ಧಾರಾವಾಹಿಗಳು ಜನರ ದಿನನಿತ್ಯದ ಭಾಗವಾಗಿವೆ. ಯಾವ ಸಿನಿಮಾಗಳಿಗೂ ಕಡಿಮೆ ಇಲ್ಲವೆಂಬಂತೆ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಕಥೆ, ನಿರ್ದೇಶನ, ಆಕ್ಷನ್, ರೋಮ್ಯಾನ್ಸ್ ಎಲ್ಲವನ್ನು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೇ, ಧಾರವಾಹಿಗಳಲ್ಲೂ ನೋಡಬಹುದು. ಅಲ್ಲದೇ ಸೀರಿಯಲ್ ಗಳು ದೈನಂದಿನ ಘಟನೆಗಳಿಗೆ ಹೆಚ್ಚಿನ ಮಹತ್ವ ನೀಡುವುದರಿಂದ ಬಹುಬೇಗ ವೀಕ್ಷಕರಿಗೆ ಹತ್ತಿರವಾಗುತ್ತಿವೆ. ಸೀರಿಯಲ್ ಸ್ಟಾರ್ ಗಳು ಕೂಡ ಸಿನಿಮಾ ಸ್ಟಾರ್ ಗಳಂತೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಧಾರಾವಾಹಿಗಳು ಮುಗಿದು ಹೋದರೂ ಕೆಲವೊಂದು ಪಾತ್ರಗಳು ನಮ್ಮಲ್ಲಿಯೇ ಉಳಿದುಬಿಡುತ್ತವೆ. ಧಾರಾವಾಹಿಯ ಕಥೆ ಮರೆತು ಹೋದರೂ, ಆ ಪಾತ್ರಧಾರಿಗಳ ಅಭಿನಯವನ್ನು ಮರೆಯಲು ಸಾಧ್ಯವಾಗುವುದಿಲ್ಲ. ಹೀಗೆ ಕೆಲವೊಂದು ಧಾರಾವಾಹಿಗಳು ಮತ್ತು ಪಾತ್ರಗಳು ನಮ್ಮಲ್ಲಿ ಹಸಿರಾಗಿರುತ್ತವೆ.

ಕಿರುತೆರೆಯಲ್ಲಿ ತನ್ನದೇ ಆದ ವಿಭಿನ್ನ ಕಥೆಯೊಂದಿಗೆ ಜನರ ಮನಸ್ಸನ್ನು ಸೂರೆಗೊಳಿಸಿದ ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿ ಮಿಥುನ ರಾಶಿ. ಕಿರುತೆರೆಯಲ್ಲಿ ಎಷ್ಟೋ ಧಾರಾವಾಹಿಗಳು ಪ್ರಸಾರವಾಗುತ್ತವೆ. ಅದರಲ್ಲಿ ಕೆಲವು ಜನರನ್ನು ರಂಜಿಸುವಲ್ಲಿ ಸಫಲವಾಗುತ್ತವೆ. ಇನ್ನೂ ಕೆಲವು ಆಗುವುದಿಲ್ಲ. ಆದರೆ ಎಲ್ಲಾ ಧಾರಾವಾಹಿಗಳು ಒಂದು ದಿನ ತನ್ನ ಪ್ರಸಾರವನ್ನು ಮುಗಿಸಲೇಬೇಕು. ಇದೀಗ ಮಿಥುನ ರಾಶಿ ತಂಡ ತನ್ನ ಅಭಿಮಾನಿಗಳಿಗೆ ಅಂತಿಮ ವಿದಾಯ ಹೇಳಲು ಸಜ್ಜಾಗಿದೆ. ಈ ಧಾರಾವಾಹಿಯ ಮುಖ್ಯ ಪಾತ್ರಧಾರಿಯಾದ ರಾಶಿ ಎಂಬ ಹುಡುಗಿ ತನ್ನ ಸಂಸಾರವನ್ನು ಸಾಗಿಸಲು ತನ್ನ ತಂದೆಯಂತೆ ತಾನೂ ಕೂಡ ಆಟೋ ಓಡಿಸಿಕೊಂಡು ತನ್ನ ಸಂಸಾರದ ಜವಾಬ್ದಾರಿಯನ್ನು ನಿರ್ವಹಿಸುವ ಕಥೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದರು.

ಕಷ್ಟದಿಂದ ಆಟೋ ಓಡಿಸಿ ಬಂದ ಹಣದಲ್ಲಿ ತನ್ನ ಮನೆಯ ಖರ್ಚನ್ನು ನಿಭಾಯಿಸುವುದಲ್ಲದೇ ತನ್ನ ಓದಿನ ಖರ್ಚನ್ನು ನೋಡಿಕೊಳ್ಳುತ್ತಿದ್ದ ರಾಶಿ, ತನ್ನ ಜೀವನದಲ್ಲಾಗುವ ತಿರುವುಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಳು. ಸತತ ಮೂರು ವರ್ಷಗಳಿಂದ ತನ್ನದೇ ಆದ ರೀತಿಯಲ್ಲಿ ಈ ಧಾರಾವಾಹಿ ರಂಜಿಸುತ್ತಾ ಬಂದಿದ್ದು, ಇದೀಗ ತನ್ನ ಅಭಿಮಾನಿಗಳಿಗೆ ಕಹಿ ಸುದ್ದಿಯೊಂದನ್ನು ನೀಡಿದೆ. ಮಿಡಲ್ ಕ್ಲಾಸ್ ಹುಡುಗಿ, ಹೈ ಕ್ಲಾಸ್ ಹುಡುಗನ ಬದುಕಿನ ಆಗು ಹೋಗುಗಳ ಬಗ್ಗೆ ಕಥೆ ಸಾಗಿ ಬಂದಿದ್ದು, ಈಗ ಈ ಜೋಡಿ ಹ್ಯಾಪಿ ಫ್ಯಾಮಿಲಿಗೆ ಶುಭಂ ಹೇಳುತ್ತಿದೆ. ವೃದ್ದಿ ಕ್ರಿಯೇಶನ್ ನಡಿ ಮೂಡಿ ಬಂದ ಈ ಸೀರಿಯಲ್ ಮೂಲಕ ವೈಷ್ಣವಿ ಸ್ವಾಮಿನಾಥನ್ ಎಲ್ಲರ ಫೇವರೆಟ್ ಎನಿಸಿಕೊಂಡರು.

ಇನ್ನು ಹರಿಣಿ ಶ್ರೀಕಾಂತ್, ರಮ್ಯ, ಯದುಶ್ರೇಷ್ಠ, ದೀಪ ಕಟ್ಟೆ, ಸಂಪತ್ ಹೀಗೆ ದೊಡ್ಡ ಕಲಾವಿದರ ಬಳಗ ಹೊಂದಿದ್ದ ಮಿಥುನ ರಾಶಿ ತಂಡ ವೈನಡಪ್ ಆಗುತ್ತಿರುವುದು ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಮಿಥುನರಾಶಿ ತಂಡ ಇನ್ನು ಕೆಲವೇ ದಿನಗಳು ಮಾತ್ರ ಪ್ರಸಾರವಾಗಲಿದೆ. ಈ ತಿಂಗಳ ಕೊನೆಯ ವಾರದಲ್ಲಿ ಲಾಸ್ಟ್ ಎಪಿಸೋಡ್ ಗಳು ಟೆಲಿಕಾಸ್ಟ್ ಆಗಲಿವೆ. ಇನ್ನು ಕಲರ್ಸ್ ವಾಹಿನಿಯಲ್ಲಿ ಮಿಥುನ ರಾಶಿಯ ನಿರ್ಗಮನದ ನಂತರ ಹೊಸ ಧಾರಾವಾಹಿಯೊಂದರ ಆಗಮನವಾಗುತ್ತಿದೆ. ಪುರಂದರದಾಸರ ಜೀವನವನ್ನು ಆಧಾರಿತ ಕಥೆಯೊಂದನ್ನು ದಾಸ ಪುರಂದರ ಎಂಬ ಶೀರ್ಷಿಕೆಯಲ್ಲಿ ವೀಕ್ಷಕರ ಮುಂದಿರುವ ಪ್ರಯತ್ನವನ್ನು ಕಲರ್ಸ್ ವಾಹಿನಿ ಮಾಡುತ್ತಿದೆ.