ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಖ್ಯಾತ ಹಿರಿಯ ನಟನ ಪುತ್ರ

ಚಿತ್ರರಂಗಕ್ಕೆ ಹೊಸ ನಟರ ಪಾದಾರ್ಪಣೆ ಆಗುತ್ತಿದೆ. ಹಲವಾರು ಕನಸುಗಳನ್ನು ಹೊತ್ತು ಅನೇಕ ಹೊಸ ಪ್ರತಿಭೆಗಳು ಬೆಳ್ಳಿತೆರೆಯತ್ತ ಮುಖ ಮಾಡುತ್ತಿದ್ದಾರೆ. ಅದರಲ್ಲೂ ಈಗಾಗಲೇ ಸಿನಿ ಕ್ಷೇತ್ರದಲ್ಲಿ ಸಾಕಷ್ಟು ಅನುಭವಗಳನ್ನು ಹೊಂದಿರುವ ನಟರ ಮಕ್ಕಳು ಕೂಡ ಚಿತ್ರರಂಗದಲ್ಲೇ ತಮ್ಮ ಭವಿಷ್ಯವನ್ನು ರೂಪಿಸಲು ಕನಸು ಹೊತ್ತಿದ್ದಾರೆ. ನಟ ನಟಿಯರ ಮಕ್ಕಳಾದರೂ ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುವುದು ಅಷ್ಟು ಸುಲಭದ ಮಾತೇನಲ್ಲ. ಪ್ರೇಕ್ಷಕರನ್ನು ರಂಜಿಸುವಲ್ಲಿ ಸಫಲವಾದ ಆಗ ಮಾತ್ರ ನಾಯಕನಟರಾಗಿ ತಮ್ಮ ಹೆಸರು ಉಳಿಸಿಕೊಳ್ಳುವುದು ಸಾಧ್ಯ. ಸದ್ಯಕ್ಕೆ ಸುದ್ದಿಯಲ್ಲಿರುವ ವಿಷಯವೆಂದರೆ ನಮ್ಮ ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿ ಎವರ್ಗ್ರೀನ್ ಹೀರೋ ಎನಿಸಿಕೊಂಡ ಶಶಿಕುಮಾರ್ ಅವರ ಮಗ ಅಕ್ಷಿತ್ ಶಶಿಕುಮಾರ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಹೌದು ಓ ಮೈ ಲವ್ ಚಿತ್ರದ ಮೂಲಕ ಅಕ್ಷಿತ್ ಶಶಿಕುಮಾರ್ ಅವರು ತಮ್ಮ ಸಿನಿಪಯಣವನ್ನು ಶುರುಮಾಡಿದ್ದಾರೆ. ಜಿಸಿಬಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿದ್ದಗೊಂಡಿರುವ ಓ ಮೈ ಲವ್ ಚಿತ್ರಕ್ಕೆ ಸ್ಮೈಲ್ ಶ್ರೀನು ಅವರು ನಿರ್ದೇಶನ ಮಾಡಿದ್ದಾರೆ. ಜಿ ರಾಮಾಂಜಿನಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಹಾಲೇಶ್ ಎಸ್ ಛಾಯಾಗ್ರಹಣ ನೀಡಿದ್ದು, ಡಿ ಮಲ್ಲಿ ಅವರು ಸಂಕಲನ ನೀಡಿದ್ದಾರೆ. ಈ ಚಿತ್ರಕ್ಕೆ ಡಾಕ್ಟರ್ ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ನೀಡಿದ್ದು, ಮುರುಳಿ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ. ಚರಣ್ ಅರ್ಜುನ್ ಅವರ ಸಂಗೀತ ಈ ಚಿತ್ರಕ್ಕಿದ್ದು, ದೇವಗಿಲ್, ನಾರಾಯಣ್, ಸಾಧುಕೋಕಿಲ, ಪವಿತ್ರಾಲೋಕೇಶ್, ಪೃಥ್ವಿ, ಲಿಂಗರಾಜ್, ಸುವೇದ, ಅಕ್ಷತಾ, ಟೆನ್ನಿಸ್ ಕೃಷ್ಣ ಮುಂತಾದ ತಾರಾಬಳಗ ಚಿತ್ರಕ್ಕಿದೆ. ಇತ್ತೀಚೆಗೆ ಓ ಮೈ ಲವ್ ಚಿತ್ರದ ಏನಾಯ್ತೋ ನಾಕಾಣೆ ಹಾಡಿನ ಪ್ರೋಮೋ ರಿಲೀಸ್ ಕಾರ್ಯಕ್ರಮ ನೆರವೇರಿದೆ.

ಈ ಕಾರ್ಯಕ್ರಮದಲ್ಲಿ ನಟ ಶಶಿಕುಮಾರ್ ಅವರು ಕೂಡ ಭಾಗವಹಿಸಿದ್ದು, ಬಿಎ ಮುಗಿದ ನಂತರ ಚಿತ್ರರಂಗಕ್ಕೆ ಬರುವುದಾಗಿ ನನ್ನ ಮಗ ಅಕ್ಷಿತ್ ತಿಳಿಸಿದ್ದ. ಈ ಚಿತ್ರದ ಮುಹೂರ್ತದ ದಿನದಂದು ನಾನು ಬಂದಿದ್ದು ಬಿಟ್ಟರೆ ನೇರವಾಗಿ ಈ ಹಾಡಿನ ರಿಲೀಸ್ ಕಾರ್ಯಕ್ರಮದಂದೇ ಸೆಟ್ ಗೆ ಭೇಟಿ ನೀಡುತ್ತಿದ್ದೇನೆ. ಸೆಟ್ ಗೆ ಹೋದರೆ ಭಯಪಡುತ್ತಾನೆ ಎಂದುಕೊಂಡು ನಾನು ಭೇಟಿ ನೀಡಿರಲಿಲ್ಲ. ಈ ಬಣ್ಣದ ಲೋಕ ನನ್ನ ಮಗನಿಗೆ ಹೊಸ ಜರ್ನಿ ಆಗಿರುವುದರಿಂದ ಹಲವಾರು ಅಡ್ವೈಸ್ ಗಳನ್ನು ನಾನು ಅವನಿಗೆ ನೀಡಿದ್ದೇನೆ. ಒಂದೇ ಪಾತ್ರಕ್ಕೆ ಸೀಮಿತವಾಗಿರದೆ ಎಲ್ಲಾ ಪಾತ್ರಗಳನ್ನು ಮಾಡು ಎಂದು ಹೇಳಿದ್ದೇನೆ. ನನ್ನನ್ನು ಕನ್ನಡ ಚಿತ್ರರಂಗದಲ್ಲಿ ಬೆಳೆಸಿದಂತೆ ನನ್ನ ಮಗನಿಗೂ ಕೂಡ ಆಶೀರ್ವದಿಸಿ ಕೈ ಹಿಡಿಯಿರಿ ಎಂದು ಮಾಧ್ಯಮದವರನ್ನು ಶಶಿಕುಮಾರ್ ಕೇಳಿಕೊಂಡರು.

ಇನ್ನು ಈ ಚಿತ್ರದಲ್ಲಿ ನಟ ಅಕ್ಷಿತ್ ಶಶಿಕುಮಾರ್ ಅವರಿಗೆ ನಾಯಕಿಯಾಗಿ ಕೀರ್ತಿ ಕಲ್ಕರೆ ಅವರು ನಟಿಸುತ್ತಿದ್ದಾರೆ. ಈ ಚಿತ್ರ ಇವರಿಬ್ಬರಿಗೂ ಹೊಸ ಅನುಭವವಾದ್ದರಿಂದ ಹೆಚ್ಚೇನೂ ಮಾತನಾಡಲಿಲ್ಲ. ಇದು ನನ್ನ ನಾಲ್ಕನೇ ನಿರ್ದೇಶನದ ಚಿತ್ರ. ಪ್ರೀತಿ, ಮನರಂಜನೆ, ಭಾವನೆ, ಥ್ರಿಲ್, ಆವೇಶ, ಹಾಸ್ಯ ಎಲ್ಲವೂ ಕೂಡಿದ ಕಥೆ ಇದಾಗಿದೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಮುಂದಿನ ತಿಂಗಳು ಆಡಿಯೋ ಬಿಡುಗಡೆ ಮಾಡುತ್ತೇವೆ ಎಂದು ನಿರ್ದೇಶಕರು ಹೇಳಿದರು. ಇನ್ನು ಈ ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕರು ಎಲ್ಲಾ ವ್ಯವಹಾರಗಳಲ್ಲಿ ಯಶಸ್ಸು ಕಂಡಿರುವ ನನಗೆ ಸಿನಿಮಾ ರಂಗದಲ್ಲಿ ಯಶಸ್ಸು ಕಾಣಬೇಕೆಂಬ ಬಯಕೆಯಿಂದ ಕಥೆ ಬರೆದು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದೇನೆ ಎಂದು ನಿರ್ಮಾಪಕ ಜಿ ರಾಮಾಂಜಿನಿ ಹೇಳಿದರು.

%d bloggers like this: