ಕೊರೋನ ಐಸಿಯು ಬೆಡ್ ಗಾಗಿ ಅಡ್ವಾನ್ಸ್ ಬುಕಿಂಗ್! ಹೌದು ಇಷ್ಟು ದಿನ ನಾವು ಸಿನಿಮಾ ನೋಡಲು, ಪ್ರವಾಸಿತಾಣಕ್ಕೋ, ದೂರದೂರಿಗೆ ಪ್ರಯಾಣ ಬೆಳೆಸಲೋ ಬಸ್ಸುಗಳಿಗೆ, ಥಿಯೇಟರ್ ಗಳಿಗೆ ಅಡ್ವಾನ್ಸ್ ಬುಕಿಂಗ್ ಮಾಡಿರುವುದನ್ನು ಕೇಳಿರುತ್ತೇವೆ, ನೋಡಿರುತ್ತೇವೆ, ಸ್ವತಃ ನಾವೇ ಮಾಡುತ್ತೇವೆ. ಆದರೆ ತೆಲಂಗಾಣ ಹೈದ್ರಾಬಾದ್ ನಲ್ಲಿ ಕೊರೋನ ಐಸಿಯು ಬೆಡ್ ಗಳನ್ನೇ ಮುಂಗಡವಾಗಿ ಬುಕ್ ಮಾಡಲಾಗಿದೆ. ಹೌದು ಇದು ಆಶ್ಚರ್ಯವೇ ಸರಿ, ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ, ಅದರಲ್ಲೂ ಹೈದ್ರಾಬಾದ್ ನಲ್ಲಿ ಒಂದೆಜ್ಜೆ ಮುಂದೋಗಿದೆ ನಗರದ ಕೆಲವೊಂದು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಲ್ಲದೇ ಬೆಡ್ ಗಳು ಬುಕಿಂಗ್ ಆಗಿವೆ.

ಇತ್ತೀಚೆಗೆ ಸಾರ್ವಜನಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿಕೊಟ್ಟಾಗ ಪ್ರಕರಣ ಬೆಳಕಿಗೆ ಬಂದಿದೆ. ಇದರಲ್ಲಿ ನಿಜವಾದ ಸೋಂಕಿತರಿಗೆ ಬೆಡ್ ಸಿಗದೇ ನರಳಿದರೆ, ಇಲ್ಲಿ ನಮಗೆಲ್ಲಿ ಕೊರೋನ ಸೋಂಕು ತಗುಲಿ ಬೆಡ್ ಸಿಗದೇ ನರಳಾಡುವಂತಹ ಪರಿಸ್ಥಿತಿ ತಮಗೆಲ್ಲಿ ಬರುವುದೋ ಎಂದರಿತ ಶ್ರೀಮಂತರು, ರಾಜಕೀಯ ವ್ಯಕ್ತಿಗಳು, ಸಿನಿಮಾ ನಟರು ತಮ್ಮ ಹೆಸರಿನಲ್ಲಿ ಕೊರೋನ ಐಸಿಯು ಬೆಡ್ ಗಳನ್ನ ದಿನವೊಂದಕ್ಕೆ ಬರೋಬ್ಬರಿ ಒಂದೂವರೆ ಲಕ್ಷ ರುಪಾಯಿ ಹಣನೀಡಿ ಮುಂಗಡವಾಗಿ ಬುಕಿಂಗ್ ಮಾಡಿದ್ದಾರೆ. ಈ ವಿಚಾರವಾಗಿ ಸಾರ್ವಜನಿಕ ಆರೋಗ್ಯ ಇಲಾಖೆ ಮತ್ತು ಕೊರೋನ ಪ್ರಕರಣಗಳ ಸಮನ್ವಯಕಾರರಾಗಿರುವ ಡಾಜಿ ಶ್ರೀನಿವಾಸ್ ಅವರು ಹೀಗಾದರೆ ನಿಜವಾದ ಕೊರೋನ ಸೊಂಕಿತರಿಗೆ ಬೆಡ್ ಸಿಗದೇ ತೊಂದರೆ ಅನುಭವಿಸಬಹುದು ಎಂದು ಕಳವಳ ವ್ಯಕ್ತಪಡಿಸಿದ್ದು ಇದರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.