ಎರಡು ಹೊಸ ಕನ್ನಡ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ

ಮಾಡೆಲಿಂಗ್ ಲೋಕದಲ್ಲಿ ಮಿಂಚಬೇಕು ಎನ್ನುವುದು ಇಂದಿನ ಅನೇಕ ಯುವಜನರ ಕನಸಾಗಿರುತ್ತದೆ. ಆದರೆ ಈ ಕನಸು ನನಸಾಗಿಸಿಕೊಳ್ಳುವ ಭಾಗ್ಯ ಕೇವಲ ಸ್ವಲ್ಪ ಜನರಿಗೆ ಮಾತ್ರ ಒಲಿದು ಬರುತ್ತದೆ. ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಎಷ್ಟೋ ಜನರು ಮಾಡೆಲಿಂಗ್ ಕ್ಷೇತ್ರದಿಂದ ಚಂದನವನದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇದೇ ಆಸೆಯಿಂದ ಎಷ್ಟೋ ಜನರು ಮಾಡೆಲಿಂಗ್ ಕ್ಷೇತ್ರಕ್ಕೆ ಧುಮುಕುತ್ತಾರೆ. ಇದೇ ರೀತಿ ಚಂದನವನದಲ್ಲಿ ಹೆಸರು ಮಾಡಬೇಕೆಂದುಕೊಂಡು ಎಂಬಿಎ ಮುಗಿಸಿ 2017 ರಲ್ಲಿ ಮಾಡೆಲಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಸುಶ್ಮಿತಾ ಅವರು ಚಂದನವನದಲ್ಲಿ ನೆಲೆ ಕಂಡುಕೊಳ್ಳಲು ಸಜ್ಜಾಗಿದ್ದಾರೆ. 2017 ರಲ್ಲಿ ಮಾಡಲಿಂಗ್ ಶುರುಮಾಡಿದ ಸುಶ್ಮಿತಾ ಅವರು, ಅದೇ ವರ್ಷ ಮಿಸ್ಸ್ ಬೆಂಗಳೂರು ಟೈಟಲ್ ಪಡೆದಿದ್ದಾರೆ. 2018 ರಲ್ಲಿ ಮಿಸ್ ಕರ್ನಾಟಕ ಸ್ಪರ್ಧೆಯಲ್ಲೂ ಮೊದಲ ರನ್ನರ್-ಅಪ್ ಆಗಿದ್ದರು.

2019 ರಲ್ಲಿ ಅಂತರಾಷ್ಟ್ರೀಯ ರೂಪದರ್ಶಿ ಸ್ಪರ್ಧೆಯಲ್ಲಿ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿದ್ದರು. ಈಗ ಅದೇ ರೂಪದರ್ಶಿ, ಸಿನಿಮಾ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಹೊರಟಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರುವ ಸುಶ್ಮಿತಾ ಅವರಿಗೆ ಆರಂಭದಲ್ಲಿ ಸಾಕಷ್ಟು ಕಿರುತೆರೆಯ ಪಾತ್ರಗಳು ಅರಸಿ ಬಂದಿದ್ದವು. ಆದರೆ ಸಿನಿಮಾದಲ್ಲಿ ನಟಿಸಬೇಕು ಎಂದು ಕನಸು ಕಾಣುತ್ತಿದ್ದ ಅವರು ಯಾವುದೇ ಪಾತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದ ಹಿನ್ನೆಲೆ ಇರುವ ಇವರಿಗೆ ಫಣೀಶ್ ಭಾರದ್ವಾಜ್ ನಿರ್ದೇಶನದ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.

ಈಗಾಗಲೇ ಸಿನಿಮಾದ ಚಿತ್ರೀಕರಣವನ್ನು ಮುಗಿಸಿರುವ ಸುಶ್ಮಿತಾ ಅವರು ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಕಷ್ಟಕ್ಕೆ ತಕ್ಕ ಪ್ರತಿಫಲವೆಂಬಂತೆ ಸುಶ್ಮಿತಾ ಅವರ ಕನಸು ನನಸಾಗುತ್ತಿದೆ. ಒಂದಾದಮೇಲೊಂದು ಸಿನಿಮಾಗಳ ಅವಕಾಶವನ್ನು ಅವರು ಪಡೆದುಕೊಳ್ಳುತ್ತಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗುವಿನಲ್ಲಿ ಚಾಯ್ ಕಹಾನಿ ಸಿನಿಮಾದಲ್ಲಿ ನಟಿಸುವ ಅವಕಾಶ ಇವರಿಗೆ ದೊರೆತಿದೆ. ಪಕ್ಕಾ ಕಮರ್ಷಿಯಲ್ ಕಥೆಯಾಗಿರುವ ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಸುಶ್ಮಿತಾ ನಟಿಸುತ್ತಿದ್ದಾರೆ. ಇದಷ್ಟೇ ಅಲ್ಲದೇ ಶಾಲಾ ದಿನಗಳಲ್ಲಿ ನೃತ್ಯದಲ್ಲಿ ಆಸಕ್ತಿ ಹೊಂದಿರುವ ಇವರು ಡಾನ್ಸ್ ನಲ್ಲಿಯೂ ಪರಿಣಿತಿ ಹೊಂದಿದ್ದಾರೆ.

ಸಾಕಷ್ಟು ಸಣ್ಣಪುಟ್ಟ ಪಾತ್ರಗಳು ಬರುತ್ತವೆ. ಆದರೆ ಜನರ ಮನಸ್ಸನ್ನು ತಲುಪಿ ಅವರ ಮನಸ್ಸಿನಲ್ಲಿ ಉಳಿಯುವಂತಹ ಪಾತ್ರದ ಹುಡುಕಾಟದಲ್ಲಿದ್ದೇನೆ. ಕನ್ನಡ, ಹಿಂದಿ ಧಾರಾವಾಹಿಯಿಂದಲೂ ಅವಕಾಶಗಳು ಬರುತ್ತಿವೆ. ಆದರೆ ನಾನು ಸಿನಿಮಾ ಮಾತ್ರ ಆಯ್ಕೆ ಮಾಡಿಕೊಳ್ಳುತ್ತೇನೆ. ಇದೆಲ್ಲದರ ಜೊತೆಗೆ ದೊಡ್ಡಮನೆಯ ಆಶೀರ್ವಾದವು ಸಿಕ್ಕಿದೆ. ಲಕ್ಷ್ಮಿ ಅಕ್ಕ ಮತ್ತು ಎಸ್ ಎ ಗೋವಿಂದರಾಜು ಅವರು ಸಿನಿಮಾ ವಿಚಾರವಾಗಿ ನನ್ನ ಬೆನ್ನ ಹಿಂದಿದ್ದಾರೆ ಎಂದು ಸುಶ್ಮಿತಾ ಅವರು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಪ್ರೇಮಂ ಪೂಜ್ಯಂ ಸಿನಿಮಾಕ್ಕೆ ಹಿನ್ನೆಲೆ ಸಂಗೀತ ಮಾಡಿದ ಎಂ ಎಸ್ ತ್ಯಾಗರಾಜ್ ಅವರ ಟ್ರುಥ್ ಆರ್ ಡೇರ್ ಆಲ್ಬಮ್ ಹಾಡಿನಲ್ಲಿ ಕಾಣಿಸಿಕೊಂಡ ಸುಶ್ಮಿತಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಕನ್ನಡದ ಮತ್ತೊಂದು ಸಿನಿಮಾ ಆಡಿಸಿದಾತ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸುಶ್ಮಿತಾ ಅವರು ಪುನೀತ್ ಅವರ ನಿಧನದ ಕಾರಣದಿಂದ ಪ್ರಾಜೆಕ್ಟ್ ವಿಳಂಬವಾಗಿತ್ತು. ಆದರೆ ಇದೀಗ ಮತ್ತೆ ಸಿನಿಮಾದ ಕೆಲಸ ಶುರುವಾಗಿರುವುದರಿಂದ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

%d bloggers like this: