ಎರಡನೇ ದಿನವೂ ದಾಖಲೆ ಮೊತ್ತದ ಹಣ ಗಳಿಕೆ ಮಾಡಿದ ಅಪ್ಪು ಅವರ ಜೇಮ್ಸ್ ಚಿತ್ರ

ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಸಿನಿಮಾ ಕನ್ನಡ ಸಿನಿಮಾ ಇಂಡಸ್ಟ್ರಿ ಹಿಂದೆಂದೂ ನೋಡಿರದ ರೀತಿಯಲ್ಲಿ ಭರ್ಜರಿಯಾಗಿ ಪ್ರದರ್ಶನ ನೀಡುತ್ತಿದೆ. ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಜೇಮ್ಸ್ ಚಿತ್ರವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಅದರಲ್ಲೂ ಪುನೀತ್ ಅವರ ಹುಟ್ಟುಹಬ್ಬದಂದು ರಿಲೀಸ್ ಆಗಿರುವ ಈ ಚಿತ್ರ ಮತ್ತಷ್ಟು ಪುನೀತ್ ಅಭಿಮಾನಿಗಳಿಗೆ ವಿಶೇಷವಾಗಿತ್ತು. ಬೆಳಗಿನ ಜಾವ 6ಗಂಟೆಯಿಂದಲೇ ತನ್ನ ಮೊದಲ ಶೋ ಶುರುಮಾಡಿದ ಜೇಮ್ಸ್, ಎರಡನೇ ದಿನವೂ ಕೂಡ ಮಧ್ಯರಾತ್ರಿಯಿಂದಲೇ ಶೋಗಳು ಆರಂಭವಾಗಿವೆ. ಈಗಾಗಲೇ ಎಲ್ಲ ಕಡೆ ಚಿತ್ರಮಂದಿರಗಳು ಹೌಸ್ ಫುಲ್ ಆಗಿದ್ದು, ಒಂದು ವಾರದ ಟಿಕೆಟ್ಗಳು ಅಡ್ವಾನ್ಸ್ ಬುಕ್ ಆಗಿವೆ. ದಿನದಿಂದ ದಿನಕ್ಕೆ ಜೇಮ್ಸ್ ಚಿತ್ರವು ಹೊಸ ಹೊಸ ದಾಖಲೆಗಳನ್ನು ಮಾಡುತ್ತಿದೆ. ಮಾರ್ಚ್ 17ರಂದು ಜೇಮ್ಸ್ ಚಿತ್ರ ಬಿಡುಗಡೆಯಾದ ದಿನ ಕರ್ನಾಟಕದಾದ್ಯಂತ ಸರಿ ಸುಮಾರು 28-30 ಕೋಟಿ ರೂಪಾಯಿಯನ್ನು ಚಿತ್ರ ಗಳಿಸಿದೆ. ಇನ್ನು ಎರಡನೇ ದಿನವೂ ಹೌಸ್ಫುಲ್ ಆಗಿ ಪ್ರದರ್ಶನ ನೀಡುತ್ತಿರುವ ಜೇಮ್ಸ್ ಚಿತ್ರ 18ಕೋಟಿಗೂ ಅಧಿಕ ಹಣವನ್ನು ಬಾಚಿಕೊಂಡಿದೆ.

ಈ ವೀಕೆಂಡ್ ನಲ್ಲಿ ಸಿನಿಮಾದ ಕಲೆಕ್ಷನ್ ಇನ್ನು ದುಪ್ಪಟ್ಟಾಗಲಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಭಾರತದ ಸಿನಿರಂಗದಲ್ಲಿ ಈ ರೀತಿಯ ಭರ್ಜರಿ ಓಪನಿಂಗ್ ಯಾವ ಚಿತ್ರಕ್ಕೂ ಸಿಕ್ಕಿರಲಿಲ್ಲ. ಇದು ಹೀಗೆ ಮುಂದುವರೆದರೆ ಒಂದು ವಾರದ ಒಳಗೆ ಜೇಮ್ಸ್ ಚಿತ್ರ 100 ಕೋಟಿ ಕ್ಲಬ್ ಸೇರುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಲಾಗುತ್ತಿದೆ. ಇನ್ನು ಜೇಮ್ಸ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು2 ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಪ್ರಿಯಾ ಆನಂದ್ ಪುನೀತ್ ಅವರಿಗೆ ನಾಯಕಿಯಾಗಿ ನಟಿಸಿದ್ದು, ಡ್ರಗ್ಸ್ ವಿರುದ್ಧದ ಹೋರಾಟದ ಕಥೆಯನ್ನು ಈ ಸಿನಿಮಾದಲ್ಲಿ ಕಾಣಬಹುದಾಗಿದೆ. ಅನುಪ್ರಭಾಕರ್, ರಂಗಾಯನ ರಘು, ಚಿಕ್ಕಣ್ಣ, ತಿಲಕ್, ಶೈನ್ ಶೆಟ್ಟಿ, ಸಾಧು ಕೋಕಿಲ, ಸುಚೇಂದ್ರ ಪ್ರಸಾದ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ, ಶ್ರೀಕಾಂತ್, ಶರತ್ ಕುಮಾರ್, ಆದಿತ್ಯ ಮೆನನ್ ಹೀಗೆ ಹಲವಾರು ನಟರು ಈ ಚಿತ್ರದಲ್ಲಿದ್ದಾರೆ. ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ, ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡಿದ್ದಾರೆ.

ಇನ್ನು ಚಿತ್ರದ ರಿಲೀಸ್ ಬಗ್ಗೆ ಮಾತನಾಡಿದ ನಿರ್ಮಾಪಕರು ಇದೆಲ್ಲಾ ಪುನೀತ್ ಅಣ್ಣನ ಪವರ್. ನನಗೆ ತಿಳಿದಿರುವಂತೆ ಈ ರೀತಿಯ ಓಪನಿಂಗ್ ಇನ್ಯಾವ ಸಿನಿಮಾಕ್ಕೂ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಸಿಗುವುದಿಲ್ಲ. ಗಳಿಕೆಯಲ್ಲಿ ಮಾತ್ರವಲ್ಲದೆ ಹಲವಾರು ವಿಷಯಗಳಲ್ಲಿ ಈ ಸಿನಿಮಾ ರೆಕಾರ್ಡನ್ನು ಮಾಡಲಿದೆ. ಇನ್ನು ಈ ಚಿತ್ರದ ಕಲೆಕ್ಷನ್ ಬಗ್ಗೆ ಮಾತನಾಡಿದ ಅವರು ಸಿನಿಮಾದ ಡಿಜಿಟಲ್ ಸ್ಯಾಟಲೈಟ್, ಒಟಿಟಿ ಹಾಗೂ ಒಟ್ಟಾರೆ ಸಿನಿಮಾದ ಗ್ರಾಸ್ ಕಲೆಕ್ಷನ್ ಲೆಕ್ಕಹಾಕಿದರೆ ಈ ಸಿನೆಮಾ ಈಗಾಗಲೇ 100 ಕೋಟಿಗೂ ಹೆಚ್ಚು ಹಣವನ್ನು ಕಲೆಕ್ಷನ್ ಮಾಡಿದೆ. ಆದರೆ ಸಿನಿಮಾದ ಗ್ರಾಸ್ ಕಲೆಕ್ಷನ್ ಎಷ್ಟಾಗಿದೆಯೋ ಅದೆಲ್ಲ ನಿರ್ಮಾಪಕನಿಗೆ ದಕ್ಕುವುದಿಲ್ಲ. ಇದರಲ್ಲಿ ಮಲ್ಟಿಫ್ಲೆಕ್ಸ್ ಗಳಲ್ಲಿ 50% ಹಾಗೂ ಒಟ್ಟು ಗ್ರಾಸ್ ಕಲೆಕ್ಷನ್ ಗೆ ತೆರಿಗೆ ರೂಪವಾಗಿ 20% ನೀಡಬೇಕಾಗುತ್ತದೆ. ಹೀಗಾಗಿ ಒಟ್ಟಾರೆ ಗ್ರಾಸ್ ಕಲೆಕ್ಷನ್ ನೂರು ಕೋಟಿ ಆದರೂ ನಿರ್ಮಾಪಕರಿಗೆ ಲಾಭವಾಗಿ ನೂರು ಕೋಟಿ ಸಿಗುವುದಿಲ್ಲ ಎಂದು ನಿರ್ಮಾಪಕರು ಗುಟ್ಟು ಬಿಚ್ಚಿಟ್ಟರು.

%d bloggers like this: