ನಮ್ಮ ದೇಶದಲ್ಲಿ ಒಂದು ಪಾಲಿಕೆಯ ಮೇಯರ್ ಎಂದರೆ ಅದು ತುಂಬಾ ಮಹತ್ವಪೂರ್ಣವಾದ ಸ್ಥಾನವಾಗಿದೆ. ಮೇಯರ್ ಆಗಿ ಆಯ್ಕೆಯಾಗುವ ವ್ಯಕ್ತಿಗೆ ಸಮಾಜದಲ್ಲಿ ಉತ್ತಮವಾದ ಗೌರವಯುತವಾದ ಸ್ಥಾನ ಲಭಿಸುತ್ತದೆ. ಆದರೆ ಇಲ್ಲೊಬ್ಬ ಯುವತಿ ಕೇರಳ ರಾಜ್ಯದ ರಾಜಧಾನಿಯ ಮಹಾನಗರ ಪಾಲಿಕೆಯ ಮೇಯರ್ ಆಗುವ ಮೂಲಕ ದೇಶದಲ್ಲಿ ಅತಿ ಕಿರಿಯ ವಯಸ್ಸಿನ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಹೌದು ಇತ್ತೀಚಿಗೆ ಕೇರಳ ರಾಜ್ಯದ ರಾಜಧಾನಿಯಾದ ತಿರುವನಂತಪುರಂ ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿತ್ತು.

ಆ ಚುನಾವಣೆಯಲ್ಲಿ 21 ವಯಸ್ಸಿನ ಯುವತಿಯಾದ ಆರ್ಯ ರಾಜೇಂದ್ರನ್ ಎಂಬುವವರು ಮೂಡುವನ್ನ ಮೊಗಾಳ್ ವಾರ್ಡ್ ನಿಂದ ಸಿಪಿಎಂ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ವಾರ್ಡಿನಿಂದ ಆಯ್ಕೆಯಾಗಿದ್ದ ಆರ್ಯ ಅವರನ್ನು ಸಿಪಿಎಂ ಪಕ್ಷವು ಮೇಯರ್ ಸ್ಥಾನಕ್ಕೆ ಅರ್ಹ ಅಭ್ಯರ್ಥಿ ಎಂದು ಆಯ್ಕೆ ಮಾಡಿ ಮೇಯರ್ ಸ್ಥಾನಕ್ಕೆ ಶಿಫಾರಸು ಮಾಡಿತ್ತು. ಅದರಂತೆ ಈಗ ಆರ್ಯ ರಾಜೇಂದ್ರನ ನವರು ಕೇರಳ ರಾಜ್ಯದ ರಾಜಧಾನಿ ತಿರುವನಂತಪುರಂ ನ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ದೇಶದಲ್ಲಿಯೇ ಅತಿ ಕಿರಿಯ ವಯಸ್ಸಿನ ಮೇಯರ್ ಎಂದು ಪಾತ್ರರಾಗಿದ್ದಾರೆ.

ಕೇರಳದ ಎಲ್ ಬಿ ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಮಾಡುತ್ತಿರುವ ಆರ್ಯ ಅವರು ಮೇಯರ್ ಆಗುವ ಮುನ್ನ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ ಸಮಿತಿಯ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಎಲೆಕ್ಟ್ರಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿರುವ ಆರ್ಯ ಅವರ ತಂದೆ ಮತ್ತು ಗೃಹಿಣಿಯಾಗಿರುವ ಅವರ ತಾಯಿಗೆ ಹೆಮ್ಮೆಯನ್ನು ತಂದಿದ್ದಾರೆ. ದೇಶದಲ್ಲಿಯೇ ಅತಿ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ಕೇರಳ ರಾಜ್ಯವು ಮತ್ತೊಮ್ಮೆ ತನ್ನ ಘನತೆಯನ್ನು ಈ ಮೂಲಕ ಎತ್ತಿಹಿಡಿದಿದೆ. ಒಂದೆಡೆ ಮಹಿಳೆಯರ ಅಸಮಾನತೆ ತಾಂಡವ ಆಡುತ್ತಿದ್ದರೆ ಕೇರಳದಲ್ಲಿ ಇಡೀ ದೇಶವೇ ತಿರುಗಿ ನೋಡುವಂತಹ ಸಾಧನೆ ಆರ್ಯ ಎಂಬ ಯುವತಿಯಿಂದ ಆಗಿದೆ.