ಕಿಚ್ಚ ಸುದೀಪ್ ಸಿನಿ ಪಯಣಕ್ಕೆ 25 ವರ್ಷ! ಚಂದನವನದ ಜಂಟಲ್ ಮ್ಯಾನ್, ಆರಡಿ ಕಟೌಟ್, ಕ್ಯಾಪ್ಟನ್, ಅಭಿನಯ ಚಕ್ರವರ್ತಿ ಹೀಗೆ ತಮ್ಮ ಅಭಿಮಾನಿಗಳಿಂದ ಸಾಲು ಸಾಲು ಬಿರುದುಗಳನ್ನು ಪಡೆದುಕೊಂಡಿರುವ ನಟ ಕಿಚ್ಚ ಸುದೀಪ್ ಬಣ್ಣದ ಲೋಕಕ್ಕೆ ಕಾಲಿಟ್ಟು ಇಪ್ಪತ್ತೈದು ವರ್ಷಗಳು ಪೂರ್ಣಗೊಂಡಿದೆ. ಈ ಸಂಭ್ರಮದ ಪ್ರಯುಕ್ತ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ಮುಖಾಂತರ ಮಹತ್ಕಾರ್ಯವನ್ನು ಮಾಡಿದೆ. ಈ ಪುಣ್ಯದ ಕಾರ್ಯಕ್ಕೆ ಲೋಕಸಭೆ ಸದಸ್ಯರಾಗಿರುವ ಮೇನಕಾಗಾಂಧಿ ಕರೆ ಮಾಡಿ ಅಭಿನಂದನೆ ಸಲ್ಲಿಸಿ ಸುದೀಪ್ ಅವರ ಈ ಮಾನವೀಯ ಕಾರ್ಯಕ್ಕೆ ಧನ್ಯವಾದ ತಿಳಿಸಿ ನಿಮ್ಮ ಇಂತಹ ಮತ್ತಷ್ಟು ಮಹತ್ಕಾರ್ಯ ಮುಂದುವರಿಯಲಿ ಎಂದು ಆಶಿಸಿದ್ದಾರೆ. ಇನ್ನು ತಾಯವ್ವ ಚಿತ್ರದಲ್ಲಿ ಪೋಷಕ ನಟನಾಗಿ ಚಿತ್ರರಂಗಕ್ಕೆ ಹೆಜ್ಜೆಯಿಟ್ಟು, ನಂತರ ಸುನಿಲ್ ಕುಮಾರ್ ದೇಸಾಯಿ ಅವರ ನಿರ್ದೇಶನದಲ್ಲಿ ಮೂಡಿಬಂದ ಸ್ಪರ್ಶ ಚಿತ್ರದ ಮೂಲಕ ನಾಯಕ ನಟರಾಗಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಕಿಚ್ಚ ಸುದೀಪ್, ತನ್ನ ಕಂಚಿನ ಕಂಠ, ವಿಭಿನ್ನ ಮ್ಯಾನರಿಸಂ ವಿಶಿಷ್ಟ ಅಭಿನಯದ ಮೂಲಕ ಇಂದು ದಕ್ಷಿಣ ಭಾರತದಲ್ಲಿ ಪ್ರಖ್ಯಾತ ನಟರಾಗಿ ಗುರುತಿಸಿಕೊಂಡಿದ್ದಾರೆ.

ಸುದೀಪ್ ಅವರು ಚಿತ್ರರಂಗಕ್ಕೆ ಬಂದು ಇಪ್ಪತ್ತೈದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಮ್ಮ ಚಾರಾಟೇಬಲ್ ಟ್ರಸ್ಟ್ ಮೂಲಕ ಮೂಕ ಪ್ರಾಣಿಗಳಿಗೆ ಅದರಲ್ಲಿಯೂ ಬೀದಿನಾಯಿಗಳಿಗೆ ಆಶ್ರಯ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬುದ್ದಿ ಹೊಂದಿರುವ ಮನುಷ್ಯರಾದ ನಮಗೆ ಕೆಲವು ಸಂಧರ್ಭಗಳಲ್ಲಿ ಅಸಹಾಯಕರಾಗಿ ಬಿಡುತ್ತೇವೆ. ಅಂತದರಲ್ಲಿ ಮಾತುಬಾರದ ತನ್ನ ಕಷ್ಟ ಸುಖ ಹೇಳಲಾಗದ ಮೂಕ ಪ್ರಾಣಿಯ ಸ್ಥಿತಿ ಏನಾಗಬಾರದು ಇಂತಹ ಸೂಕ್ಷ್ಮತೆಯನ್ನು ಗಮನಿಸಿದ ಸುದೀಪ್ ಅವುಗಳಿಗೆ ಆಶ್ರಯ ನೀಡುವ ಕಾರ್ಯವನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ವಿಚಾರ ತಿಳಿದ ಮೇನಕಾಗಾಂಧಿ (founder of people for animals) ಕರೆ ಮಾಡಿ ಭಾರತೀಯ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದಕ್ಕಾಗಿ ಶುಭಾಶಯ ಕೋರಿದ್ದು, ಜೊತೆಗೆ ಬೀದಿ ನಾಯಿಗಳಿಗೆ ಆಶ್ರಯ ನೀಡುವ ಇವರ ಮಾನವೀಯ ಕಾರ್ಯಕ್ಕೆ ಶ್ಲಾಘಸಿದ್ದಾರೆ.

ಇನ್ನು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಧರಣೆಯಲ್ಲಿ ರೈತರ ಹಿತರಕ್ಷಣೆಯ ದೃಷ್ಟಿಯಿಂದ ಐನೂರು ಬ್ಯ್ಲಾಂಕೆಟ್ ಗಳನ್ನು ಕಳುಹಿಸಿದ್ದಾರೆ. ವಿಶೇಷ ಚೇತನರಿಗೆ ಸಹಾಯ ಮತ್ತು ಸುಶ್ಮಾಂತ್ ಎಂಬ ಯುವಕ ಬದುಕುವ ಉತ್ಸಾಹ, ಭರವಸೆ ಕಳೆದುಕೊಂಡಿದ್ದವನಿಗೆ ಜೀವನ ರೂಪಿಸಿ ಕೊಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಾದ ಎ.ಟಿ.ರಘು ಅವರಿಗೆ ಕರೆ ಮಾಡಿ ನನ್ನ ಕೈಲಾದಷ್ಟು ಸಹಾಯ ಮಾಡೀತ್ತೇನೆ. ಧೈರ್ಯವಾಗಿರಿ ನಿಮ್ಮ ಜೊತೆ ನಾವಿದ್ದೇವೆ ಎಂದು ಸಾಂತ್ವಾನದ ಮಾತುಗಳನ್ನು ಆಡಿದ್ದಾರೆ, ಹೀಗೆ ಕಿಚ್ಚ ಸುದೀಪ್ ಅವರು ಪರದೆಯಲ್ಲಿ ಮಾತ್ರ ಹೀರೋ ಆಗಿರದೇ ನಿಜ ಜೀವನದಲ್ಲಿಯೂ ಸಹ ನಾಯಕ ಗುಣಗಳನ್ನು ಹೊಂದಿದ್ದಾರೆ.