ದೊಡ್ಡ ಮೊತ್ತಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಹೊಸ ಚಿತ್ರದ ಸ್ಯಾಟಲೈಟ್ ಹಕ್ಕುಗಳು ಮಾರಾಟ

ಗೋಲ್ಡನ್ ಸ್ಟಾರ್ ಗಣೇಶ್, ದೂದ್ ಪೇಡಾ ದಿಗಂತ್ ಹಾಗೂ ರಾಜೇಶ್ ಕೃಷ್ಣನ್ ಅಭಿನಯಿಸಿದ ಸಖತ್ ಹಿಟ್ ಸಿನಿಮಾ ಗಾಳಿಪಟ. ಗಾಳಿಪಟ ಚಿತ್ರದ ಯಶಸ್ಸಿನ ನಂತರ ವಿಕಟಕವಿ ಯೋಗರಾಜ್ ಭಟ್ ಗಾಳಿಪಟ2 ಚಿತ್ರಕ್ಕೆ ಕೈ ಹಾಕಿದ್ದರು. ಈಗಾಗಲೇ ಪೋಸ್ಟರ್ ನಿಂದ ಸಕ್ಕತ್ ಸದ್ದು ಮಾಡುತ್ತಿರುವ ಗಾಳಿಪಟ2 ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ನಟಿಸುತ್ತಿದ್ದು, ರಾಜೇಶ್ ಕೃಷ್ಣನ್ ಅವರ ಪಾತ್ರದ ಬದಲಾಗಿ ಲೂಸಿಯಾ ನಿರ್ದೇಶಕ ಪವನ್ ಕುಮಾರ್ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ಪವನ್ ಕುಮಾರ್ ಹಿಂದೆ ಯೋಗರಾಜ್ ಭಟ್ ಅವರ ಮನಸಾರೆ, ಪಂಚರಂಗಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನೂ ನಾಯಕಿಯಾಗಿ ವೈಭವಿ ಶಂಡಿಲ್ಯ, ಸಂಯುಕ್ತ ಮೆನನ್ ಮತ್ತು ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ. ಇನ್ನೂ ವಿಶೇಷವೆಂದರೆ ಈ ಚಿತ್ರದಲ್ಲಿ ಗಣೇಶ್ ಅವರ ಪುತ್ರ ವಿಹಾನ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮುಂಗಾರು ಮಳೆ, ಗಾಳಿಪಟ, ಮುಗುಳುನಗೆ ಸಿನಿಮಾ ಬಳಿಕ ಯೋಗರಾಜ್ ಭಟ್ ಹಾಗೂ ಗಣೇಶ್ ಅವರ ಕಾಂಬಿನೇಷನ್ನಲ್ಲಿ ಇದು ನಾಲ್ಕನೇ ಚಿತ್ರವಾಗಿದೆ. ರಮೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ನೀಡಿದ್ದಾರೆ. ವಿಜಯ್ ಪ್ರಕಾಶ್ ಅವರ ಧ್ವನಿಯಲ್ಲಿ ಹಾಡುಗಳು ಮೂಡಿ ಬಂದಿದ್ದು, ಹಿರಿಯ ನಟ ಅನಂತನಾಗ್ ಅವರು ಕನ್ನಡ ಮೇಷ್ಟ್ರು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪ್ರಮುಖ ಸೀನುಗಳನ್ನು ಕುದುರೆಮುಖದಲ್ಲಿ ಚಿತ್ರೀಕರಣ ಮಾಡಲಾಗಿದೆ. ಕುದುರೆಮುಖದಲ್ಲಿನ ಪ್ರಕೃತಿ ಸೌಂದರ್ಯದ ಮಧ್ಯೆ ಹಲವು ದೃಶ್ಯಗಳನ್ನು ಶೂಟ್ ಮಾಡಿದ್ದು, ಪ್ರೇಕ್ಷಕರ ಕಣ್ಣಿಗೆ ಇದು ಹಬ್ಬದ ರೀತಿ ಕಾಣಿಸುತ್ತದೆ. ಅನಂತನಾಗ್ ಮತ್ತು ಮೂರು ಜನ ನಾಯಕರ ನಡುವಿನ ದ್ರಶ್ಯಗಳು ಸಿನಿಮಾದಲ್ಲಿ ಹೈಲೈಟ್ ಆಗುತ್ತದೆ.

ಇನ್ನೂ ನಿರ್ದೇಶಕ ಯೋಗರಾಜ್ ಭಟ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಇದು ಈ ಹೊತ್ತಿನ ಖುಷಿ ಸುದ್ದಿ. ಗಾಳಿಪಟ ಚಿತ್ರದೊಳಗಿನ ನಿಮ್ಮ ಕುತೂಹಲ ಮತ್ತು ಪ್ರೀತಿಯ ಫಲಿತಾಂಶ. ಸದಾ ಹರಸಿ. ಜೈ ಗಾಳಿಪಟ 2, ಜೈ ನಿರ್ಮಾಪಕರು, ಜೈ ಹೀರೋ, ಜೈ ತಂಡ, ಜೈ ಜೀಕನ್ನಡ, ಜೈ ಕರ್ನಾಟಕ ಎಂದು ಬರೆದುಕೊಂಡಿದ್ದಾರೆ. ಬಿಡುಗಡೆಗೂ ಮುನ್ನವೇ ಗಾಳಿಪಟ2 ಚಿತ್ರಕ್ಕೆ ದಾಖಲೆಯೊಂದು ಸೇರಿಕೊಂಡಿದೆ. ಹೌದು ಗಾಳಿಪಟ2 ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕನ್ನು ಜೀ ಕನ್ನಡ ಮತ್ತು ಜೀ5 ಭಾರಿ ಮೊತ್ತಕ್ಕೆ ಖರೀದಿಸಿದೆ. ಇದಷ್ಟೇ ಅಲ್ಲದೆ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಸಂಸ್ಥೆ ಪಡೆದುಕೊಂಡಿದೆ. ಇದೆಲ್ಲದರಿಂದ ಈ ಚಿತ್ರಕ್ಕೆ 8 ಕೋಟಿ ರೂಪಾಯಿಗೂ ಹೆಚ್ಚು ಹಣ ಬಿಡುಗಡೆಗೂ ಮುಂಚೆಯೇ ನಿರ್ಮಾಪಕರ ಖಾತೆಯನ್ನು ಸೇರಿದೆ. ಈ ಬಗ್ಗೆ ನಿರ್ಮಾಪಕ ರಮೇಶ್ ರೆಡ್ಡಿ ಅವರೇ ಖಚಿತಪಡಿಸಿದ್ದಾರೆ.

%d bloggers like this: