆ ಭಾರತದ ಕೋಗಿಲೆ ಎಂದೇ ಜನಪ್ರಿಯರಾಗಿರುವ ಸರೋಜಿನಿ ನಾಯ್ಡು ಅವರ ಜೀವನಾಧಾರಿತ ಕಥೆಯ ಸಿನಿಮಾ ಬರುತ್ತಿದೆ. ಹೌದು ಹಲವಾರು ಜನರಿಗೆ ಸ್ಫೂರ್ತಿ ತುಂಬಲು ಸರೋಜಿನಿ ನಾಯ್ಡು ಅವರ ಕಥೆಯನ್ನು ಹೊತ್ತು ತರುತ್ತಿದೆ ಚಿತ್ರತಂಡ. ಒಬ್ಬ ವ್ಯಕ್ತಿಯ ಜೀವನದಲ್ಲಿ ನಡೆದ ಕಥೆಗಳನ್ನು ಆರಿಸಿ ಹುಡುಕಿ ಎಲ್ಲರ ಮುಂದೆ ತಂದಿಡುವುದು ಅಷ್ಟು ಸುಲಭದ ಮಾತೇನಲ್ಲ. ಇಂತಹ ಸಾಹಸಕ್ಕೆ ನಿರ್ದೇಶಕ ವಿನಯಚಂದ್ರ ಅವರು ಕೈಹಾಕಿದ್ದಾರೆ. ವಿಶೇಷವೆಂದರೆ ಈ ಚಿತ್ರವು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ವಿನಯಚಂದ್ರ ಅವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಚರಣ್ ಸುವರ್ಣ ಹಾಗೂ ಹನಿ ಚೌದರಿ ಮತ್ತು ಸಿಬಿ ಕುಲಕರ್ಣಿ, ವಿಸ್ತಾ ಫಿಲಂಸ್ ಮೂಲಕ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸರೋಜಿನಿ ನಾಯ್ಡು ಅವರನ್ನು2 ಶೇಡ್ ಗಳಲ್ಲಿ ತೋರಿಸಲಾಗಿದೆ.

ಒಂದು ಅವರು ಚಿಕ್ಕವಯಸ್ಸಿನಲ್ಲಿ ಇರುವ ಪಾತ್ರ ಮತ್ತೆ ಇನ್ನೊಂದು ಹಿರಿ ವಯಸ್ಸಿನ ಪಾತ್ರ. ಸರೋಜಿನಿ ನಾಯ್ಡು ಅವರ ಚಿಕ್ಕವಯಸ್ಸಿನ ಪಾತ್ರದಲ್ಲಿ ಕನ್ನಡದ ನಟಿ ಸೋನಲ್ ಮೊಂಟೆರೋ ನಟಿಸುತ್ತಿದ್ದಾರೆ. ಹಾಗೂ ಹಿರಿ ವಯಸ್ಸಿನ ಪಾತ್ರವನ್ನು ನಟಿ ಶಾಂತಿಪ್ರಿಯ ನಿರ್ವಹಿಸುತ್ತಿದ್ದಾರೆ. ಒಂದು ಕಾಲದಲ್ಲಿ ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ಜನಪ್ರಿಯ ನಟಿಯಾಗಿದ್ದ ಶಾಂತಿಪ್ರಿಯ ಅವರು 28 ವರ್ಷಗಳ ನಂತರ ಅಭಿನಯಕ್ಕೆ ವಾಪಸಾಗುತ್ತಿರುವುದು ವಿಶೇಷ. ವಿನಯ್ ಚಂದ್ರ ಅವರು ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಸಂಗೀತ ನಿರ್ದೇಶನವನ್ನೂ ಕೂಡ ಮಾಡಿದ್ದಾರೆ. ಸಂಗೀತ ನಿರ್ದೇಶನ ಸವಾಲಿನ ಕೆಲಸ. ಏಕೆಂದರೆ 1890ರ ಕಾಲಘಟ್ಟದಲ್ಲಿನ ಸಂಗೀತವನ್ನು ಕೇಳಿಸಬೇಕು. ಹೊಸ ಸಂಗೀತ ಎನಿಸಬಾರದು ಹೀಗಾಗಿ ಇದು ಸವಾಲಿನ ಕೆಲಸವಾಗಿದೆ ಎಂದು ವಿನಯಚಂದ್ರ ಹೇಳಿದ್ದಾರೆ. ಇನ್ನು ಈ ಚಿತ್ರದಲ್ಲಿ ಜರೀನಾ ವಹಾಬ್ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಬೆಂಗಳೂರು ಮುಂಬೈ.

ಉತ್ತರಪ್ರದೇಶದಲ್ಲಿ 50 ದಿನಗಳ ಚಿತ್ರೀಕರಣ ನಡೆಯಲಿದೆ. ಕನ್ನಡ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿ ತೆಲುಗು ಮತ್ತು ತಮಿಳಿಗೆ ಈ ಚಿತ್ರ ಡಬ್ಬಿಂಗ್ ಆಗಲಿದೆ. ಜೂನ್ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಸರೋಜಿನಿ ನಾಯ್ಡು ಅವರ ಕುಟುಂಬದ ಎನ್ಒಸಿ ಸಿಕ್ಕಿದೆ. ಸರೋಜಿನಿ ನಾಯ್ಡು ಅವರ ನಿಜಜೀವನದಲ್ಲಿ ಸ್ವತಂತ್ರ ಹೋರಾಟಗಾರರ ಗೋಪಾಲಕೃಷ್ಣ ಗೋಖಲೆ ಅವರು ಪ್ರಮುಖ ಪಾತ್ರ ವಹಿಸುತ್ತಾರೆ. ಗೋಪಾಲಕೃಷ್ಣ ಗೋಖಲೆ ಅವರ ಪಾತ್ರವನ್ನು ರಂಗಾಯನ ರಘು ಅವರಿಂದ ಮಾಡಿಸಬೇಕು ಎಂಬುದು ಚಿತ್ರತಂಡದ ಆಸೆಯಾಗಿದೆ. ಈ ಚಿತ್ರಕ್ಕಾಗಿ ನಿರ್ದೇಶಕರು ಹಲವಾರು ವರ್ಷಗಳಿಂದ ತಯಾರಿ ನಡೆಸುತ್ತಿದ್ದಾರೆ. ಹೌದು ಕಳೆದ ಎಂಟು ವರ್ಷಗಳಿಂದ ಸರೋಜಿನಿ ಅವರ ಬಗ್ಗೆ ನಿರ್ದೇಶಕರು ರೀಸರ್ಚ್ ಮಾಡುತ್ತಿದ್ದಾರೆ. ಆಗಿನ ಕಾಲಕ್ಕೆ ಸ್ಕಾಲರ್ ಶಿಪ್ ಪಡೆದು ಲಂಡನ್ನಿನಲ್ಲಿ ಓದಿದ ಸರೋಜಿನಿ ನಾಯ್ಡು ಅವರಿಗೆ ಹಲವಾರು ಭಾಷೆಗಳು ಗೊತ್ತಿದ್ದವು.

ಭಾರತದ ಪ್ರತಿನಿಧಿಯಾಗಿ ಅವರು ಹಲವಾರು ದೇಶಗಳಿಗೆ ಭೇಟಿ ನೀಡಿದ್ದಾರೆ. ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಹಿರಿಮೆ ಅವರಿಗಿದೆ. 50ಡಿಗ್ರಿ ಉರಿ ಬಿಸಿಲಿನಲ್ಲೂ ಕೂಡ ನೀರು ಕುಡಿಯದೆ ಮೂರು ದಿನಗಳ ಕಾಲ ಉಪವಾಸ ಹೋರಾಟ ಮಾಡಿದ್ದಾರೆ. ಸರೋಜಿನಿ ಅವರ ಈ ಹೋರಾಟ ಎಲ್ಲರಿಗೂ ಗೊತ್ತಾಗಬೇಕು ಎಂದು ಈ ಚಿತ್ರ ಮಾಡುತ್ತಿದ್ದೇವೆ ಎಂದು ಕಥೆಗಾರ ಧೀರಜ್ ಮಿಶ್ರಾ ಹೇಳಿದರು. ಸರೋಜಿನಿ ನಾಯ್ಡು ಅವರ ಬಗ್ಗೆ ಗೊತ್ತಿಲ್ಲದ ವಿಷಯಗಳನ್ನು ಈ ಚಿತ್ರದಲ್ಲಿ ತೋರಿಸಲು ಹೊರಟಿದ್ದೇವೆ. ಅವರು ಹೇಗೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಮೊದಲ ಅಧ್ಯಕ್ಷೆ ಹೇಗಾದರು ಹೀಗೆ ಹಲವಾರು ವಿಷಯಗಳನ್ನು ಈ ಚಿತ್ರದಲ್ಲಿ ಹೇಳಲು ಹೊರಟಿದ್ದಾರೆ. ಒಟ್ಟಿನಲ್ಲಿ ನಮ್ಮ ಕನ್ನಡದಲ್ಲಿ ಇದೊಂದು ವಿಭಿನ್ನ ಪ್ರಯತ್ನ ಎಂದು ಹೇಳಬಹುದು.

%d bloggers like this: