ಪ್ಯಾನ್ ಇಂಡಿಯಾ ಸಿನಿಮಾಗಳು ಇತ್ತೀಚಿಗೆ ಸಿನಿ ರಂಗದಲ್ಲಿ ಅತೀ ಹೆಚ್ಚು ಟ್ರೆಂಡ್ ಸೃಷ್ಟಿಸಿವೆ. ಮೊದಲು ಒಂದು ಸಿನಿಮಾ ಭರ್ಜರಿ ಹಿಟ್ ನೀಡಿದರೆ, ಆ ಸಿನಿಮಾವನ್ನು ಬೇರೆ ಭಾಷೆಗಳಿಗೆ ರಿಮೇಕ್ ಮಾಡುತ್ತಿದ್ದರು. ಆದರೆ ಈಗ ಎಲ್ಲ ಸ್ಟಾರ್ ನಟರ ಸಿನಿಮಾಗಳು ಎಲ್ಲ ಭಾಷೆಗಳಲ್ಲಿ ಡಬ್ ಆಗಿ ಏಕಕಾಲದಲ್ಲಿ ರಿಲೀಸ್ ಆಗುತ್ತಿವೆ. ಪ್ಯಾನ್ ಇಂಡಿಯಾ ಸಿನಿಮಾದ ಕ್ರೇಜ್ ನಮ್ಮ ಕನ್ನಡ ಚಿತ್ರರಂಗದಿಂದಲೇ ಶುರುವಾಯಿತು ಎನ್ನಬಹುದು. ಕೆಜಿಎಫ್ ಚಿತ್ರದಿಂದ ಎಲ್ಲ ಸ್ಟಾರ್ ನಟರ ಚಿತ್ತ ಪ್ಯಾನ್ ಇಂಡಿಯಾ ಸಿನಿಮಾಗಳತ್ತ ಹರಿಯಲು ಶುರುವಾಗಿದೆ. ಇದೀಗ ಮತ್ತೊಬ್ಬ ಕನ್ನಡದ ನಿರ್ದೇಶಕರು ಪಂಚ ಭಾಷೆಗಳಲ್ಲಿ ಚಿತ್ರ ತಯಾರಿಸಲು ಹೊರಟಿದ್ದಾರೆ.

ಹೌದು ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರವನ್ನು ತಯಾರಿಸಲು ಹೊರಟಿದ್ದಾರೆ. ಈ ಸಿನೆಮಾ ಸಂದೇಶ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಾಣಗೊಳ್ಳುತ್ತಿದ್ದು, ವಿವಿಧ ಭಾಷೆಗಳ ಕಲಾವಿದರು ಈ ಪ್ರಾಜೆಕ್ಟ ನಲ್ಲಿ ಕೆಲಸ ಮಾಡಲಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಅಡಿಯಲ್ಲಿ ಈ ಹಿಂದೆ ರಿಷಬ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿ ಕತೆ ಎಂಬ ಚಿತ್ರ ನಿರ್ಮಾಣವಾಗಿತ್ತು. ಈ ಚಿತ್ರದ ಇನ್ನೊಂದು ವಿಶೇಷತೆಯೆಂದರೆ ಕರ್ನಾಟಕ ಮೂಲದ ನಟ ಹಾಗೂ ಡ್ಯಾನ್ಸ್ ಕೊರಿಯೋಗ್ರಾಫರ್ ಪ್ರಭುದೇವ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಅವರು ದಶಕಗಳ ನಂತರ ಸ್ಯಾಂಡಲ್ವುಡ್ ನಲ್ಲಿ ಸಿನಿಮಾ ಮಾಡಲಿದ್ದಾರೆ. ಎಚ್2ಒ ಚಿತ್ರದಲ್ಲಿ ತಮ್ಮ ನ್ರತ್ಯದ ಮೂಲಕ ನಮ್ಮೆಲ್ಲರನ್ನು ಕುಣಿಸಿದ್ದ ಪ್ರಭುದೇವ್, ಈಗ ಮತ್ತೆ ಕನ್ನಡಿಗರನ್ನು ರಂಜಿಸಲು ಬರುತ್ತಿದ್ದಾರೆ. ಇನ್ನು ಮೇ ತಿಂಗಳಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭಗೊಳ್ಳುವ ನಿರೀಕ್ಷೆ ಇದೆ ಎಂದು ಚಿತ್ರದ ನಿರ್ಮಾಪಕ ಸಂದೇಶ್ ನಾಗರಾಜ್ ಹೇಳಿದ್ದಾರೆ. ಇನ್ನು ಪ್ರಭುದೇವ ಅವರನ್ನು ಮತ್ತೆ ಕನ್ನಡದ ಸಿನಿ ಪರದೆಯಲ್ಲಿ ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.