ಕನ್ನಡದ ಈ ಹೊಸ ಚಿತ್ರದಲ್ಲಿ ಮಹಿಳೆಯರ ಬ್ಯಾಚುಲರ್ ಲೈಫ್ ತೋರಿಸಲಿದ್ದಾರೆ ಈ ನಟಿಯರು

ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಹಲವು ಹಂತಗಳಲ್ಲಿ ಜೀವನವನ್ನು ನಡೆಸುತ್ತಾನೆ. ಬಾಲ್ಯ, ಯೌವನ, ಸಂಸಾರಿಕ, ವೃದ್ಯಾಪ್ಯ ಹೀಗೆ ಎಲ್ಲಾ ಹಂತಗಳಲ್ಲೂ ಮನುಷ್ಯನ ಜೀವನ ಶೈಲಿ ಬೇರೆ ಬೇರೆ ಆಗಿರುತ್ತದೆ. ಅದೇ ರೀತಿ ಹುಡುಗಿಯರ ಬದುಕಿನಲ್ಲಿ ಬ್ಯಾಚುಲರ್ ಲೈಫ್ ಹೇಗಿರುತ್ತದೆ ಎಂಬುದನ್ನು ತೋರಿಸಲು ನಿರ್ದೇಶಕ ಮುತ್ತು ರೆಡಿ ಆಗಿದ್ದಾರೆ. ಬದುಕಿನಲ್ಲಿ ಪ್ರತಿಯೊಬ್ಬರಿಗೂ ಅವ್ಯವಸ್ಥೆ ಎನ್ನುವುದು ಇದ್ದೇ ಇರುತ್ತದೆ. ಅದೇ ರೀತಿ ಮಹಿಳಾ ಪ್ರಧಾನ ಕಥಾನಾಯಕಿ ಇಂತಹ ಒಂದು ಅವ್ಯವಸ್ಥೆಗೆ ಒಳಗಾಗಿರುತ್ತಾಳೆ. ಹಾಗಂತ ಇದನ್ನು ಖಾಯಿಲೆ ಎನ್ನಲಾಗುವುದಿಲ್ಲ. ಈ ತರಹದ ಗುಣವುಳ್ಳವರು ಹಲವಾರು ದುಶ್ಚಟಗಳಿಗೆ ಒಳಗಾಗಿ ಯಾವ ರೀತಿ ವ್ಯಸನಿಗಳಾಗುತ್ತಾರೆ ಎಂಬುವುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

ಈ ರೀತಿ ದುಶ್ಚಟಗಳಿಗೆ ಒಳಗಾಗುವವರು ಯಾವ ಯಾವ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಕೊನೆಗೆ ಇದರಿಂದ ಹೊರಬರಲು ಯಾವ ರೀತಿ ವೈದ್ಯರ ಸಲಹೆಯನ್ನು ಪಡೆದುಕೊಳ್ಳುತ್ತಾರೆ ಎಂಬುವುದು ಈ ಚಿತ್ರಕಥೆಯ ಒಂದು ಎಳೆಯ ಸಾರಾಂಶವಾಗಿದೆ. ಈ ಸಿನಿಮಾವು ಐದು ಹುಡುಗಿಯರ ಸುತ್ತ ಸಾಗುತ್ತದೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನ ಮಾಡಿರುವ ಮುತ್ತು ಅವರು ಈ ಚಿತ್ರಕ್ಕಾಗಿ ಸಂಶೋಧನೆ ನಡೆಸಿ ಅದರಲ್ಲಿ ಸಿಕ್ಕಂತಹ ವಿಷಯಗಳನ್ನು ಬಳಸಿಕೊಂಡು ಕಾಲ್ಪನಿಕ ಕಥೆಯನ್ನು ಸೃಷ್ಟಿಸಿದ್ದಾರೆ. ಈ ಚಿತ್ರವು ಪಾರ್ವತಿ ತಾಯಿ ಕೋರಳ್ಳಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆಳಂದ ಮೂಲದ ರಾಜಕೀಯ ಧುರೀಣ ಸೂರ್ಯಕಾಂತ್ ಕೆ ಕೋರಳ್ಳಿ ಅವರು ನಿರ್ಮಾಣ ಮಾಡಿದ್ದಾರೆ.

ಅಲ್ಲದೆ ದೇವಿಶ್ರೀ, ಮುತ್ತು, ದಯಾನಂದ ಹಾಗೂ ಅವಿನಾಶ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಈ ಚಿತ್ರದ ಮುಖ್ಯಪಾತ್ರದಲ್ಲಿ ನಟಿ ರೂಪ ನಟರಾಜ್, ಇವರೊಂದಿಗೆ ಶ್ರಾವ್ಯ ಗಣಪತಿ, ಮೇಘನಾ ರಾಮ್, ತೇಜಸ್ವಿನಿ, ಪಾರ್ವತಿ, ತಾಯಿಯ ಪಾತ್ರದಲ್ಲಿ ಮಂಜುಳಾ ರೆಡ್ಡಿ, ಸಂಗೀತ, ನಿಸರ್ಗ ಮುಂತಾದವರು ನಟಿಸಿದ್ದಾರೆ. ಈ ಚಿತ್ರದ ಮೂರು ಹಾಡುಗಳಿಗೆ ಎಸ್ಆರ್ ಪ್ರಭು ಸುರೇಂದ್ರನಾಥ್ ಸಂಗೀತ ನೀಡಿದ್ದು, ಸಿನಿಟೆಕ್ ಸೂರಿ ಛಾಯಾಗ್ರಹಣ ನೀಡಿದ್ದಾರೆ. ಜ್ಞಾನೇಶ್ ಸಂಕಲನ, ಹಿನ್ನೆಲೆ ಶಬ್ದ, ಅನಿಲ್ ಸಿಜೆ ನೃತ್ಯ, ಕಲೈ ಭೂಷಣ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ.

ಈ ಚಿತ್ರವು ಬೆಂಗಳೂರು ಮತ್ತು ಬೀದರ್ ಗಳಲ್ಲಿ ಚಿತ್ರೀಕರಣಗೊಂಡಿದೆ. ಹುಡುಗರ ಬ್ರಹ್ಮಚರ್ಯ ಜೀವನ ಹೇಗಿರುತ್ತದೆ ಎಂದು ಈಗಾಗಲೇ ಹಲವು ಸಿನಿಮಾಗಳ ಮೂಲಕ ನಾವು ನೋಡಿರುತ್ತೇವೆ. ಆದರೆ ಹುಡುಗಿಯರ ಬ್ಯಾಚುಲರ್ ಲೈಫ್ ಹೇಗಿರುತ್ತದೆ ಎಂಬುದನ್ನು ತೋರಿಸುವ ವಿಭಿನ್ನ ಪ್ರಯತ್ನವನ್ನು ಲೀಸಾ ಚಿತ್ರತಂಡ ಮಾಡಿದೆ. ಇತ್ತೀಚೆಗೆ ರೇಣುಕಾಂಬ ಸ್ಟುಡಿಯೋದಲ್ಲಿ ಚಿತ್ರದ ಟ್ರೈಲರ್ ಮತ್ತು ಮೂರು ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ತಪಸ್ವಿ ಅವರು ಬರೆದಿರುವ ಅಮ್ಮನ ಕುರಿತಾದ ಗೀತೆಯು ಎಲ್ಲರ ಮನಸ್ಸನ್ನು ಗೆದ್ದಿದೆ. ಸೆನ್ಸಾರ್ ಮಂಡಳಿಯಿಂದ ಮೆಚ್ಚುಗೆ ಪಡೆದುಕೊಂಡಿರುವ ಈ ಚಿತ್ರವು ಸದ್ಯದಲ್ಲೇ ತೆರೆಕಾಣಲಿದೆ.

%d bloggers like this: