ಸ್ಯಾಂಡಲ್ ವುಡ್ ನಲ್ಲಿ ಹಲವು ದಿನಗಳಿಂದ ಲವ್ ಮಾಕ್ಟೇಲ್ ಜ್ವರ ಅಂಟಿಕೊಂಡಿತ್ತು. ಡಾರ್ಲಿಂಗ್ ಕೃಷ್ಣ ಅವರು ಸ್ವತಃ ನಟಿಸಿ, ನಿರ್ದೇಶಸಿದ ಲವ್ ಮಾಕ್ಟೇಲ್ 2 ಚಿತ್ರ ಯಾವಾಗ ನೋಡಬಹುದೆಂದು ಜನ ಕಾದು ಕುಳಿತಿದ್ದರು. ಲವ್ ಮಾಕ್ಟೇಲ್ ಚಿತ್ರದ ರಿಲೀಸ್ ನಂತರ, ಚಿತ್ರದ ಬಗ್ಗೆ ಜನರಾಡುವ ಮಾತುಗಳನ್ನು ಕೇಳಿದರೆ ಡಾರ್ಲಿಂಗ್ ಕೃಷ್ಣ ಅವರು ಸ್ಯಾಂಡಲ್ವುಡ್ನ ಭರವಸೆಯ ನಟ ಹಾಗೂ ನಿರ್ದೇಶಕ ಎಂದರೆ ತಪ್ಪಾಗಲಾರದು. ಲವ್ ಮಾಕ್ಟೇಲ್ ಚಿತ್ರವೊಂದರ ಯಶಸ್ಸಿನ ನಂತರ ಡಾರ್ಲಿಂಗ್ ಕೃಷ್ಣ ಅವರು ಲವ್ ಮಾಕ್ಟೇಲ್ ಟು ಚಿತ್ರದಲ್ಲೂ ಜನರ ನಿರೀಕ್ಷೆಯನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಆದಿ ಹಾಗೂ ನಿಧಿಮಾ ಅವರ ಜೋಡಿಯನ್ನು ಇಡೀ ಕರ್ನಾಟಕವೇ ಮೆಚ್ಚಿಕೊಂಡಿತ್ತು.

ಆದಿ ಹಾಗೂ ನಿಧಿಮಾ ಲವ್ ಸ್ಟೋರಿಯ ಮುಂದುವರೆದ ಕಥೆಯ ಮೇಲೆ ಜನರು ತುಂಬಾ ಭರವಸೆ ಇಟ್ಟುಕೊಂಡಿದ್ದರು. ನಿರ್ದೇಶನದಲ್ಲಿ ಕೃಷ್ಣ ಅವರು ಮತ್ತೆ ಎಲ್ಲರ ಮನಸ್ಸು ಗೆಲ್ಲುತ್ತಾರಾ ಎಂಬ ಪ್ರಶ್ನೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇತ್ತು. ಆದರೆ ಇದೆಲ್ಲಾ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದ್ದು, ಕೃಷ್ಣ ಅವರ ಲವ್ ಮಾಕ್ಟೇಲ್ ಸಿಕ್ವೆಲ್ ನೋಡಿದ ಪ್ರೇಕ್ಷಕರು ಚಪ್ಪಾಳೆ ಹೊಡೆಯುತ್ತಿದ್ದಾರೆ. ಮೊದಲ ದಿನ ಲವ್ ಮಾಕ್ಟೇಲ್ ಚಿತ್ರ ನೋಡಿದ ಜನರು ಫಿದಾ ಆಗಿದ್ದಾರೆ. ಕೃಷ್ಣ ಸೂಪರ್ ಆಕ್ಟಿಂಗ್, ಸೂಪರ್ ಎಂದು ಜನರು ಜೈಕಾರ ಹಾಕಿದರು. ಎರಡನೇ ಭಾಗದಲ್ಲಿ ಕಾಮಿಡಿ ಸೀನ್, ಡೈಲಾಗ್, ಎಮೋಷನ್, ಕ್ಯಾರೆಕ್ಟರ್ ಗಳ ಬಳಕೆ, ಲೊಕೇಶನ್, ಹಾಡುಗಳು, ಮ್ಯೂಸಿಕ್ ಹೀಗೆ ಎಲ್ಲ ವಿಭಾಗದಲ್ಲೂ ತುಂಬಾ ಅಚ್ಚುಕಟ್ಟಾಗಿ ಚಿತ್ರತಂಡ ಪ್ರೆಸೆಂಟ್ ಮಾಡಿದ್ದಾರೆ.

ಚಿತ್ರದ ಆರಂಭದಿಂದಲೇ ಪ್ರೇಕ್ಷಕರ ಜೊತೆ ಕನೆಕ್ಟ್ ಆಗುವಂತೆ ಸ್ಕ್ರೀನ್ ಪ್ಲೇ ಮಾಡಿಕೊಂಡು ಜನರ ಮನಸ್ಸನ್ನು ಗೆಲ್ಲುವಲ್ಲಿ ಸಫಲರಾಗಿದ್ದಾರೆ. ನಿಧಿ ಮಾ ಅವರ ಸಾವಿನೊಂದಿಗೆ ಮೊದಲ ಭಾಗಕ್ಕೆ ಫುಲ್ ಸ್ಟಾಪ್ ಇಟ್ಟಿದ್ದ ಕೃಷ್ಣ ಎರಡನೆ ಭಾಗದಲ್ಲಿ ತನ್ನ ಪ್ರೀತಿಯನ್ನು ರಿಸ್ಟಾರ್ಟ್ ಮಾಡುತ್ತಾರೆ. ನಿಧಿ ಇಲ್ಲದ ಬದುಕಿನಲ್ಲಿ ಬಾಳ ಸಂಗಾತಿಯನ್ನು ಹುಡುಕುವ ಆದಿಯಾಗಿ ಕೃಷ್ಣ ಕಾಣಿಸಿಕೊಂಡಿದ್ದಾರೆ. ಜೊತೆಗೆ ಹೊಸನಟಿಯರ ಎಂಟ್ರಿ ಕೂಡ ಹೊಸತನದ ಟಚ್ ಕೊಟ್ಟಿದೆ. ಈ ಚಿತ್ರದಲ್ಲಿ ಮತ್ತೆ ನಿಧಿಮಾ ಇರ್ತಾರಾ ಎಂದುಕೊಂಡು ಹೋದ ಅಭಿಮಾನಿಗಳಿಗೆ ಸರ್ಪ್ರೈಸ್ ಸಿಗುವುದಂತೂ ಗ್ಯಾರಂಟಿ.

ಲವ್ ಮಾಕ್ಟೇಲ್ ಭಾಗ ಒಂದನ್ನು ನೋಡಿದರೆ ಮಾತ್ರ ಲವ್ ಮಾಕ್ಟೇಲ್ ಭಾಗ 2 ಅರ್ಥವಾಗುತ್ತದೆ. ಈ ಚಿತ್ರವನ್ನು ಜನರ ಜೊತೆಗೆ ಕುಳಿತು ಕೃಷ್ಣ ಮತ್ತು ಮಿಲನ ಇಬ್ಬರೂ ವೀಕ್ಷಿಸಿದರು. ಆಡಿಯನ್ಸ್ ಖುಷಿ ಪಡುತ್ತಿದ್ದದ್ದನ್ನು ನೋಡಿ ಇವರಿಬ್ಬರು ಗೆಲುವಿನ ನಗೆ ಬೀರಿದರು. ಕೃಷ್ಣ, ಮಿಲನ ಜೊತೆ ಅಮೃತ ಅಯ್ಯಂಗಾರ್, ರಚೆಲ್, ಸುಶ್ಮಿತಾ, ಖುಷಿ, ಅಭಿಲಾಷ, ರಚನಾ ಸೇರಿದಂತೆ ಎಲ್ಲರೂ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ನಟನೆ ಹಾಗೂ ನಿರ್ದೇಶನದಲ್ಲಿ ಕೃಷ್ಣ ಮತ್ತೊಮ್ಮೆ ಗೆದ್ದಿದ್ದಾರೆ. ನಿರ್ಮಾಪಕಿಯಾಗಿ ಮಿಲನ ನಾಗರಾಜ್ ಕೂಡ ಗೆದ್ದಿದ್ದಾರೆ. ಸಿನಿಮಾ ನೋಡಿ ಆಚೆ ಬರುತ್ತಿದ್ದ ಪ್ರೇಕ್ಷಕರು ಲವ್ ಮಾಕ್ಟೇಲ್ 3 ಚಿತ್ರಕ್ಕಾಗಿ ಕಾಯುತ್ತಿದ್ದೇವೆ ಎಂದು ಸಹ ಹೇಳಿದರು. ಇದರಿಂದಲೇ ಚಿತ್ರದ ಯಶಸ್ಸು ಅರ್ಥವಾಗುತ್ತದೆ.