ಚಹಾ ಸೇವನೆ ಎಲ್ಲರ ಅಚ್ಚು ಮೆಚ್ಚು. ಸಾಮಾನ್ಯವಾಗಿ ಚಹಾ ಕುಡಿಯುವವರಿಗೆ, ಬೆಳ್ಳಿಗೆ ಮತ್ತು ಸಾಯಂಕಾಲ ಚಹಾ ಸೇವನೆ ಇಲ್ಲದೇ ದಿನ ಆರಂಭವೂ ಆಗುವುದಿಲ್ಲ, ಅಂತ್ಯವೂ ಆಗುವುದಿಲ್ಲ. ಚಹಾ ವನ್ನು ಇಂಗ್ಲೀಷ್ ನಲ್ಲಿ ಸ್ಟ್ರೆಸ್ ಬಸ್ಟರ್ ಎಂದು ಕರೆಯುತ್ತಾರೆ. ಚಹಾ ಸೇವನೆಯಿಂದ ಒಂದು ರೀತಿಯ ರಿಲ್ಯಾಕ್ಸ್ ಭಾವನೆ ಉಂಟಾಗುತ್ತದೆ. ಚಹಾದಲ್ಲಿ ವಿಧ ವಿಧವಾದ ಬಗೆಗಳಿವೆ. ಗ್ರೀನ್ ಟಿ, ಜಿಂಜರ್ ಟಿ, ಬ್ಲಾಕ್ ಟಿ, ಮಿಲ್ಕ್ ಟಿ ಹೀಗೆ ಅನೇಕ ರೀತಿಯ ಚಹಾವನ್ನು ಕುಡಿಯುತ್ತಾರೆ. ಅದೇ ರೀತಿ ಚಹಾದಲ್ಲಿ ತುಳಸಿಯನ್ನು ಬೆರೆಸಿ ತುಳಸಿ ಟಿ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ತುಳಸಿ ಗಿಡಕ್ಕೆ ಅತಿ ಹೆಚ್ಚಿನ ಮಹತ್ವವಿದೆ. ಪ್ರತಿಯೊಬ್ಬರ ಮನೆಯ ಎದುರು ತುಳಸಿಗಿಡವಿರುತ್ತದೆ.

ಈ ಗಿಡವನ್ನು ಪವಿತ್ರವೆಂದು ಭಾವಿಸುವ ನಾವು, ವಿಶೇಷವಾಗಿ ತುಳಸಿಯನ್ನು ಪೂಜೆ ಮಾಡುತ್ತೇವೆ. ಆಯುರ್ವೇದ ಪದ್ಧತಿಯಲ್ಲಿಯೂ ತುಳಸಿಗೆ ಹೆಚ್ಚಿನ ಪರಿಗಣನೆಯಿದೆ. ಹಲವಾರು ರೋಗಗಳಿಗೆ ತುಳಸಿ ಸೇವನೆ ರಾಮಬಾಣ ಎನ್ನಬಹುದು. ಆಯುರ್ವೇದಿಕ್ ಔಷಧಿಗಳಲ್ಲಿ ತುಳಸಿಯನ್ನು ಕಡ್ಡಾಯವಾಗಿ ಬಳಸುತ್ತಾರೆ. ತುಳಸಿ ಸೇವನೆಯಿಂದ ಯಾವ ಯಾವ ರೋಗಗಳಿಂದ ಮುಕ್ತಿ ಪಡೆಯಬಹುದು ಎಂಬುದನ್ನು ತಿಳಿಯಲು ಮುಂದೆ ಓದಿ. ಸಾಮಾನ್ಯವಾಗಿ ಬರುವ ನೆಗಡಿ, ಕೆಮ್ಮು, ಜ್ವರದಂತಹ ಸಮಸ್ಯೆಗಳಿಗೆ ತುಳಸಿ ಚಹಾ ಸೇವನೆ ಉತ್ತಮ ಪರಿಹಾರವಾಗಿದೆ. ತುಳಸಿಯನ್ನು ದಿನನಿತ್ಯ ಸೇವಿಸುವುದರಿಂದ ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಸುಲಭವಾಗಿ ಜ್ವರ ಅಥವಾ ಶೀತ ಕಾಣಿಸಿಕೊಳ್ಳುವುದಿಲ್ಲ.

