ಸ್ಯಾಂಡಲ್ವುಡ್ ಇತ್ತೀಚೆಗೆ ತನ್ನ ಯುನಿಕ್ ಕಥೆಗಳ ಮೂಲಕ ಎಲ್ಲರೂ ತಿರುಗಿ ನೋಡುವಂತೆ ಮಾಡುತ್ತಿದೆ. ಹಲವು ಯುವ ನಿರ್ದೇಶಕರು ಮತ್ತು ನಟರು ತಮ್ಮ ಪ್ರತಿಭೆಯ ಮೂಲಕ ಸ್ಯಾಂಡಲ್ವುಡ್ನ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ. ಈ ಹಿಂದೆ ಬೇರೆ ಭಾಷೆಯ ಚಿತ್ರಗಳು ಕನ್ನಡಕ್ಕೆ ರಿಮೇಕ್ ಆಗುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ಕನ್ನಡ ಭಾಷೆಯ ಚಿತ್ರಗಳು ಬೇರೆ ಭಾಷೆಗೆ ರೀಮೇಕ್ ಆಗುತ್ತಿದೆ. ಈ ಉನ್ನತ ಬದಲಾವಣೆಗಳಿಗೆ ಮೂಲಕಾರಣ ನಮ್ಮ ಕನ್ನಡದ ಯುವ ನಿರ್ದೇಶಕರು ಎಂದರೆ ತಪ್ಪಾಗಲಾರದು. ತಮ್ಮ ವಿಶೇಷ ಸಿನಿಮಾಗಳ ಮೂಲಕ ಸ್ಯಾಂಡಲ್ವುಡ್ ನಲ್ಲಿ ವಿಶೇಷ ನಿರ್ದೇಶಕರು ಎಂದು ಖ್ಯಾತಿಯಾದವರು ನಿರ್ದೇಶಕ ಮಂಸೋರೆ.

ನಾತಿಚರಾಮಿ, ಹರಿವು ಮತ್ತು ಆಕ್ಟ್ 1978 ಚಿತ್ರಗಳನ್ನು ನಿರ್ದೇಶಿಸಿರುವ ಮಂಸೋರೆ ಅವರು ತಮ್ಮ ವಿಭಿನ್ನ ಚಿತ್ರ ಕಥೆಗಳಿಗಾಗಿ ರಾಷ್ಟ್ರಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ವಿಭಿನ್ನವಾದ ಚಿತ್ರಕಥೆ, ಎಲ್ಲರನ್ನೂ ಆಕರ್ಷಿಸುವ ಸಿನಿಮಾ ಟೈಟಲ್ಗಳು, ಹೀಗೆ ಎಲ್ಲವೂ ಇವರ ಸಿನಿಮಾದಲ್ಲಿ ವಿಶೇಷವಾಗಿರುತ್ತವೆ. ಇದೀಗ ಮಂಸೋರೆ ಅವರ ಬತ್ತಳಿಕೆಯಿಂದ ಮತ್ತೊಂದು ಚಿತ್ರ ಹೊರಬರಲಿದೆ. ಈ ಹೊಸ ಚಿತ್ರದಲ್ಲಿ ಮಂಸೋರೆ ಅವರು ಸರ್ಕಾರದಿಂದ ಉಂಟಾದ ಮಾನವ ಹಕ್ಕುಗಳ ಉಲ್ಲಂಘನೆಯ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸಿದ್ದಾರೆ. ಚಲನಚಿತ್ರವು ಸರ್ಕಾರ ಮತ್ತು ಸಾಮಾನ್ಯ ಜನರ ಸಮಸ್ಯೆಗಳನ್ನು ಹಾಗೂ ಸರ್ಕಾರದ ವ್ಯವಸ್ಥೆಯ ಅಡಿಯಲ್ಲಿ ಸಾಮಾನ್ಯ ಜನರು ಅನುಭವಿಸುತ್ತಿರುವ ಕಷ್ಟಗಳನ್ನು ತೋರಿಸಲು ಪ್ರಯತ್ನಿಸಿದ್ದಾರೆ.



ಈ ಬಗ್ಗೆ ಖುದ್ದು ಅವರೇ ಮಾಹಿತಿ ನೀಡಿದ್ದು, ಈ ಚಿತ್ರಕ್ಕೆ 19.20.21 ಎಂದು ಹೆಸರಿಡಲಾಗಿದೆ. ಮೊದಲೇ ಹೇಳಿದ ಹಾಗೆ ಟೈಟಲ್ ಮೂಲಕವೇ ಜನರಿಗೆ ಕುತೂಹಲ ಕೆರಳಿಸುವ ಕೆಲಸವನ್ನು ನಿರ್ದೇಶಕ ಮಂಸೋರೆ ಅವರು ಮಾಡಿದ್ದಾರೆ. ಇದೀಗ 19.20.21 ಚಿತ್ರದ ಫಸ್ಟ್ ಪೋಸ್ಟರ್ ಬಿಡುಗಡೆಯಾಗಿದ್ದು, ಪೋಸ್ಟರ್ ನಲ್ಲಿ ಒಬ್ಬ ವ್ಯಕ್ತಿ ಕಣ್ಣು ಮುಚ್ಚಿ ನಿಂತಿದ್ದಾನೆ. ರಕ್ತದಿಂದ ತುಂಬಿರುವ ಅವನ ಕೈಗಳಿಗೆ ಕೈಕೊಳವನ್ನು ಹಾಕಲಾಗಿದೆ. ವಿಭಿನ್ನ ಪೋಸ್ಟರ್ ಮೂಲಕವೇ ಸಾಕಷ್ಟು ಸದ್ದು ಮಾಡುತ್ತಿರುವ ಈ ಚಿತ್ರದಲ್ಲಿ, ಮತ್ತೊಬ್ಬ ಪ್ರಮುಖ ಯುವ ನಿರ್ದೇಶಕ ಹಾಗೂ ನಟ ಕಾಣಿಸಿಕೊಳ್ಳಲಿದ್ದಾರೆ.



ಹೌದು ಗರುಡ ಗಮನ ವೃಷಭ ವಾಹನ ಚಿತ್ರದಿಂದ ಎಲ್ಲರ ಮನೆ ಮಾತಾಗಿರುವ ನಿರ್ದೇಶಕ ಮತ್ತು ನಟ ರಾಜ್.ಬಿ ಶೆಟ್ಟಿ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ನಾನು ಗಮನಿಸಿರುವ ಹಾಗೆ ರಾಜ್.ಬಿ ಶೆಟ್ಟಿ ಅವರು ಉತ್ತಮ ನಿರ್ದೇಶಕರ ಅಷ್ಟೇ ಅಲ್ಲ ಉತ್ತಮ ನಟನೂ ಹೌದು ಎಂಬುದು ನನಗೆ ಅರ್ಥವಾಗಿದೆ ಎಂದು ಮಂಸೋರೆ ಅವರು ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಇನ್ನು ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದ್ದು ಪ್ರಸಿದ್ಧ ನಟರು ಮತ್ತು ರಂಗಭೂಮಿಯ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಪೋಸ್ಟರ್ ಮೂಲಕವೇ ಸದ್ದು ಮಾಡುತ್ತಿರುವ 19.20.21 ಚಿತ್ರವನ್ನು ನೋಡಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.