ಪ್ರಪಂಚದ ಅತಿ ಎತ್ತರವಾದ ಕಟ್ಟಡವಾಗಿರುವ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಪೋಸ್ಟರ್ ಬಿಡುಗಡೆಗೊಳ್ಳುತ್ತಿದೆ. ಪ್ಯಾಂಟಮ್ ಟೈಟಲ್ ಬದಲಾವಣೆ ಮಾಡಿ ಸುದ್ದಿಯಾಗಿದ್ದ ಈ ಚಿತ್ರತಂಡ ಇದೀಗ ಯಾರೂ ಮಾಡದ ಸಾಹಸಕ್ಕೆ ಕೈಹಾಕಿದೆ ಎನ್ನಬಹುದು, ಅರಬ್ ರಾಷ್ಟ್ರವಾದ ಈ ದುಬೈ ದೇಶದಲ್ಲಿ ಪ್ರಸಿದ್ದವಾಗಿರುವ ಈ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಜಗತ್ತಿನ ಯಾವ ಚಿತ್ರವು ಕೂಡ ಈ ರೀತಿಯ ಆಲೋಚನೆ ಮಾಡಿರಲಿಲ್ಲ. ಆದರೆ ಕನ್ನಡದ ಚಿತ್ರವೊಂದು ಈ ರೀತಿಯಾದ ವಿಭಿನ್ನ ಆಲೋಚನೆ ಮಾಡುವುದರ ಮೂಲಕ ವಿಕ್ರಾಂತ್ ರೋಣ ಚಿತ್ರವನ್ನು ಜಗತ್ತಿನ ಎಲ್ಲಾ ಚಿತ್ರರಂಗ ಗಮನ ಸೆಳೆಯುವಂತೆ ಮಾಡಿದೆ.

ಈಗಾಗಲೇ ಈ ಚಿತ್ರದ ಟೀಸರ್ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ರಂಗಿತರಂಗ ದಂತಹ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ನಿರ್ದೆಶನ ಮಾಡಿದಂತಹ ಅನೂಪ್ ಭಂಡಾರಿ ಇದೀಗ ಕಿಚ್ಚ ಸುದೀಪ್ ಅವರಿಗೆ ವಿಕ್ರಾಂತ್ ರೋಣ ಚಿತ್ರದಲ್ಲಿ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಟೈಟಲ್ ರೀ ಲಾಂಚ್ ಮಾಡುತ್ತಿದ್ದು, ಚಿತ್ರದ ಪೋಸ್ಟರ್ ಅನ್ನು ಅದ್ದೂರಿಯಾಗಿ ಇದೇ ಜನವರಿ 31ರಂದು ರಿಲೀಸ್ ಮಾಡಲಾಗುತ್ತಿದೆ. ಪೋಸ್ಟರ್ ಬಿಡುಗಡೆಗೆ ಇನ್ನು ಮೂರ್ನಾಲ್ಕು ದಿನಗಳು ಬಾಕಿ ಇರುವಾಗಲೇ ಚಿತ್ರದ ನಾಯಕ ಕಿಚ್ಚ ಸುದೀಪ್ ದುಬೈ ದೇಶಕ್ಕೆ ಹೋಗಿದ್ದಾರೆ.

ದುಬೈ ತಲುಪಿದ ಕಿಚ್ಚ ಸುದೀಪ್ ಅವರಿಗೆ ಹೂವಿನಹಾರ ಹಾಕುವುದರ ಮೂಲಕ ಅದ್ಧೂರಿಯಾದ ಸ್ವಾಗತ ಕೋರಿದ್ದಾರೆ. ವಿಕ್ರಾಂತ್ ರೋಣ ಚಿತ್ರದಲ್ಲಿ ಬಾಲಿವುಡ್ ಪ್ರಖ್ಯಾತ ನಟಿ ಜಾಕ್ವೇಲಿನ್ ಫರ್ನಾಂಡಿಸ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದು, ಇನ್ನು ಈ ಚಿತ್ರಕ್ಕೆ ನಿರ್ಮಾಪಕ ಜಾಕ್ ಮಂಜು ಅಲಂಕಾರ್ ಪಾಂಡಿಯನ್ ಜೊತೆಗೂಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಪಂಚದ ಅತಿ ಎತ್ತರವಾದ ಬುರ್ಜ್ ಖಲೀಫಾ ಕಟ್ಟಡದಲ್ಲಿ ವಿಕ್ರಾಂತ್ ರೋಣ ಚಿತ್ರದ ಟೈಟಲ್ ಪೋಸ್ಟರ್ ರಿವೀಲ್ ಮಾಡುವುದರ ಮೂಲಕ ಕನ್ನಡ ಚಿತ್ರರಂಗದ ಹಿರಿಮೆಯನ್ನು ಹೆಚ್ಚಿಸಿದೆ ಎನ್ನಬಹುದಾಗಿದೆ.