ಧಾರಾವಾಹಿಗಳು ಜನರ ದಿನನಿತ್ಯದ ಭಾಗವಾಗಿವೆ. ಯಾವ ಸಿನಿಮಾಗಳಿಗೂ ಕಡಿಮೆ ಇಲ್ಲವೆಂಬಂತೆ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಕಥೆ, ನಿರ್ದೇಶನ, ಆಕ್ಷನ್, ರೋಮ್ಯಾನ್ಸ್ ಎಲ್ಲವನ್ನು ಕೆಲವ ಸಿನಿಮಾಗಳಲ್ಲಿ ಮಾತ್ರವಲ್ಲದೇ ಧಾರವಾಹಿಗಳಲ್ಲೂ ನೋಡಬಹುದು. ಅಲ್ಲದೇ ಸೀರಿಯಲ್ ಗಳು ದೈನಂದಿನ ಘಟನೆಗಳಿಗೆ ಹೆಚ್ಚಿನ ಮಹತ್ವ ನೀಡುವುದರಿಂದ ಬಹುಬೇಗ ವೀಕ್ಷಕರಿಗೆ ಹತ್ತಿರವಾಗುತ್ತಿವೆ. ಸೀರಿಯಲ್ ಸ್ಟಾರ್ ಗಳು ಕೂಡ ಸಿನಿಮಾ ಸ್ಟಾರ್ ಗಳಂತೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚಿಗೆ ಸಿನಿಮಾರಂಗದ ಹಿರಿಯ ಕಲಾವಿದರು ಕೂಡ ಧಾರಾವಾಹಿಗಳತ್ತ ಮುಖ ಮಾಡುತ್ತಿದ್ದಾರೆ.

ಕಮಲಿ, ಸತ್ಯ, ಕೃಷ್ಣ ಸುಂದರಿ, ಹಿಟ್ಲರ್ ಕಲ್ಯಾಣ, ಪುಟ್ಟಕ್ಕನ ಮಕ್ಕಳು ಹೀಗೆ ಹಿಟ್ ಧಾರಾವಾಹಿಗಳನ್ನು ಜೀ ಕನ್ನಡದ ವಾಹಿನಿ ನೀಡುತ್ತಿದೆ. ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡುತ್ತಿರುವ ಜೀ ವಾಹಿನಿಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೂಲಕ ಮಾಜಿ ಸಚಿವೆ ಹಾಗೂ ಹಿರಿಯ ಕಲಾವಿದೆ ಉಮಾಶ್ರೀಯನ್ನು ಕಿರುತೆರೆಗೆ ಪರಿಚಯಿಸಿದೆ. ಉಮಾಶ್ರೀ ಅಭಿನಯದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಜೀ ಕನ್ನಡದಲ್ಲಿ ಒಳ್ಳೆ ಟಿಆರ್ಪಿ ಬರುತ್ತಿರುವ ಸೀರಿಯಲ್ ಆಗಿದೆ. ಇದೀಗ ಕನ್ನಡದ ಜೀ ವಾಹಿನಿ ಮತ್ತೊಂದು ಸ್ಟಾರ್ ಜೋಡಿಯನ್ನು ಕಿರುತೆರೆಗೆ ತರಲು ಸಿದ್ಧವಾಗಿದೆ.



90ರ ದಶಕದ ಸಿನಿಮಾದಲ್ಲಿ ಸೂಪರ್ ಹಿಟ್ ಜೋಡಿಗಳಲ್ಲಿ ಒಂದಾದ ರಾಮಕುಮಾರ್ ಮತ್ತು ಶ್ರುತಿ ಇದೀಗ ಮತ್ತೆ ಒಟ್ಟಾಗಿ ತೆರೆಯ ಮೇಲೆ ಬರಲು ರೆಡಿಯಾಗಿದ್ದಾರೆ. ಇವರಿಬ್ಬರು ಜೊತೆಯಾಗಿ ಸಿನಿಮಾದಲ್ಲಿ ನಟಿಸುತ್ತಿಲ್ಲ. ಬದಲಾಗಿ ಧಾರಾವಾಹಿಗಳಲ್ಲಿ ನಟಿಸಲು ರೆಡಿಯಾಗಿದ್ದಾರೆ. ಹೌದು ತವರಿನ ತೊಟ್ಟಿಲು, ತಾಳಿಯ ಸೌಭಾಗ್ಯದಂತಹ ಸೆಂಟಿಮೆಂಟಲ್ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದ ರಾಮಕುಮಾರ್, ಶ್ರುತಿ ಅವರ ಜೋಡಿ ಇದೀಗ ಸೀರಿಯಲ್ ಮೂಲಕ ಮತ್ತೆ ಒಂದಾಗಲಿದೆ. ಇವರಿಬ್ಬರೂ ಚಿತ್ರರಂಗದಿಂದ ಕೆಲವು ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದು ಇದೀಗ ಮತ್ತೆ ಒಂದಾಗುತ್ತಿದ್ದಾರೆ.