ಕನ್ನಡದ ಈ‌ ಬಹು ನಿರೀಕ್ಷಿತ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

ಸ್ಯಾಂಡಲ್ ವುಡ್ ನ ಹಲವಾರು ಹೊಸ ಚಿತ್ರಗಳು ತಮ್ಮ ಬಿಡುಗಡೆಯ ದಿನಾಂಕವನ್ನು ಘೋಷಿಸಿಕೊಳ್ಳುತ್ತಿವೆ. 2018 ರಲ್ಲಿ ಬಿಡುಗಡೆಯಾಗಿ ಸದ್ದು ಮಾಡಿದ ಆಶಿಕಾ ರಂಗನಾಥ್ ಮತ್ತು ನಟ ಶರಣ್ ಅಭಿನಯದ ರಾಂಬೋ 2 ಚಿತ್ರದ ಯಶಸ್ಸಿನ ನಂತರ ಮತ್ತೆ ಈ ಜೋಡಿ ಹೊಸ ಚಿತ್ರದಲ್ಲಿ ಒಂದಾಗುತ್ತಿದೆ. ರಾಂಬೊ 2 ಚಿತ್ರದಲ್ಲಿ ಇವರಿಬ್ಬರ ನಡುವಿನ ಕೆಮಿಸ್ಟ್ರಿಯನ್ನು ಮೆಚ್ಚಿಕೊಂಡ ಜನತೆಗೆ ಇದೀಗ ಮತ್ತೆ ಇವರನ್ನು ತೆರೆಮೇಲೆ ನೋಡುವ ಅವಕಾಶ ದೊರಕಿದೆ. ಶರಣ್ ಹಾಗೂ ಆಶಿಕಾ ರಂಗನಾಥ್ ನಟನೆಯ ಈ ಚಿತ್ರಕ್ಕೆ ಅವತಾರ ಪುರುಷ ಎಂದು ಹೆಸರಿಡಲಾಗಿದೆ. ಹಲವಾರು ಕಾರಣಗಳಿಂದ ಈ ಚಿತ್ರ ಬಿಡುಗಡೆಗೂ ಮುನ್ನವೇ ಸದ್ದು ಮಾಡುತ್ತಿದೆ. ಈಗಾಗಲೇ ತೆರೆಯ ಮೇಲೆ ಮೋಡಿ ಮಾಡಿರುವ ಈ ಜೋಡಿಯನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

ಎಲ್ಲವೂ ಸರಿ ಇದ್ದರೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಚಿತ್ರ ತೆರೆಕಾಣಬೇಕಾಗಿತ್ತು. ಆದರೆ ಕೋವಿಡ್ ನಿಯಮಾವಳಿಗಳಿಂದ ಥಿಯೇಟರ್ ಗಳಿಗೆ ಕೆಲವು ನಿಯಮಗಳನ್ನು ಹಾಕಲಾಗಿತ್ತು. ಇದರಿಂದಾಗಿ ಚಿತ್ರತಂಡ ಬಿಡುಗಡೆಯ ದಿನಾಂಕವನ್ನು ಕೆಲ ತಿಂಗಳುಗಳ ಕಾಲ ಮುಂದೂಡಿತ್ತು. ಇದೀಗ ಅವತಾರ ಪುರುಷನನ್ನು ತೆರೆಯ ಮೇಲೆ ನೋಡಲು ಸಮಯ ಬಂದಾಗಿದೆ. ಈ ಚಿತ್ರದಲ್ಲಿ ಖ್ಯಾತ ಕಲಾವಿದರ ದಂಡೇ ಇದ್ದು, ಎಲ್ಲರ ಲುಕ್ ಗಳನ್ನು ಒಳಗೊಂಡಿರುವ ಪೋಸ್ಟರನ್ನು ಬಿಡುಗಡೆ ಮಾಡಲಾಗಿದೆ. ಶ್ರೀನಗರ್ ಕಿಟ್ಟಿ, ಆಶಿಕಾ ರಂಗನಾಥ್ ಸೇರಿದಂತೆ ಎಲ್ಲರ ಗೆಟಪ್ ಗಳು ಕುತೂಹಲ ಮೂಡಿಸುತ್ತವೆ.

