ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿಮಾನಿಗಳು ವರ್ಷಾನುಗಟ್ಟಲೇಯಿಂದ ಬೈರಾಗಿ ಸಿನಿಮಾದ ದರ್ಶನಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದರು. ಕೊನೆಗೂ ಬೈರಾಗಿ ಚಿತ್ರ ಜುಲೈ ಒಂದರಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿ ಅಭೂತಪೂರ್ವ ಪ್ರತಿಕ್ರಿಯೆ ಪಡೆದುಕೊಂಡಿದೆ. ಬೈರಾಗಿ ಸಿನಿಮಾ ನೋಡಿದ ಸಿನಿ ಪ್ರೇಕ್ಷಕರು ಶಿವರಾಜ್ ಕುಮಾರ್ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೋವಿಡ್ ನಂತರ ಶಿವಣ್ಣ ಅವರ ಭಜರಂಗಿ2 ಸಿನಿಮಾ ತೆರೆಕಂಡ ನಂತರ ಶಿವಣ್ಣ ಅಭಿನಯದ ಬೈರಾಗಿ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಯಾಕಂದ್ರೆ ಶಿವಣ್ಣ ಮತ್ತು ಡಾಲಿ ಧನಂಜಯ್ ಒಟ್ಟಿಗೆ ನಟಿಸಿದ್ದಾರೆ. ಟಗರು ಸಿನಿಮಾದಲ್ಲಿ ಧನಂಜಯ್ ಮತ್ತು ಶಿವಣ್ಣ ಕಾಂಬಿನೇಶನ್ ಸಖತ್ ಮೋಡಿ ಮಾಡಿತ್ತು.

ಹಾಗಾಗಿ ಈ ಬೈರಾಗಿ ಚಿತ್ರ ಕೂಡ ಈ ಮಾಸ್ ಜೋಡಿ ಖಡಕ್ ನಟನೆಯನ್ನು ಕಣ್ತುಂಬಿಕೊಳ್ಳಲು ಡಾಲಿ ಮತ್ತು ಶಿವಣ್ಣ ಅಭಿಮಾನಿಗಳು ಭಾರಿ ನಿರೀಕ್ಷೆ ಮಾಡಿದ್ರು. ಈಗ ಬೈರಾಗಿ ಸಿನಿಮಾ ನೋಡಿ ಈ ಇಬ್ಬರು ನಟರ ಫ್ಯಾನ್ಸ್ ಸಖತ್ ಖುಷಿಯಲ್ಲಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಕೆಲವು ದುಷ್ಟರು ಹಣ, ಅಧಿಕಾರದ ಅಮಲಿನಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಸುವ ದೌರ್ಜನ್ಯ ಅನ್ಯಾಯದ ವಿರುದ್ದ ಹೋರಾಟ ನಡೆಸುವ ಹುಲಿ ಕುಣಿತದ ಕುಟುಂಬದ ಸದಸ್ಯನಾಗಿ ಶಿವಣ್ಣ ಅಚ್ಚುಕಟ್ಟಾಗಿ ತಮ್ಮ ಪಾತ್ರವನ್ನ ನಿಭಾಯಿಸಿದ್ದಾರೆ. ಇವರ ಜೊತೆಗೆ ವಾತಾಪಿ ಪಾತ್ರದಲ್ಲಿ ದಿಯಾ ಸಿನಿಮಾ ಖ್ಯಾತಿಯ ನಟ ಪೃಥ್ವಿ ಅಂಬಾರ್ ಅವರು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಜೊತೆಗೆ ಶಶಿ ಕುಮಾರ್, ಶರತ್ ಲೋಹಿತಾಶ್ವ, ವಿಶೇಷ ಪಾತ್ರದಲ್ಲಿ ಚಿಕ್ಕಣ್ಣ ಕೂಡ ಕಾಣಿಸಿಕೊಂಡು ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದಾರೆ. ಬೈರಾಗಿ ಸಿನಿಮಾಗೆ ಕೃಷ್ಣ ಅವರು ಬಂಡವಾಳ ಹೂಡಿಕೆ ಮಾಡಿದ್ದು, ವಿಜಯ್ ಮಿಲ್ಟನ್ ಅವರು ನಿರ್ದೇಶನ ಮಾಡಿದ್ದಾರೆ.



ಶಿವಣ್ಣ ಅವರಿಗೆ ಜೋಡಿಯಾಗಿ ಟಾಲಿವುಡ್ ಸ್ಟಾರ್ ನಟಿ ಅಂಜಲಿ ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಜುಲೈ1 ರಂದು ತೆರೆಕಂಡ ಬೈರಾಗಿ ಸಿನಿಮಾ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಶಿವಣ್ಣ ಅವರ ದ್ವಿತೀಯ ಪುತ್ರಿ ನಟಿ ಕಮ್ ನಿರ್ಮಾಪಕಿ ನಿವೇದಿತಾ ಅವರು ತಮ್ಮ ತಂದೆ ನಟನೆಯ ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಿ ಎಂಜಾಯ್ ಮಾಡಿದ್ದಾರೆ. ಇನ್ನು ಶಿವರಾಜ್ ಕುಮಾರ್ ಅವರು ಬೈರಾಗಿ ಸಿನಿಮಾಗೆ ರಾಜ್ಯದ್ಯಂತ ಉತ್ತಮ ಪ್ರತಿಕ್ರಿಯೆಕೊಂಡು ಚಿತ್ರದ ಯಶಸ್ಸಿಗೆ ಕಾರಣರಾದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರೀಯರಾಗಿರುವ ಶಿವಣ್ಣ ಅವರು ತಮ್ಮ ಇನ್ಸ್ಟಾ ಗ್ರಾಮ್ ನಲ್ಲಿ ಲೈವ್ ಬಂದಿದ್ದಾರೆ. ಲೈವ್ ನಲ್ಲಿ ನಟ ಪೃಥ್ವಿ ಅಂಬಾರ್ ಅವರು ಕೂಡ ಸೇರ್ಪಡೆಗೊಂಡಿದ್ರು. ಅಭಿಮಾನಿಗಳ ಜೊತೆಗೆ ಮಾತುಕತೆ ನಡೆಸಿದ ಶಿವಣ್ಣ ಸಿನಿಮಾ ನೋಡಿ ಪ್ರೋತ್ಸಾಹಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ.