ನಮ್ಮ ಕನ್ನಡ ಚಿತ್ರರಂಗ ಸೇರಿದಂತೆ ದೇಶದ ವಿವಿಧ ಭಾಷೆಯ ಎಲ್ಲಾ ಚಿತ್ರರಂಗಗಳಲ್ಲಿ ನಟ ನಟಿಯರ ಮಕ್ಕಳು ಕೂಡ ತಮ್ಮ ತಮ್ಮ ತಂದೆ ತಾಯಿಯರಂತೆಯೇ ಚಿತ್ರರಂಗಕ್ಕೆ ಬಂದಿರುವ ಉದಾಹರಣೆಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಕಲೆಯ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡ ನಟ ನಟಿಯರ ಮಕ್ಕಳಲ್ಲಿ ಸಹಜವಾಗಿಯೇ ನಟನಾ ಆಸಕ್ತಿ ಇರುವುದು ಸಾಮಾನ್ಯ. ಇದೀಗ ಕನ್ನಡದಲ್ಲಿ ಅಂತಹದೇ ಒಂದು ಮಾತು ಕೇಳಿಬರುತ್ತಿದೆ. ಹೌದು ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಯಾದ ಪ್ರಿಯಾಂಕಾ ಅವರನ್ನು ಮದುವೆಯಾಗಿ ಮುದ್ದಾದ ಎರಡು ಮಕ್ಕಳಿಗೆ ಜನ್ಮ ನೀಡಿ ಸುಂದರ ಕುಟುಂಬದೊಂದಿಗೆ ಕಾಲ ಕಳೆಯುತ್ತಾ ಬಂದಿದ್ದಾರೆ. ಇದೀಗ ಮಗ ಆಯುಷ್ ಮತ್ತು ಮಗಳು ಐಶ್ವರ್ಯ ಬೆಳೆದು ದೊಡ್ಡವರಾಗಿ ಒಂದು ವಯಸ್ಸಿಗೆ ಬಂದಿದ್ದಾರೆ.

ಇತ್ತೀಚಿಗೆ ಉಪೇಂದ್ರ ಅವರ ಅಣ್ಣನ ಮಗನಾದಂತಹ ನಿರಂಜನ್ ಅವರ ಮೊದಲ ಚಿತ್ರ ಸೂಪರ್ ಸ್ಟಾರ್ ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯ ಮೇಲೆ ಮಾತನಾಡಿದ ಉಪೇಂದ್ರ ಅವರ ಮಗ ಆಯುಷ್ ನಾನು ಹೀರೋ ಆಗಿ ನಟಿಸಬೇಕೆಂದರೆ ಅದನ್ನು ನಮ್ಮ ತಂದೆಯೇ ನಿರ್ದೇಶಿಸಬೇಕು ಎಂದಿದ್ದಾರೆ. ಈ ಮೂಲಕ ನಟನಾಗುವ ಬಯಕೆಯಿದೆ ಎಂಬುದನ್ನು ಆತ ವ್ಯಕ್ತಪಡಿಸಿದ್ದಾನೆ. ನಟ ಮತ್ತು ನಿರ್ದೇಶಕ ಆದಂತಹ ಉಪೇಂದ್ರ ಅವರು ಬಹಳ ಶ್ರಮದಿಂದಲೇ ಚಿತ್ರರಂಗದಲ್ಲಿ ಉತ್ತುಂಗಕ್ಕೆ ಏರಿದವರು. ತಮ್ಮ ವಿಭಿನ್ನವಾದ ಕಥೆಯನ್ನು ಹೇಳುವ ಶೈಲಿಯಿಂದಲೇ ದೇಶದ ಎಲ್ಲಾ ಭಾಷೆ ಸಿನಿವನದಲ್ಲಿ ಖ್ಯಾತಿಯನ್ನು ಪಡೆದವರು. ಸದ್ಯಕ್ಕೆ ಚಿತ್ರರಂಗಕ್ಕಿಂತ ರಾಜಕೀಯ ರಂಗದಲ್ಲಿ ಬ್ಯುಸಿಯಾಗಿರುವ ಉಪೇಂದ್ರ ಅವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇನ್ನು ಅವರ ಮಗನ ಈ ಹೇಳಿಕೆ ಗಮನಿಸಿದರೆ ಉಪೇಂದ್ರ ಅವರಿಗೆ ಅವರ ಮಗನೇ ಮತ್ತೆ ನಿರ್ದೇಶಕನ ಟೋಪಿಯನ್ನು ಹಾಕಲಿದ್ದಾನೆ ಎನ್ನುವಂತಾಗಿದೆ. ಉಪೇಂದ್ರ ಅವರ ಮಗಳು ಐಶ್ವರ್ಯ ಕೂಡ ಉತ್ತಮವಾಗಿ ಕಥೆ ಕವನಗಳನ್ನು ಬರೆಯುತ್ತಾರೆ, ಅವಳಿಗೆ ಅದರಲ್ಲಿ ಹೆಚ್ಚಿನ ಆಸಕ್ತಿ ಇದೆಯೆಂದು ಸ್ವತಃ ಉಪೇಂದ್ರ ಅವರೇ ಹೇಳಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ತಂದೆ ತಾಯಿ ಇಬ್ಬರನ್ನು ಕಲಾವಿದರನ್ನಾಗಿ ಪಡೆದುಕೊಂಡ ಐಶ್ವರ್ಯ ಮತ್ತು ಆಯುಷ್ ಮನಸ್ಸಿನಲ್ಲಿ ಚಿತ್ರರಂಗಕ್ಕೆ ಬರುವ ಇಂಗಿತವನ್ನು ಇಟ್ಟುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದರೆ ಇನ್ನೂ ಅವರು ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಬೇಕಾಗಿರುವುದರಿಂದ ಚಿತ್ರರಂಗಕ್ಕೆ ಅವರ ಎಂಟ್ರಿ ಇನ್ನು ತಡವಾಗುತ್ತದೆ.