ನಂದಿನಿ ಹಾಲಿನ ರಾಯಭಾರಿಯಾಗಿದ್ದ ಅಜಾತಶತ್ರು ಅಪ್ಪುಗೆ ಕೆ.ಎಂ.ಎಫ್ ವಿಶೇಷವಾಗಿ ನಮನ ಸಲ್ಲಿಸಿದೆ. ಚಂದನವನದ ಧೃವತಾರೆ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಎರಡು ತಿಂಗಳು ಪೂರೈಸಿವೆ. ಅಜರಾಮರ ಆಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಯಾರಿಗೂ ತಿಳಿಯದಂತೆ ಮಾಡಿದ ಮಹತ್ಕಾರ್ಯಗಳು ನಿಜಕ್ಕೂ ಕೂಡ ಎಷ್ಟೋ ಶ್ರೀಮಂತರಿಗೆ ಮಾದರಿಯಾಗಿವೆ. ಸಣ್ಣ ಪುಟ್ಟ ಕೊಡುಗೆ ಸಹಾಯ ಮಾಡಿ ನಾಮಫಲಕ ಹಾಕಿಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಪುನೀತ್ ರಾಜ್ ಕುಮಾರ್ ತಾವು ಎಷ್ಟೇ ಸಹಾಯ, ಉತ್ತಮ ಕಾರ್ಯಗಳನ್ನ ಮಾಡಿದರು ಕೂಡ ಎಲ್ಲಿಯೂ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ. ಬಲಗೈಯಲ್ಲಿ ನೀಡಿದ್ದು, ಎಡಗೈಗೆ ಗೊತ್ತಾಗಬಾರದು ಎಂಬಂತೆ ದಾನ ಧರ್ಮಗಳು, ಅವರ ವ್ಯಕ್ತಿತ್ವ ಇಂದು ಅವರನ್ನ ದೇವರ ರೀತಿ ಪೂಜಿಸಲು ಕಾರಣವಾಗಿದೆ.

ಇನ್ನು ಪುನೀತ್ ರಾಜ್ ಕುಮಾರ್ ಅವರು ತಮ್ಮ ಸಿನಿಮಾದ, ಸಮಾಜ ಸೇವೆಯ ಜೊತೆಗೆ ಸರ್ಕಾರದ ಅನೇಕ ಯೋಜನೆಗಳಿಗೆ ರಾಯಭಾರಿಯೂ ಸಹ ಆಗಿದ್ದರು. ಅದರಂತೆ ನಂದಿನಿ ಹಾಲಿನ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ನಂದಿನಿ ಹಾಲಿನ ಜಾಹೀರಾತಿಗಾಗಿ ನಟ ಪುನೀತ್ ರಾಜ್ ಕುಮಾರ್ ಅವರು ಯಾವುದೇ ರೀತಿಯ ಸಂಭಾವನೆಯನ್ನ ಪಡೆಯದೆ ನಟಿಸಿದ್ದರು. ನಂದಿನಿ ಹಾಲಿನ ರಾಯಭಾರಿಯಾಗಿ ಡಾ.ರಾಜ್ ಕುಮಾರ್ ಅವರು ರೈತರಿಗೆ ಅನುಕೂಲ ಆಗುತ್ತದೆ ಎಂದು ಉಚಿತವಾಗಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅಂತೆಯೇ ರಾಜ್ ಅವರ ಸೇವೆಯನ್ನ ತನ್ನ ತಂದೆಯಂತೆ ಅಪ್ಪು ಕೂಡ ಪಾಲಿಸಿಕೊಂಡು ಬರುತ್ತಿದ್ದರು.

ಅಪ್ಪು ಅಗಲಿದ ನಂತರ ರಾಜ್ಯದಲ್ಲಿ ನಡೆಯುತ್ತಿರುವ ಬಹುತೇಕ ಕಾರ್ಯಕ್ರಮಗಳಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನ, ಅವರು ಮಾಡಿದ ಸಾಮಾಜಿಕ ಕಾರ್ಯವನ್ನು ನೆನೆದು ಮುಂದಿನ ಕಾರ್ಯ ಮಾಡುತ್ತಿದ್ದಾರೆ. ಅಂತೆಯೇ ಇದೀಗ ಅಪ್ಪು ನೆನೆದು ಕರ್ನಾಟಕ ಹಾಲು ಮಂಡಳಿಯು ತಮ್ಮ ನಂದಿನಿ ಹಾಲಿನ ಕವರ್ ಮೇಲೆ ಅಪ್ಪು ಭಾವಚಿತ್ರವನ್ನು ಅಚ್ಚು ಮಾಡಿ ಪುನೀತ್ ಅವರಿಗೆ ಗೌರವ ಸಲ್ಲಿಸಿದೆ . ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಅಪ್ಪು ಚಿತ್ರ ಇರುವ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿವೆ. ಕಳೆದ ತಿಂಗಳು ರಾಜ್ಯದ ಪ್ರಸಿದ್ದ ಸಕ್ರೆಬೈಲು ಆನೆ ಶಿಬಿರದಲ್ಲಿ ಆನೆಯೊಂದು ಮರಿ ಹಾಕಿತ್ತು. ಈ ಆನೆ ಮರಿಗೆ ಅರಣ್ಯ ಇಲಾಖೆ ಪುನೀತ್ ಎಂದು ನಾಮಕರಣ ಮಾಡಿದ್ದರು.