ವಿಶೇಷವೆಂದರೆ ನಟ ಶರಣ್ ಅವರು ಜೂನಿಯರ್ ಆರ್ಟಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಹಲವಾರು ವಿಭಿನ್ನ ವೇಷಗಳನ್ನು ಈ ಚಿತ್ರದಲ್ಲಿ ತೊಟ್ಟಿದ್ದಾರೆ. ಅವತಾರ ಪುರುಷ ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದು, ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರದ ಟೀಸರ್ ಹಾಗೂ ಪೋಸ್ಟರ್ ಸಾಕಷ್ಟು ಗಮನ ಸೆಳೆದಿದ್ದು, ತುಂಬಾ ಶ್ರೀಮಂತವಾಗಿ ಮೂಡಿಬಂದಿದೆ. ಇತ್ತೀಚೆಗೆ ಎಲ್ಲಾ ಸಿನಿಮಾಗಳು ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಿಗೂ ಡಬ್ ಆಗುತ್ತಿವೆ. ಆದರೆ ಈ ಚಿತ್ರ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಇನ್ನೂ ಅವತಾರಪುರುಷ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ತಮ್ಮ ಬದುಕಿನ ಇತ್ತೀಚಿನ ಏಳುಬೀಳುಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಟ್ವೀಟ್ ಮಾಡಿಕೊಂಡಿದ್ದಾರೆ.

ನನ್ನ ಸಾವು ಬದುಕಿನ ಮಧ್ಯೆ ಸಣ್ಣ ಎಳೆಯಂತೆ ಇರುವ ನನ್ನ ಕೊನೆಯ ಆಸೆ ಅವತಾರಪುರುಷ ಸಿನಿಮಾ. ನಿಮ್ಮ ಪ್ರಾರ್ಥನೆ ಹಾಗೂ ಬೆಂಬಲ ಸದಾ ನನ್ನ ಜೊತೆ ಇರಲಿ ಎಂದು ಪುಷ್ಕರ್ ಮಲ್ಲಿಕಾರ್ಜುನಯ್ಯ ಟ್ವೀಟ್ ಮಾಡಿದ್ದಾರೆ. ಇನ್ನು ಸಿಂಪಲ್ ಸುನಿ ಆಕ್ಷನ್ ಕಟ್ ಹೇಳುತ್ತಿರುವ ಅವತಾರಪುರುಷ ಚಿತ್ರ ಮೇ 6 ರಂದು ತೆರೆ ಕಾಣಲಿದೆ. ಈ ಕುರಿತು ಟ್ವೀಟ್ ಮಾಡಿರುವ ನಿರ್ದೇಶಕರು, ಕಪ್ಪು ಜಾದೂ ಶುರುವಾಗುವ ಸಮಯ. ಮೇ 6 ರಂದು ಬಿಡುಗಡೆಯಾಗಲಿದೆ. ನಿಮ್ಮ ಆಶೀರ್ವಾದವಿರಲಿ ಎಂದು ಬರೆದುಕೊಂಡಿದ್ದಾರೆ. ಚಿತ್ರದ ರಿಲೀಸ್ ಜೊತೆಗೆ ಹೊಸ ಪೋಸ್ಟರ್ ಗಳನ್ನು ಹಂಚಿಕೊಳ್ಳಲಾಗಿದ್ದು ಇವು ಎಲ್ಲರ ಗಮನಸೆಳೆಯುತ್ತಿದೆ. ವಿಭಿನ್ನ ಪೋಸ್ಟರ್ ಗಳಿಂದ ಸದ್ದು ಮಾಡುತ್ತಿರುವ ಈ ಚಿತ್ರವನ್ನು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದುನೋಡಬೇಕು.

%d bloggers like this: