ಕನ್ನಡದ ಜನಪ್ರಿಯ ಧಾರಾವಾಹಿಯಲ್ಲಿ ಕಾಣಿಸಿಕೊಂಡ್ರು ಎಸ್ ನಾರಾಯಣ ಅವರ ಮಗ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಎಲ್ಲ ಧಾರಾವಾಹಿಗಳು ಸೂಪರ್ ಹಿಟ್ ಆಗಿವೆ. ಒಂದಕ್ಕಿಂತ ಇನ್ನೊಂದು ಕಥೆಗಳಲ್ಲಿ ಸಾಕಷ್ಟು ಕುತೂಹಲಗಳನ್ನು ಉಂಟುಮಾಡುತ್ತಿವೆ. ಜೊತೆ ಜೊತೆಯಲಿ, ಸತ್ಯ, ಕೃಷ್ಣಸುಂದರಿ, ಕಮಲಿ, ಪಾರು ಹೀಗೆ ಎಲ್ಲವು ಭರ್ಜರಿ ಹಿಟ್ ಧಾರವಾಹಿಗಳು. ಇದೀಗ ಜೀ ಕನ್ನಡ ವಾಹಿನಿಯ ಮತ್ತೊಂದು ಸೀರಿಯಲ್ ನಲ್ಲಿ ಸ್ಯಾಂಡಲ್ವುಡ್ ನಟರ ಎಂಟ್ರಿಯಾಗುತ್ತಿದೆ. ಈ ಹಿಂದೆ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸ್ಯಾಂಡಲ್ ವುಡ್ ನಟಿ ಸೋನುಗೌಡ ಅವರು ಎಂಟ್ರಿ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ತಿಳಿದಿದೆ. ಆದರೆ ಈಗ ಮತ್ತೊಂದು ಬೇರೆ ಧಾರವಾಹಿಯಲ್ಲಿ ಮತ್ತೊಬ್ಬ ಸ್ಯಾಂಡಲ್ವುಡ್ ನಟನ ಎಂಟ್ರಿಯಾಗುತ್ತಿದೆ. ಹೌದು ಪಾರು ಸೀರಿಯಲ್ ನಲ್ಲಿ ಸ್ಯಾಂಡಲ್ವುಡ್ ಹೀರೋ ಪಂಕಜ್ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸದ್ಯ ಪಾರು ಮತ್ತೆ ಆದಿ ಕಥೆ ಮದುವೆ ಸುತ್ತ ಸುತ್ತುತ್ತಿದೆ. ಅಖಿಲಾಂಡೇಶ್ವರಿ ತಮ್ಮ ಅಣ್ಣನ ಮಾತಿಗೆ ಬೆಲೆಕೊಟ್ಟು, ಪಾರು ಮತ್ತು ಆದಿ ಪ್ರೀತಿಯನ್ನು ಒಪ್ಪಿಕೊಂಡು ಮದುವೆ ಮಾಡಿಸುತ್ತಾರೆ. ಆದರೆ ತುಂಬಾ ನಂಬಿಕೆ ಇಟ್ಟ ಮಗ ತಮ್ಮಿಂದ ಸತ್ಯವನ್ನು ಮುಚ್ಚಿಟ್ಟು ಮೋಸ ಮಾಡಿದ ಎಂಬ ಕೊರಗು ಅಖಿಲಾಂಡೇಶ್ವರಿ ಅವರನ್ನು ಕಾಡುತ್ತಿರುತ್ತದೆ. ಆದರೆ ಮನೆಯ ಘನತೆ ಹಾಗೂ ಪ್ರತಿಷ್ಠೆಗಾಗಿ ಸೊಸೆಯಾಗಿ ಬಂದ ಪಾರುಳನ್ನು ಮನೆತುಂಬಿಸಿಕೊಳ್ಳುವ ಅಖಿಲಾಂಡೇಶ್ವರಿ ಮನೆ ಬಿಟ್ಟು ಹೋಗುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ನಿರ್ಧಾರದಿಂದ ಮನೆಯವರೆಲ್ಲರೂ ಕಂಗಾಲಾಗಿರುತ್ತಾರೆ. ಆದಿಯ ತಂದೆಯಂತೂ ಈ ವಿಚಾರದ ಬಗ್ಗೆ ಚಿಂತಿಸುತ್ತಾ ಹಾಸಿಗೆ ಹಿಡಿಯುತ್ತಾರೆ. ಇದೆಲ್ಲದರಿಂದ ಆದಿ ಮತ್ತು ಪಾರು ತಮ್ಮಿಂದಲೇ ಇಷ್ಟೆಲ್ಲಾ ಆಗುತ್ತಿದೆ ಹೀಗಾಗಿ ನಾವೇ ಮನೆ ಬಿಟ್ಟು ಹೋಗುತ್ತೇವೆ ಎಂಬ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಆದರೆ ಮುಂದೆ ಏನಾಗಲಿದೆ ಎಂಬುದು ಸದ್ಯಕ್ಕೆ ಕುತೂಹಲದ ಸಂಗತಿ. ಪಾರು ಸೀರಿಯಲ್ ನಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಎಲ್ಲ ಪಾತ್ರಧಾರಿಗಳು ಒಬ್ಬರಿಗಿಂತ ಒಬ್ಬರು ಸೊಗಸಾಗಿ ನಟಿಸುತ್ತಾರೆ. ಒಂದು ಗತ್ತು ಹಾಗೂ ಗಾಂಭೀರ್ಯವಿರುವ ಅಖಿಲಾಂಡೇಶ್ವರಿಯ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ವಿನಯ ಪ್ರಸಾದ್ ಅವರ ನಟನೆಗೆ ಮನಸೋಲದವರಿಲ್ಲ. ಮುಖ್ಯವಾಗಿ ರಣಕಲ್ಲು ವೀರಯ್ಯನ ಪಾತ್ರವನ್ನು ಮಾಡುತ್ತಿರುವ ಹಿರಿಯ ನಟ ಎಸ್ ನಾರಾಯಣ್ ಹಾಗೂ ಅಖಿಲಾಂಡೇಶ್ವರಿ ಒಟ್ಟಿಗೆ ಕಾಣಿಸಿಕೊಳ್ಳುವ ಸೀನ್ ಗಳಂತೂ ಪಾರು ಧಾರಾವಾಹಿಯ ಅಭಿಮಾನಿಗಳ ಫೇವರೆಟ್. ಇದೀಗ ಪಾರು ಸೀರಿಯಲ್ ನಲ್ಲಿ ಹೊಸ ಪಾತ್ರದ ಎಂಟ್ರಿಯಾಗುತ್ತಿದೆ.

ಇದರ ಜೊತೆಗೆ ಇನ್ನೊಂದು ವಿಶೇಷವೆಂದರೆ ಎಸ್ ನಾರಾಯಣ್ ಅವರ ಪುತ್ರ ಪಂಕಜ್ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು ಚೆಲುವಿನ ಚಿಲಿಪಿಲಿ, ಚೈತ್ರದ ಚಂದ್ರಮ ಹೀಗೆ ಹಲವಾರು ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿರುವ ಪಂಕಜ್ ಇದೀಗ ತಂದೆಯವರೊಂದಿಗೆ ಕಿರುತೆರೆಯಲ್ಲಿ ಸ್ಮಾಲ್ ಸ್ಕ್ರೀನ್ ಶೇರ್ ಮಾಡಲು ಬರುತ್ತಿದ್ದಾರೆ. ಎಸ್ ನಾರಾಯಣ್ ಅವರು ಕೂಡ ಪಾರು ಧಾರಾವಾಹಿಯ ಮೂಲಕವೇ ಕಿರುತೆರೆಗೆ ಕಾಲಿಟ್ಟಿದ್ದು. ಇದೀಗ ಅವರ ಮಗ ಕೂಡ ಇದೇ ಧಾರಾವಾಹಿಯ ಮೂಲಕ ಮೊಟ್ಟಮೊದಲ ಬಾರಿಗೆ ಕಿರುತೆರೆಗೆ ಕಾಲಿಡುತ್ತಿರುವುದು ವಿಶೇಷ. ಅಂದಹಾಗೆ ನಟ ಪಂಕಜ್ ಅವರು ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದು ಕಡೆ ಅಖಿಲಾಂಡೇಶ್ವರಿ ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದರೆ, ಇನ್ನೊಂದೆಡೆ ಆದಿ ಕೂಡ ತನ್ನ ಅಮ್ಮನ ಬದಲು ತಾನೇ ಮನೆ ಬಿಟ್ಟು ಹೋಗುವ ನಿರ್ಧಾರ ತೆಗೆದುಕೊಂಡಿರುತ್ತಾನೆ.

ಇದರಿಂದ ಚಿಂತಿತರಾದ ಆದಿಯ ತಂದೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಇವರನ್ನು ಟ್ರೀಟ್ ಮಾಡಲು ಡಾಕ್ಟರ್ ಪಾತ್ರದಲ್ಲಿ ನಟ ಪಂಕಜ್ ಅವರು ಪಾರು ಸೀರಿಯಲ್ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾಹಿತಿ ದೊರಕಿದೆ. ಈಗಾಗಲೇ ಪಂಕಜ್ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿರುವುದಾಗಿ ತಿಳಿದು ಬಂದಿದೆ. ಒಟ್ಟಿನಲ್ಲಿ ಪಾರು ಒಂದು ಪರ್ಫೆಕ್ಟ್ ಫ್ಯಾಮಿಲಿ ಸೀರಿಯಲ್ ಆಗಿದ್ದು, ತಾಯಿ ಮಗನ ಸೆಂಟಿಮೆಂಟ್, ಲವ್ ಮ್ಯಾರೇಜ್ ನಲ್ಲಿ ಆಗುವ ಕುಟುಂಬದೊಂದಿಗಿನ ಕಲಹಗಳನ್ನು ಬಹು ಸೊಗಸಾಗಿ ಧಾರವಾಹಿಯಲ್ಲಿ ಪ್ರೇಕ್ಷಕರ ಮುಂದೆ ಇಡಲಾಗಿದೆ. ಎಲ್ಲ ಸವಾಲುಗಳನ್ನು ಪಾರು ಧಾರಾವಾಹಿಯ ಜೋಡಿಗಳು ಹೇಗೆ ಎದುರಿಸುತ್ತಾರೆ ಎಂಬುದು ಕಥೆಯ ಸಾರಾಂಶ. ಇನ್ನೂ ಡಾಕ್ಟರ್ ಆಗಿ ಎಂಟ್ರಿ ಕೊಡುತ್ತಿರುವ ಪಂಕಜ್ ಅವರಿಂದ ಪಾರು ಧಾರವಾಹಿ ಮತ್ತೊಂದು ತಿರುವು ಪಡೆದುಕೊಳ್ಳುತ್ತದಾ ಎಂಬುದನ್ನು ಕಾದುನೋಡಬೇಕು.

%d bloggers like this: