ಕೊರೋನಾ ಹೆಮ್ಮಾರಿಯಿಂದ ಇಡೀ ಜಗತ್ತು ನಲುಗಿಹೋಗಿದೆ. ಜೀವ ಹಾನಿಯ ಜೊತೆಗೆ ಆರ್ಥಿಕ ಸಂಕಷ್ಟಗಳು ಕೂಡ ಬಂದೊದಗಿದೆ. ಬಡ ರಾಷ್ಟ್ರ, ಮುಂದುವರಿದ ರಾಷ್ಟ್ರ ಮುಂದುವರೆಯುತ್ತಿರುವ ರಾಷ್ಟ್ರಗಳು ಎನ್ನದೆ ಎಲ್ಲ ರಾಷ್ಟ್ರಗಳಿಗೂ ಈ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ನಮ್ಮ ದೇಶ ಹಲವಾರು ಸಮಸ್ಯೆಗಳನ್ನು ಮೊದಲಿನಿಂದಲೂ ತನ್ನ ಗರ್ಭದಲ್ಲಿ ಹುದುಗಿಸಿಕೊಂಡು ಕಾಲಚಕ್ರ ಉರುಳಿಸುತ್ತ ಬಂದಿದೆ. ಇಂತಹ ಸಂದರ್ಭದಲ್ಲಿ ಈ ಹೆಮ್ಮಾರಿ ಇಡೀ ದೇಶಕ್ಕೆ ವಕ್ಕರಿಸಿ ಪ್ರಾಣ ಹಾನಿ ಮಾಡುವುದರ ಜೊತೆಗೆ ಇಡೀ ದೇಶವನ್ನೇ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿಸಿದೆ. ಈ ಮಹಾಮಾರಿ ಬಂದಾಗಿನಿಂದ ಇಲ್ಲಿಯವರೆಗೆ ಬರೋಬ್ಬರಿ 450 ಬಿಲಿಯನ್ ಡಾಲರ್ ನಷ್ಟ ಆಗಿರಬಹುದು ಎಂದು ವಿಶ್ವಬ್ಯಾಂಕ್ ವರದಿ ಮಾಡಿದೆ. ಅಂದರೆ ಭಾರತೀಯ ಕರೆನ್ಸಿ ಮೊತ್ತದಲ್ಲಿ ಬರೋಬ್ಬರಿ ಆ ಹಣದ ಮೊತ್ತ 40 ಲಕ್ಷ ಕೋಟಿ ಎಂದಾಗುತ್ತದೆ. ಲಾಕ್ಡೌನ್ ಕಾರಣದಿಂದ ಇಡೀ ದೇಶದ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿವೆ. ಮಹಾರತ್ನ ಕಂಪನಿಗಳಿಂದ ಹಿಡಿದು ಗುಡಿಕೈಗಾರಿಕೆಗಳವರೆಗೆ ಎಲ್ಲಾ ಉದ್ದಿಮೆಗಳು ನೆಲಕಚ್ಚಿವೆ. ಕೊಳ್ಳುವವರು ಇಲ್ಲದೆ ಯಾವುದೇ ವಸ್ತುಗಳು ಮಾರಾಟವಾಗುತ್ತಿಲ್ಲ ಇದರಿಂದಾಗಿ ಇನ್ನೂ ಹಲವು ವರ್ಷಗಳ ಕಾಲ ಭಾರತಕ್ಕೆ ಬಲವಾದ ಪೆಟ್ಟು ಬೀಳುವ ಸಾಧ್ಯತೆ ಇದೆ. ಭಾರತದಂತಹ ದೇಶದಲ್ಲಿ ತುರ್ತು ಆರ್ಥಿಕ ಪುನಶ್ಚೇತನ ಕಷ್ಟಸಾಧ್ಯವಾಗಬಹುದು.