ನಮ್ಮ ಆರೋಗ್ಯ ಸುಸ್ಥಿರವಾಗಿರಲು ದಿನನಿತ್ಯದ ಆಹಾರದಲ್ಲಿ ಹಸಿ ತರಕಾರಿಗಳನ್ನು ಬಳಸಬೇಕು ಎಂಬುದು ಗೊತ್ತಿರುವ ಸಂಗತಿ. ಸೂಪರ್ ಫುಡ್ ಎಂದು ಕರೆಯಲ್ಪಡುವ ಅಣಬೆ, ತರಕಾರಿಗಳಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ಸೂಪರ್ ಫುಡಗಳು ಎಂದರೆ ಅದಕ್ಕೆ ರಾಸಾಯನಿಕಗಳು ಸೇರ್ಪಡೆಯಾಗಿರುತ್ತವೆ ಎಂಬ ನಿಯಮವೇನು ಇಲ್ಲ. ಕೆಲವೊಂದು ಸೂಪರ್ ಫುಡ್ ಗಳು ಪ್ರಕೃತಿಯಲ್ಲಿ ತಮ್ಮಿಂದ ತಾವೇ ಬೆಳೆಯುತ್ತವೆ. ಅಂತಹ ಆಹಾರಗಳಲ್ಲಿ ಅಣಬೆಗಳು ಕೂಡ ಒಂದು. ಮೊದಲು ಈ ಅಣಬೆಗಳು ಮಳೆಗಾಲದಲ್ಲಿ ಹುತ್ತ, ಹೊಲ ಗದ್ದೆಗಳ ಬಳಿಯಲ್ಲಿ ತನ್ನಷ್ಟಕ್ಕೆ ತಾನೇ ಬೆಳೆಯುತ್ತಿದ್ದವು. ಆದರೆ ಈಗ ತಂತ್ರಜ್ಞಾನ ಉಪಯೋಗಿಸಿ ಕೃತಕವಾಗಿ ಇವುಗಳನ್ನು ಬೆಳೆಯಲಾಗುತ್ತಿದೆ.

ಕೃತಕವಾಗಿ ಬೆಳೆದರೂ, ಪ್ರಾಕೃತಿಕವಾಗಿ ಬೆಳೆದರೂ, ಅಣಬೆಗಳು ತಮ್ಮೊಳಗೆ ಯಥೇಚ್ಛವಾದ ಪ್ರೋಟೀನ್ ಗಳನ್ನು, ವಿಟಮಿನ್ ಗಳನ್ನು, ಖನಿಜಾಂಶಗಳನ್ನು, ಅಮೈನೋ ಆಮ್ಲಗಳನ್ನು ಮತ್ತು ಆಂಟಿ ಆಕ್ಸಿಡಂಟ್ ಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ದೇಹಕ್ಕೆ ನಾನಾ ರೀತಿಯಲ್ಲಿ ಲಾಭಗಳಾಗುವುದುಂಟು. ಅಣಬೆಯನ್ನು ಆಡುಭಾಷೆಯಲ್ಲಿ ನಾಯಿಕೊಡೆ ಅಥವಾ ಮಶ್ರೂಮ್ ಎಂದು ಕರೆಯುತ್ತೇವೆ. ಅಣಬೆಗಳಲ್ಲಿ ನಾನಾ ಬಗೆಗಳಿದ್ದು, ಅವುಗಳಲ್ಲಿ ಕೆಲವೊಂದು ವಿಷಕಾರಿ ಕೂಡ ಹೌದು. ಹಾಗಾಗಿ ಅವುಗಳನ್ನು ಸರಿಯಾಗಿ ಗುರುತಿಸಿ ಸೇವಿಸುವುದು ಅತಿ ಮುಖ್ಯವಾಗಿರುತ್ತದೆ. ಅನೇಕ ಜನರು ಮಾಡಿದ ಅಡುಗೆಗೆ ರುಚಿ ಹೆಚ್ಚು ಬರಲೆಂದು, ರುಚಿ ಹಾಗೂ ಪರಿಮಳ ವರ್ಧಕಗಳಾಗಿ ಅಣಬೆಯನ್ನು ಬಳಸುತ್ತಾರೆ. ಆದರೆ ಅಣಬೆಗಳನ್ನು ದಿನನಿತ್ಯ ಉಪಯೋಗಿಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ತಿಳಿಯುವುದು ಉತ್ತಮ.
ಅಣಬೆಯು ಕಡಿಮೆ ಪ್ರಮಾಣದ ಕ್ಯಾಲೋರಿಯನ್ನು ಒಳಗೊಂಡಿರುವುದರಿಂದ ಇದು ದೇಹದಲ್ಲಿರುವ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬುಗಳನ್ನು ಕಡಿಮೆಮಾಡುತ್ತದೆ. ಜೊತೆಗೆ ಇದು ಅಧಿಕ ಪ್ರಮಾಣದ ಪ್ರೋಟೀನ್ ಗಳಿಂದ ಕೂಡಿದೆ. ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರು ಅಣಬೆಯನ್ನು ತಪ್ಪದೇ ದಿನನಿತ್ಯ ಸೇವಿಸುವುದರಿಂದ ದೇಹದಲ್ಲಿ ಇರುವ ಕೊಬ್ಬುಗಳನ್ನು ಸುಲಭವಾಗಿ ಕರಗಿಸಲು ಸಹಾಯವಾಗುತ್ತದೆ. ಅಣಬೆಯು ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ದೊರೆಯುವಂತೆ ಮಾಡುತ್ತದೆ ಹಾಗೂ ದೇಹದ ಚಯಾಪಚಯ ಕ್ರಿಯೆಗಳನ್ನು ಹೆಚ್ಚಿಸುತ್ತದೆ. ಅಣಬೆಯಲ್ಲಿ ವಿಟಮಿನ್ ಬಿ ಇರುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. ಅಲ್ಲದೆ ದೇಹದ ಅಂಗಾಂಗಗಳು ಕ್ರಿಯಾಶೀಲವಾಗಿ ಕೆಲಸ ಮಾಡುವಂತೆ ಮಾಡುತ್ತದೆ.



ಇದರ ಸೇವನೆಯಿಂದ ದೇಹಕ್ಕೆ ಕಬ್ಬಿಣದ ಅಂಶ ದೊರೆಯುವುದರಿಂದ ಹಿಮೋಗ್ಲೋಬಿನ್ ಮತ್ತು ಕೆಂಪುರಕ್ತಕಣಗಳು ಹೆಚ್ಚಾಗುತ್ತವೆ. ಅಣಬೆಯ ಸೇವನೆಯಿಂದ ದೇಹದಲ್ಲಿ ಇರುವ ಪೋಷಕಾಂಶದ ಕೊರತೆಯನ್ನು ನಾವು ನೀಗಿಸಿಕೊಳ್ಳಬಹುದು ಇದು ದೇಹಕ್ಕೆ ವರ್ಧಿತ ಪೋಷಣೆಯನ್ನು ನೀಡುತ್ತದೆ. ಅಣಬೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದು ನೇರ ಪ್ರೊಟೀನ್ ನ್ನು ಒಳಗೊಂಡಿರುವುದರಿಂದ ದೇಹಕ್ಕೆ ಅಗತ್ಯವಾದ ಫೈಬರ್ ನ್ನು ನೀಡುವುದರ ಜೊತೆಗೆ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ಕಿಣ್ವಗಳನ್ನು ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ. ನಮ್ಮ ದೇಹಕ್ಕೆ ವಿಟಮಿನ್ ಡಿ ಎಷ್ಟು ಅವಶ್ಯಕ ಎಂಬುದನ್ನು ನಾವು ತಿಳಿದಿದ್ದೇವೆ. ನಮ್ಮ ದೇಹದಲ್ಲಿ ವಿಟಮಿನ್ ಡಿ ಅಂಶವನ್ನು ಹೆಚ್ಚಿಸಿಕೊಳ್ಳಲು ನಾವು ಸೂರ್ಯನ ಕಿರಣ ಪಡೆಯುವುದು ಹಾಗೂ ಕೆಲವು ಆಹಾರ ಪದಾರ್ಥಗಳನ್ನು ಸೇವಿಸಬೇಕು. ಅಂತಹ ಆಹಾರ ಪದಾರ್ಥಗಳಲ್ಲಿ ಅಣಬೆಯು ಕೂಡ ಒಂದು.



