ಕನ್ನಡ ಸಿನಿ ಪ್ರೇಕ್ಷಕರಿಗೆ ಗೂಗ್ಲಿ ಹಾಕಿದ್ದ ನಿರ್ದೇಶಕ ಪವನ್ ಒಡೆಯರ್ ಇದೀಗ ಮತ್ತೊಂದು ಬ್ಯೂಟಿಫುಲ್ ಲವ್ ಸ್ಟೋರಿ ಹೊಂದಿರುವ ಸಿನಿಮಾವನ್ನು ಹೊರ ತರುತ್ತಿದ್ದಾರೆ. ಲವ್ ಸ್ಟೋರಿಯಲ್ಲಿ ವಿಭಿನ್ನ ಜಾನರ್ ಹೊಂದಿರುವ ರೆಮೋ ಸಿನಿಮಾದ ಟೀಸರ್ ಇತ್ತೀಚೆಗಷ್ಟೇ ಬಹಳ ಅದ್ದೂರಿಯಾಗಿ ಕನ್ನಡ ಚಿತ್ರರಂಗದ ಗಣ್ಯರ ಸಮಕ್ಷಮದಲ್ಲಿ ಬಿಡುಗಡೆಯಾಗಿದ್ದು, ರೆಮೋ ಚಿತ್ರದ ಟೀಸರ್ ಸ್ಯಾಂಡಲ್ ವುಡ್ ನಲ್ಲಿ ಸಖತ್ ರಾಕ್ ಮಾಡುತ್ತಿದೆ. ಸದಾ ಹೊಸ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಖ್ಯಾತ ನಿರ್ಮಾಪಕರಾದ ಸಿ.ಆರ್.ಮನೋಹರ್ ಅವರು ನಿರ್ದೇಶಕ ಪವನ್ ಒಡೆಯರ್ ಅವರಿಗೆ ಚಿತ್ರಕ್ಕೆ ಬೇಕಾದ ಎಲ್ಲಾ ರೀತಿಯ ಬೇಕು ಬೇಡಗಳನ್ನು ಸೂಕ್ತ ಸಮರ್ಪಕವಾಗಿ ನೀಡಿ ರೆಮೋ ಸಿನಿಮಾ ಬಹಳ ರಿಚ್ ಆಗಿ ಮೂಡಿಬರಲು ನೆರವಾಗಿದ್ದಾರೆ.

ರೆಮೋ ಚಿತ್ರದ ಟೀಸರ್ ನೋಡಿದ ಸಿನಿಮಾ ಮಂದಿ ಬಹಳ ಮೆಚ್ಚುಗೆ ವ್ಯಕ್ತಪಡಿಸಿ, ರೆಮೋ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಟೀಸರ್ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು, ಪಧಾದಿಕಾರಿಗಳು ಸೇರಿದಂತೆ ಖ್ಯಾತ ನಿರ್ದೇಶಕರಾದ ಯೋಗರಾಜ್ ಭಟ್, ಎ.ಹರ್ಷ, ನಾಗಣ್ಣ, ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಗೌಡ, ಕೆ.ಮಂಜು ಮುಂತಾದ ಗಣ್ಯರು ಪಾಲ್ಗೊಂಡಿದ್ದರು. ರೆಮೋ ಚಿತ್ರದ ಟೀಸರ್ ನಲ್ಲಿ ನಟ ಇಶಾನ್ ಸಖತ್ ರಾಕ್ ಸ್ಟಾರ್ ಆಗಿ ಕಾಣುತ್ತಿದ್ದು, ನಟಿ ಆಶಿಕಾ ರಂಗನಾಥ್ ಮೋಹನ ಪಾತ್ರದಲ್ಲಿ ಶಾಸ್ತ್ರೀಯ ಸಂಗೀತ ಗಾಯಕಿಯಾಗಿ ಸಖತ್ತಾಗಿಯೇ ಮಿಂಚುತ್ತಿದ್ದಾರೆ. ಟೇಸರ್ ನೋಡಿದ ಪ್ರೇಕ್ಷಕರು ನಟಿ ಆಶಿಕಾ ರಂಗನಾಥ್ ಮತ್ತು ನಟ ಇಶಾನ್ ಅವರ ಜೋಡಿ ಸೂಪರ್ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತೆಯೇ ಆಶಿಕಾ ರಂಗನಾಥ್ ಟೀಸರ್ ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.



ರೆಮೋ ಚಿತ್ರ ನಟ ಇಶಾನ್ ಅವರ ಎರಡನೇ ಸಿನಿಮಾ. ಈಗಾಗಲೇ ರೋಗ್ ಎಂಬ ಸಿನಿಮಾದಲ್ಲಿ ನಾಯಕ ನಟರಾಗಿ ನಟ ಇಶಾನ್ ನಟಿಸಿ ಗಮನ ಸೆಳೆದಿದ್ದರು. ಇನ್ನು ನಿರ್ದೇಶಕ ಪವನ್ ಒಡೆಯರ್ ಅವರು ಪುನೀತ್ ರಾಜ್ ಕುಮಾರ್ ಅವರ ನಟ ಸಾರ್ವಭೌಮ ಚಿತ್ರದ ನಂತರ ರೆಮೋ ಚಿತ್ರದ ಕೆಲಸದಲ್ಲಿ ತೊಡಗಿಕೊಂಡಿದ್ದರು. ಇದೀಗ ರೆಮೋ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬಿಝಿ಼ಯಾಗಿದ್ದಾರೆ. ರೆಮೋ ಸಿನಿಮಾಗೆ ಸಿ.ಆರ್.ಮನೋಹರ್ ಬಂಡವಾಳ ಹೂಡಿದ್ದು, ಮ್ಯಾಜಿ಼ಕಲ್ ಕಂಪೋಸರ್ ಅರ್ಜುನ್ ಜನ್ಯ ಮ್ಯೂಸಿಕ್ ನೀಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಫೆಬ್ರವರಿ ತಿಂಗಳ ಪ್ರೇಮಿಗಳ ದಿನದಂದು ರೆಮೋ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.