ಕಿರಿಕ್ ಪಾರ್ಟಿ ಖ್ಯಾತಿಯ ರಿಷಬ್ ಶೆಟ್ಟಿ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಇವರು ಸ್ಯಾಂಡಲ್ವುಡ್ ನ ಯಶಸ್ವಿ ಯುವ ನಿರ್ದೇಶಕರು ಎಂದರೆ ತಪ್ಪಾಗಲಾರದು. ರಿಷಬ್ ಶೆಟ್ಟಿ ಯಾವಾಗಲೂ ವಿಭಿನ್ನ ಚಿತ್ರಕತೆಗಳ ಮೂಲಕ ನಮ್ಮನ್ನು ರಂಜಿಸುತ್ತಾರೆ. ಇವರ ಚಿತ್ರಗಳೆಂದರೆ ಸೀನಿಪ್ರೇಮಿಗಳಿಗೆ ಅಚ್ಚು ಮೆಚ್ಚು. 2016ರಲ್ಲಿ ಬಾಕ್ಸಾಫೀಸ್ ಧೂಳೆಬ್ಬಿಸಿದ ಸಿನಿಮಾ, ಕಿರಿಕ್ ಪಾರ್ಟಿ ಕೇವಲ ನಟರಾದ ರಕ್ಷಿತ್ ಶೆಟ್ಟಿ ಅವರಿಗೆ ಅಷ್ಟೇ ಅಲ್ಲದೆ ರಿಷಬ್ ಶೆಟ್ಟಿ ಅವರು ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರುವಂತೆ ಮಾಡಿತ್ತು. ಇವರು ಕೇವಲ ನಿರ್ದೇಶಕನಾಗಿ ಅಷ್ಟೇ ಅಲ್ಲದೆ ನಟನಾಗಿಯೂ ಕೂಡ ತೆರೆಯ ಮೇಲೆ ಮಿಂಚಿದ್ದಾರೆ.

ಕಿರಿಕ್ ಪಾರ್ಟಿ ಚಿತ್ರದ ನಂತರ ಉಳಿದವರು ಕಂಡಂತೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಅವನೇ ಶ್ರೀಮನ್ನಾರಾಯಣ, ಹೀರೋ, ಬೆಲ್ ಬಾಟಮ್, ಗರುಡ ಗಮನ ವೃಷಭ ವಾಹನ ಹೀಗೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿ, ಅಭಿನಯಿಸಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ರಾಜ್ ಬಿ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಒಟ್ಟಿಗೆ ಅಭಿನಯಿಸಿದ ಗರುಡ ಗಮನ ವೃಷಭ ವಾಹನ ಚಿತ್ರವು ಅಭಿಮಾನಿಗಳ ನಿರೀಕ್ಷೆಯನ್ನೂ ಮೀರಿ ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ಗರುಡ ಗಮನ ವೃಷಭ ವಾಹನ ಚಿತ್ರವು ಕಳೆದ ವರ್ಷ ನವೆಂಬರ್ 19ರಲ್ಲಿ ರಿಲೀಸ್ ಆಗಿತ್ತು. ಇನ್ನೂ ಕೂಡ ಯಶಸ್ವಿ ಪ್ರದರ್ಶನ ನೀಡುತ್ತಿದೆ. ಸಿನಿ ಪ್ರೇಮಿಗಳಿಗೆ ಮಾತ್ರವಲ್ಲದೇ, ಸಿನಿಮಾರಂಗದ ಸೆಲೆಬ್ರೇಟಿ ಗಳಿಗೂ ಕೂಡ ಈ ಚಿತ್ರ ಇಷ್ಟವಾಗಿದೆ.



ಕಳೆದ ವರ್ಷ ನವೆಂಬರ್ 19ರಂದು ಥಿಯೇಟರ್ ಗಳಲ್ಲಿ ರಿಲೀಸ್ ಆಗಿದ್ದ ಗರುಡ ಗಮನ ವೃಷಭ ವಾಹನ ಚಿತ್ರವು, ಸಂಕ್ರಾಂತಿ ಹಬ್ಬದ ಪ್ರಯುಕ್ತ ಜಿ5 ಒಟಿಟಿ ಯಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ರಿಲೀಸ್ ಆದ ಮೂರೇ ದಿನಕ್ಕೆ ದಾಖಲೆ ಸೃಷ್ಟಿಸಿ, ಮೊದಲ ಮೂರು ದಿನಗಳಲ್ಲಿ ಬರೋಬ್ಬರಿ ಎಂಟು ಕೋಟಿ ನಿಮಿಷ ವೀಕ್ಷಣೆ ಕಂಡಿತ್ತು. ಕೇವಲ ಕನ್ನಡ ಮಾತ್ರವಲ್ಲ ಬೇರೆ ಭಾಷೆಗಳ ಸಿನಿಪ್ರೇಮಿಗಳು ಕೂಡ ಈ ಚಿತ್ರವನ್ನು ಮೆಚ್ಚುತ್ತಿದ್ದಾರೆ. ಎಲ್ಲರಿಗೂ ಗೊತ್ತಿರದೇ ಇರುವ ವಿಷಯವೆಂದರೆ ರಿಷಬ್ ಶೆಟ್ಟಿ ಅವರ ಮೂಲ ಹೆಸರು ಪ್ರಶಾಂತ್ ಶೆಟ್ಟಿ. ಹೌದು ಕುಂದಾಪುರದಲ್ಲಿ ಹುಟ್ಟಿದ ಈ ಪ್ರತಿಭೆಗೆ ಇದುವರೆಗೆ ಉತ್ತಮ ನಿರ್ದೇಶಕರ ಸಾಲಿನಲ್ಲಿ ಫಿಲಂ ಫೇರ್ ಅವಾರ್ಡ್, ನ್ಯಾಷನಲ್ ಫಿಲ್ಮ್ ಅವಾರ್ಡ್ ಗಳು ದೊರೆತಿವೆ. 2017ರಲ್ಲಿ ತಮ್ಮ ಗೆಳತಿ ಪ್ರಗತಿ ಶೆಟ್ಟಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಇವರಿಗೆ 2019 ಏಪ್ರಿಲ್ 7ರಂದು ಗಂಡು ಮಗುವಿನ ಆಗಮನವಾಗಿತ್ತು.



ಪುತ್ರನಿಗೆ ತಮ್ಮ ಹೆಸರು ಹೊಂದಾಣಿಕೆಯಾಗುವಂತೆ ರನ್ವಿತ್ ಶೆಟ್ಟಿ ಎಂದು ನಾಮಕರಣವನ್ನೂ ರಿಷಬ್ ಮಾಡಿದ್ದರು. ಇದೀಗ ಮತ್ತೆ ರಿಷಬ್ ಶೆಟ್ಟಿ ದಂಪತಿಗಳು ಅಭಿಮಾನಿಗಳೊಂದಿಗೆ ಸಿಹಿಸುದ್ದಿ ಒಂದನ್ನು ಹಂಚಿಕೊಂಡಿದ್ದಾರೆ. ಹೌದು ರಿಷಬ್ ಶೆಟ್ಟಿ ಎರಡನೇ ಮಗುವಿಗೆ ತಂದೆಯಾದ ಸಂಭ್ರಮದಲ್ಲಿದ್ದಾರೆ. ರಿಷಬ್ ಶೆಟ್ಟಿ ಅವರ ಕುಟುಂಬದಲ್ಲಿ ಸಂಭ್ರಮ ದುಪ್ಪಟ್ಟಾಗಿದೆ. ಈ ಬಗ್ಗೆ ಟ್ವೀಟ್ ಮಾಡಿ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿರುವ ರಿಷಬ್ ಶೆಟ್ಟಿಯವರು, ಪ್ರಗತಿ ಶೆಟ್ಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು. ಇದಷ್ಟೇ ಅಲ್ಲದೆ ಪ್ರಗತಿ ಶೆಟ್ಟಿಯೊಂದಿಗಿನ ಫೋಟೋ ಒಂದನ್ನು ಶೇರ್ ಮಾಡಿ, ಇಷ್ಟೇ ಚಂದದ ಹೆಣ್ಣು ಮಗು ಹುಟ್ಟಿದ್ದಾಳೆ ಎಂದು ಬರೆದುಕೊಂಡಿದ್ದಾರೆ.