ಬಿಳಿ ಅಣಬೆಗಳು ಕ್ಯಾಲ್ಸಿಯಂ ಹೊಂದಿರುವುದರಿಂದ ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ. ಬಿಳಿ ಅಣಬೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಮೂಳೆಗೆ ಸಂಬಂಧಿಸಿರುವ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ನೈಸರ್ಗಿಕ ಇನ್ಸುಲಿನ್ ರೀತಿಯಲ್ಲಿ ಅಣಬೆಯು ಕಿಣ್ವಗಳನ್ನು ಒಳಗೊಂಡಿರುತ್ತದೆ ಹಾಗೂ ಕಾರ್ಬೋಹೈಡ್ರೇಟ್, ಹೆಚ್ಚಿನ ಪ್ರೋಟೀನ್, ಖನಿಜಗಳು ಮತ್ತು ಜೀವಸತ್ವಗಳಿಂದ ಮುಕ್ತವಾಗಿದ್ದು, ಮಧುಮೇಹಿಗಳಿಗೆ ಉತ್ತಮ ಆಹಾರವಾಗಿದೆ. ದೇಹದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವುದು ಹಾಗೂ ನಿಯಂತ್ರಣದಲ್ಲಿಡುವುದನ್ನು ಅಣಬೆ ಮಾಡುತ್ತದೆ.



ವಿವಿಧ ಸಂಶೋಧನೆ ಹಾಗೂ ಅಧ್ಯಯನಗಳ ಪ್ರಕಾರ ಅಣಬೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದು ತಿಳಿದುಬಂದಿದೆ. ನಮ್ಮ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಒದಗಿಸುವ ಮೂಲಕ ನಮ್ಮ ರಕ್ಷಣಾ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಅಣಬೆಗಳು ಬ್ಯಾಕ್ಟೀರಿಯಾ ವಿರೋಧಿಗಳಾಗಿರುವುದರಿಂದ ನಮ್ಮ ದೇಹವನ್ನು ವೈರಸ್ ಹಾಗೂ ಬ್ಯಾಕ್ಟೀರಿಯಾ ದಂತಹ ಸೋಂಕುಗಳಿಂದ ಯಾವುದೇ ಹಾನಿ ಉಂಟಾಗದಂತೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ. ಅಣಬೆಯು ಹೇರಳವಾದ ಸತುವನ್ನು ಒಳಗೊಂಡಿದ್ದು, ಮಹಿಳೆಯರಿಗೆ ಹಾಗೂ ಪುರುಷರಿಗೆ ಉತ್ತಮ ಫಲವಂತಿಕೆ ಹಾಗೂ ಲೈಂಗಿಕ ಆರೋಗ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಅಲ್ಲದೆ ವೀರ್ಯಾಣುಗಳ ಸಂಖ್ಯೆ ಹೆಚ್ಚಳವಾಗುವಲ್ಲಿ ಸಹಾಯ ಮಾಡುತ್ತದೆ.



ಅಲ್ಲದೆ ಪುರುಷರಿಗೆ ಜನನಾಂಗದ ಅಂಗಗಳ ಪುನಸ್ಥಾಪನೆಗೆ ಸಹಾಯ ಮಾಡುತ್ತದೆ. ಅಣಬೆಗಳು ಪರಿಣಾಮಕಾರಿಯಾದ ಪಾಲಿ ಸ್ಯಾಕರೈಡ್ ಗಳನ್ನು ಹೊಂದಿದೆ. ಇವು ಆಂಟಿಟ್ಯೂಮರ್ ಏಜೆಂಟ್ ಗಳಾಗಿರುವುದರಿಂದ, ದೇಹದೊಳಗೆ ಕ್ಯಾನ್ಸರ್ ಕೋಶಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಿಳಿರಕ್ತಕಣಗಳನ್ನು ಹೆಚ್ಚಿಸುತ್ತವೆ. ಬಿಳಿ ರಕ್ತಕಣಗಳು ಕ್ಯಾನ್ಸರ್ ಕೋಶಗಳ ರಚನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪ್ರಾಸ್ಟೇಟ್, ಸ್ತನ, ರಕ್ತ ಸೇರಿದಂತೆ ಇನ್ನಿತರ ಕ್ಯಾನ್ಸರ್ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯವಾಗುತ್ತದೆ.