ಇತ್ತೀಚಿಗೆ ಎಲ್ಲರನ್ನೂ ಕಾಡುತ್ತಿರುವ ವೈರಸ್ ಗಳಾದ ಕೋವಿಡ್, ಓಮಿಕ್ರಾನ್ ಗಳಂತಹ ಕಾಯಿಲೆಗಳಿಗೂ ತುಳಸಿ ಸೇವೆ ಅತ್ಯಂತ ಪರಿಣಾಮಕಾರಿಯಾಗಿದೆ. ತುಳಸಿ ಎಲೆಗಳಲ್ಲಿ ವಿಟಮಿನ್ ಎ.ಸಿ.ಕೆ ಮತ್ತು ಕ್ಯಾಲ್ಸಿಯಂ, ಮೆಗ್ನೀಸಿಯಂ, ರಂಜಕ, ಕಬ್ಬಿಣ ಮತ್ತು ಪೊಟ್ಯಾಸಿಯಂ ನಂತಹ ಖನಿಜಗಳು ಇವೆ. ಇದು ಸಾಕಷ್ಟು ಪ್ರೋಟೀನ್ ಮತ್ತು ಫೈಬರ್ ಗಳನ್ನು ಸಹ ಹೊಂದಿರುವುದಲ್ಲದೆ ಅತ್ಯುತ್ತಮ ಆಂಟಿ ವೈರಲ್ ಮತ್ತು ಆಂಟಿ ಕೊಲೆಸ್ಟ್ರಾಲ್ ಮೂಲಿಕೆಗಳಲ್ಲಿ ಒಂದಾಗಿದೆ. ತುಳಸಿಯು ರೋಗನಿರೋಧಕವಾಗಿ ಕೆಲಸ ಮಾಡುತ್ತದೆ. ಹೀಗಾಗಿ ಸೋಂಕಿನ ವಿರುದ್ಧ ದೇಹ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ತುಳಸಿಯನ್ನು ಸೇರಿಸಿಕೊಂಡು ಚಹಾ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಣಕ್ಕೆ ಬರುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು. ತುಳಸಿಯಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟ್ ಗಳು ಮತ್ತು ಬೀಟಾ ಕ್ಯಾರೋಟಿನ್ ಅಂಶವಿರುವುದರಿಂದ ಇದು ಹೃದಯದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ತುಳಸಿಯಲ್ಲಿರುವ ಪೊಟ್ಯಾಶಿಯಂ ಅಂಶವು ಮೆದುಳಿನಲ್ಲಿರುವ ಸಿರೊಟೋನಿಕ್ ಮಟ್ಟವನ್ನು ಹೆಚ್ಚಿಸುವುದರಿಂದ ಇದು ಖಿನ್ನತೆಯ ಹಾಗೂ ಮಾನಸಿಕ ಸಮಸ್ಯೆಯನ್ನು ಕಡಿಮೆ ಮಾಡುವುದಲ್ಲದೆ, ಮನಸ್ಸನ್ನು ಶಾಂತಗೊಳಿಸಲು ಸಹಾಯಕಾರಿಯಾಗಿದೆ.

ಅಜೀರ್ಣದಂತಹ ಸಮಸ್ಯೆಗಳಾದಾಗ ತುಳಸಿ ಚಹಾ ಅತ್ಯುತ್ತಮ ಔಷಧವಾಗಿ ಕೆಲಸ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಿ, ಜಠರದ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ತುಳಸಿ ಚಹಾವು ಸಂಧಿವಾತದ ನೋವನ್ನು ನಿವಾರಿಸಲು ಸಹಾಯಮಾಡುತ್ತದೆ. ತುಳಸಿ ಯಲ್ಲಿರುವ ತೈಲದ ಅಂಶ ಬ್ಯಾಕ್ಟೀರಿಯಾ ವಿರೋಧಿಯಾಗಿದೆ. ಇದು ಶ್ವಾಸಕೋಶದ ಸೋಂಕನ್ನು ಗುಣ ಪಡಿಸುವುದಲ್ಲದೇ ಶ್ವಾಸಕೋಶದ ಸಮಸ್ಯೆಗಳಾದ ಕ್ಷಯರೋಗ ಮುಂತಾದ ರೋಗಗಳಿಗೆ ರಾಮಬಾಣವಾಗಿದೆ ಎಂದು ಹೇಳಲಾಗುತ್ತದೆ.