ರಾಜ್ಯದಲ್ಲಿ ಅನ್ ಲಾಕ್ ಆದರೂ ಜನರು ಮನೆಯ ಲಾಕ್ ಇನ್ನೂ ತೆರೆದಿಲ್ಲ ಕೊರೋನ ಭಯವ ಮರೆತಿಲ್ಲ, ಹೌದು ದೇಶಾದ್ಯಂತ ಕೊರೋನ ವೈರಸ್ ನಿಯಂತ್ರಣದ ಸಲುವಾಗಿ ಹಂತ ಹಂತವಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿತ್ತು. ಕಳೆದ ಐದು ತಿಂಗಳಿಂದ ಲಾಕ್ ಡೌನ್ ನಿಂದಾಗಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಬ್ದವಾಗಿತ್ತು. ಜನ ಜೀವನ ಅಸ್ತವ್ಯಸ್ಥಗೊಂಡು ದಿನಗೂಲಿ ನೌಕರರು, ಕಟ್ಟಡ ಕಾರ್ಮಿಕರು, ವಲಸೆ ಹೋಗಿದ್ದ ಕಾರ್ಮಿಕರ ಪಾಡು ಹೀನಾಯ ಸ್ಥಿತಿಯ ಒಂದೊತ್ತು ಊಟಕ್ಕೂ ಪರದಾಡಿದಂತಹ ಸ್ಥಿತಿ ತಲುಪಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಕಳೆದ ಹದಿನೈದು ದಿನದಿಂದೀಚೆಗೆ ರಾಜ್ಯದಲ್ಲಿ ಅನ್ ಲಾಕ್ ಆದರೂ ಸಹ ವಾಣಿಜ್ಯ ಚಟುವಟಿಕೆಗಳು ಆರಂಭವಾಗಿದ್ದರೂ, ಅಂಗಡಿ ಮುಂಗಟ್ಟುಗಳು ತೆರೆದಿದ್ದರು ಜನ ಮಾತ್ರ ರಸ್ತೆಗಿಳಿಯಲು ತಯಾರಿಲ್ಲ ಕಾರಣ ಕೊರೋನ ಇನ್ನು ನಮ್ಮನ್ನು ಬಿಟ್ಟು ಹೋಗಿಲ್ಲ. ದಿನದಿಂದ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೋಂಕಿತರ ಪ್ರಮಾಣ ಏರುತ್ತಿದ್ದು, ಸಾವು ನೋವುಗಳು ಸಂಖ್ಯೆಯು ಸಹ ಗಣನೀಯವಾಗಿ ಏರಿಕೆಯಾಗಿದೆ. ಇದಲ್ಲದೆ ಕೆಲವೊಂದು ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯತನ ಎದ್ದು ಕಾಣುತ್ತಿದ್ದು, ಮಾಧ್ಯಮಗಳ ದೃಶ್ಯವಳಿಗಳಲ್ಲಿ ನೋಡುತ್ತಿರುವ ಕೊರೋನ ಸೋಂಕಿತರ ಸಾವಿನಮನೆಯ ಆಕ್ರಂದನ ರಾಜ್ಯದ ಜನರನ್ನು ಬೆಚ್ಚಿಬೀಳಿಸುತ್ತಿದೆ.
ಸಾಮಾನ್ಯ ದಿನಗಳಲ್ಲಿ ನಗರದ ಪ್ರತಿಷ್ಟಿತ ರಸ್ತೆಗಳು ಹಗಲು ರಾತ್ರಿಯ ವ್ಯತ್ಯಾಸವಿಲ್ಲದೆ ದಿನಪೂರ್ತಿ ಪಾರ್ಟಿ, ಮೋಜು ಮಸ್ತಿಯಂತಿದ್ದ ರಸ್ತೆಗಳು ಇದೀಗ ಖಾಲಿ ಖಾಲಿಯಾಗಿ ಸ್ಮಶಾನಮೌನದಂತಿವೆ. ಲಾಕ್ ಡೌನ್ ತೆರೆದ ನಂತರ ಜನರ ಓಡಾಟ ಹೆಚ್ಚಾಗಬಹುದು, ಜನಸಂದಣೆ ಹೆಚ್ಚಾಗಬಹುದು ಜನರು ಗುಂಪು ಗುಂಪಾಗಿ ಸೇರಬಹುದು ಎಂದು ನಗರದ ಪೊಲೀಸರು ಕೂಡ ಮುನ್ನೆಚ್ಚರಿಕೆ ಕ್ರಮವಹಿಸಿದ್ದರು. ಆದರೆ ಪೊಲೀಸ್ ಇಲಾಖೆಯ ಲೆಕ್ಕಾಚಾರಗಳೆಲ್ಲಾ ಉಲ್ಟಾ ಆಗಿದೆ ಕಾರಣ ರಸ್ತೆಗಳಿಗೆ ಜನಸಾಮಾನ್ಯರು ಇಳಿದಿಲ್ಲ, ಎಲ್ಲೆಂದರಲ್ಲಿ ಜನರ ಓಡಾಟವಿಲ್ಲ, ಸಾರಿಗೆ ವಾಹನಗಳು ಪ್ಯಾಸೆಂಜರ್ ಇಲ್ಲದೆ ಬಣಗುಡುತ್ತಿವೆ. ನೈಟ್ ಲೈಫ್ಗೆ ಹೆಸರಾಗಿರುವ ಎಂಜಿ ರೋಡ್, ಬ್ರಿಗೇಡ್ ರೋಡ್, ಕಮರ್ಷಿಯಲ್ ಸ್ಟ್ರೀಟ್, ಕೋರಮಂಗಲ, ಬಿಟಿಎಂ ಲೇಔಟ್ ಪ್ರದೇಶಗಳು ಜನರಿಲ್ಲದೆ ಕಳೆಕುಂದಿವೆ. ರಾಜ್ಯದಲ್ಲಿ ಲಾಕ್ ಡೌನ್ ಸ್ವಯಂಪ್ರೇರಿತವಾಗಿ ಜನರೇ ತಮ್ಮನ್ನು ತಾವು ನಿರ್ಬಂಧಿಸಿಕೊಂಡಿದ್ದು ನಗರದಲ್ಲಿ ಸಂಚಾರ ವಿರಳವಾಗಿ ಕಾಣಸಿಗುತ್ತದೆ.