ಸ್ಯಾಂಡಲ್ ವುಡ್ ನಟ ರಾಕ್ಷಸ ಡಾಲಿ ಧನಂಜಯ್ ಮತ್ತು ನಟಿ ಅಮೃತಾ ಅಯ್ಯಂಗಾರ್ ಅಭಿನಯದ ಬಡವ ರಾಸ್ಕಲ್ ಚಿತ್ರ ಇದೇ ಡಿಸೆಂಬರ್24 ಕ್ರಿಸ್ ಮಸ್ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕುಡಿಯೋದಕ್ಕೆ ಮುಂಚೆ ಅವ್ನು ಅಮಾಯಕ. ಕುಡಿದ್ಮೇಲೆ ಅವ್ನು ಅಮ್ಮ ಅಕ್ಕ ಎಂಬ ಕ್ಯಾಚಿ ಡೈಲಾಗ್, ಮಧ್ಯಮ ವರ್ಗದ ಪೋಷಕರ ತೊಳಲಾಟ, ಪ್ರೀತಿ ಪ್ರೇಮ ವೈಫಲ್ಯ, ಸ್ನೇಹಿತರಗೋಸ್ಕರ ಏನು ಬೇಕಾದರು ಮಾಡಲು ಸಿದ್ದವಿರುವ ವ್ಯಕ್ತಿತ್ವವೊಂದಿರುವ ಆಟೋ ಡ್ರೈವರ್ ಪಾತ್ರದಲ್ಲಿ ಧನಂಜಯ್ ಮಿಂಚಿರುವ ಒಂದಷ್ಟು ರೋಚಕ ದೃಶ್ಯಗಳಿರುವ ಟ್ರೇಲರ್ ನೋಡಿದ ಡಾಲಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಡಾಲಿ ಧನಂಜಯ್ ಅವರಿಗೆ ಜೋಡಿಯಾಗಿ ಈ ಹಿಂದೆ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ಅಮೃತಾ ಅಯ್ಯಂಗಾರ್ ಮತ್ತೊಮ್ಮೆ ಧನಂಜಯ್ ಅವರ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಧನಂಜಯ್ ತಂದೆಯಾಗಿ ರಂಗಾಯಣ ರಘು, ತಾಯಿಯಾಗಿ ತಾರಾ ನಟಿಸಿದ್ದಾರೆ. ವಿಶೇಷ ಅಂದರೆ ಸ್ಪರ್ಶ ಸಿನಿಮಾ ಖ್ಯಾತಿಯ ರೇಖಾ ಕೂಡ ಸ್ಪೆಷಲ್ ಕ್ಯಾರೆಕ್ಟರ್ ನಲ್ಲಿ ನಟಿಸಿದ್ದಾರಂತೆ. ನಾಗಭೂಷಣ್, ಪೂರ್ಣಚಂದ್ರ, ಮಠ ನಿರ್ದೇಶಕ ಗುರು ಪ್ರಸಾದ್ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ನಟ ಡಾಲಿ ಧನಂಜಯ್ ಇದೇ ಮೊದಲ ಬಾರಿಗೆ ಡಾಲಿ ಪಿಕ್ಚರ್ಸ್ ಬ್ಯಾನರಡಿಯಲ್ಲಿ ಈ ಬಡವ ರಾಸ್ಕಲ್ ಚಿತ್ರಕ್ಕೆ ತಾವೇ ಬಂಡವಾಳ ಹೂಡಿದ್ದಾರೆ. ಮಠ ಗುರು ಪ್ರಸಾದ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಶಂಕರ್ ಗುರು ಅವರು ಬಡವ ರಾಸ್ಕಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಕಥೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಕೂಡ ಅವರೇ ಬರೆದಿದ್ದಾರೆ.

ವಾಸುಕಿ ವೈಭವ್ ಅವರ ಸಾಹಿತ್ಯ ಸಂಗೀತ ಇದ್ದು, ಆಗಾಗ ನೆನಪಾಗುತ್ತಾಳೆ ಎಂಬ ಹಾಡು ಸೂಪರ್ ಹಿಟ್ ಆಗಿದ್ದು ಈ ಸಾಂಗ್ ಬಡವ ರಾಸ್ಕಲ್ ಚಿತ್ರಕ್ಕೆ ಸಖತ್ ಮೈಲೇಜ್ ನೀಡುತ್ತಿದೆ. ಇನ್ನು ಮಧ್ಯಮ ವರ್ಗ ಕುಟುಂಬವೊಂದರ ಯುವಕನ ಕಥೆಯನ್ನೊಂದಿರುವ ಬಡವ ರಾಸ್ಕಲ್ ಚಿತ್ರಕ್ಕೆ ಪ್ರೀತ ಜಯರಾಮನ್ ಕ್ಯಾಮರಾ ವರ್ಕ್ ಮಾಡಿದ್ದು, ಸಂಕಲನ ಕೆಲಸವನ್ನು ನಿರಂಜನ್ ದೇವರ ಮನೆ ನಿರ್ವಹಿಸಿದ್ದಾರೆ. ವಿನೋದ್ ಸಾಹಸ ನಿರ್ದೇಶನ ಮಾಡಿದ್ದಾರೆ. ಇನ್ನು ಕೆ.ಆರ್.ಜಿ ಸ್ಟೂಡಿಯೋಸ್ ಸಂಸ್ಥೆಯ ಕಾರ್ತಿಕ್ ಗೌಡ ಅವರು ಈ ಬಡವ ರಾಸ್ಕಲ್ ಚಿತ್ರದ ಬಿಡುಗಡೆಯ ಜವಬ್ದಾರಿಯನ್ನು ಹೊತ್ತಿದ್ದಾರೆ.