ಕನ್ನಡದಲ್ಲಿ ಬಂತು ಮೊಟ್ಟಮೊದಲ ವರ್ಚುವಲ್ ಸಿನಿಮಾ

ಇಡೀ ಜಗತ್ತು ಮರೆಯಲಾರದಂತಹ ವರ್ಷ 2020, ಇಡೀ ಜಗತ್ತೇ ಕೋರೋನ ಮಹಾಮಾರಿಯಿಂದ ಭಯಭೀತಗೊಂಡು ಮನೆಯಲ್ಲಿಯೇ ಕುಳಿತಿತ್ತು. ಹಲವಾರು ಜನರು ಸೋಂಕಿನ ಕಾರಣದಿಂದಾಗಿ ಮನೆಯವರಿಂದ ದೂರವೇ ಉಳಿಯುವ ಪರಿಸ್ಥಿತಿ ಎದುರಾಗಿತ್ತು. ಇಂತಹ ಒಂದು ವೈರಸ್ ನಿಂದ ಇಡೀ ಜಗತ್ತೇ ಒಂದು ವರ್ಷ ಸ್ತಬ್ಧವಾಗಬಹುದು ಎಂದು ಯಾರೂ ಊಹಿಸಿರಲಿಲ್ಲ. ಲಾಕ್ ಡೌನ್ ನಿಂದಾಗಿ ಹಲವಾರು ಜನರು ತಮ್ಮ ಫ್ಯಾಮಿಲಿಯಿಂದ ದೂರ ಉಳಿದಿದ್ದರು. ಇದೀಗ ಇದೇ ಕಥೆಯನ್ನಾಧರಿಸಿ ಸಿನಿಮಾ ಒಂದನ್ನು ತಗೆಯಲು ನಿರ್ದೇಶಕರು ರೆಡಿ ಆಗಿದ್ದಾರೆ. ಹೌದು ಮೆಡ್ ಇನ್ ಚೈನಾ ಎನ್ನುವ ಹೆಸರಿನೊಂದಿಗೆ ಕನ್ನಡದಲ್ಲಿ ಮೊದಲ ಬಾರಿಗೆ ವರ್ಚುವಲ್ ಸಿನಿಮಾವೊಂದು ರೆಡಿಯಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಪತಿ ವಿದೇಶದಲ್ಲಿ ಲಾಕ್ ಆಗುತ್ತಾನೆ ಮತ್ತು ಹೆಂಡತಿ ಭಾರತದಲ್ಲಿ ಪತಿಗೋಸ್ಕರ ಚಡಪಡಿಸುತ್ತಿರುತ್ತಾಳೆ.

ಈ ಘಟನೆಯ ಸುತ್ತ ಸಿನಿಮಾ ಕಥೆಯನ್ನು ಹೆಣೆದು ‘ಮೇಡ್ ಇನ್ ಚೈನಾ’ ಎಂಬ ಹೆಸರಿನೊಂದಿಗೆ ಸಿನಿಮಾ ಬಿಡುಗಡೆಯಾಗುತ್ತಿದೆ. ಇಕ್ಕಟ್, ಬಡವ ರಾಸ್ಕಲ್ ಸಿನಿಮಾ ಖ್ಯಾತಿಯ ನಾಗಭೂಷಣ್ ಮತ್ತು ಪ್ರಿಯಾಂಕಾ ತಿಮ್ಮೇಶ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮೇಡ್ ಇನ್ ಚೈನಾ ಸಿನಿಮಾವನ್ನು ಪ್ರೀತಂ ತೆಗ್ಗಿನಮನೆ ನಿರ್ದೇಶಿಸುತ್ತಿದ್ದಾರೆ. ಈ ಮೊದಲು ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಪ್ರೀತಂ ತೆಗ್ಗಿನಮನೆ ಅವರು ಇದೇ ಮೊದಲ ಬಾರಿಗೆ ಮೇಡ್ ಇನ್ ಚೈನಾ ಸಿನಿಮಾದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ವುಡ್ಗೆ ಪ್ರವೇಶಿಸುತ್ತಿದ್ದಾರೆ. ನಿರ್ದೇಶನದ ಜೊತೆಜೊತೆಗೆ ಛಾಯಾಗ್ರಹಣ, ವಿ.ಎಫ್.ಎಕ್ಸ್, ಸಂಕಲನದ ಜವಾಬ್ದಾರಿಯನ್ನು ಕೂಡ ಪ್ರೀತಂ ಅವರೇ ನಿರ್ವಹಿಸುತ್ತಿರುವುದು ವಿಶೇಷ.

ಈ ಚಿತ್ರದಲ್ಲಿ ಗೌರವ್ ಶೆಟ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಅರುಣಾ ಬಾಲರಾಜ್, ರವಿ ಭಟ್ ನಟಿಸಿದ್ದಾರೆ. ಇನ್ನು ಮೇಡಂ ಚೈನಾ ಸಿನಿಮಾಗೆ ಪ್ರೀತಂ ಅವರೇ ಚಿತ್ರಕಥೆ ಬರೆದಿದ್ದು, ವಿವಾನ ರಾಧಾಕೃಷ್ಣ ಸಂಗೀತ ಸಂಯೋಜನೆ ನೀಡಿದ್ದಾರೆ. ಎನ್.ಕೆ ಸ್ಟುಡಿಯೋಸ್ ಬ್ಯಾನರ್ ನಡಿ ನಂದಕಿಶೋರ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಕ್ರಿಸ್ಟಲ್ ಪಾರ್ಕ್ ಬ್ಯಾನರಿನಡಿ ಈ ಸಿನಿಮಾವನ್ನು ನಿರ್ಮಾಪಕ ಚಂದ್ರಶೇಖರ್ ಪ್ರಸ್ತುತಪಡಿಸುತ್ತಿದ್ದಾರೆ. ಈಗಾಗಲೇ ಟೀಸರ್ ಮೂಲಕ ನಿರೀಕ್ಷೆಯನ್ನು ಹೆಚ್ಚಿಸಿರುವ ಈ ಸಿನೆಮಾ ಇದೇ ತಿಂಗಳು ತೆರೆಕಾಣಲಿದೆ. ಹೌದು ಮೇಡ್ ಇನ್ ಚೈನಾ ಚಿತ್ರದ ರಿಲೀಸ್ ದಿನಾಂಕವನ್ನು ಚಿತ್ರತಂಡ ಬಹಿರಂಗಪಡಿಸಿದೆ. ಇದೇ ಮಾರ್ಚ್ 11ಕ್ಕೆ ಮೇಡ್ ಇನ್ ಚೈನಾ ಎಲ್ಲೆಡೆ ಬಿಡುಗಡೆಯಾಗುತ್ತಿದೆ.

%d bloggers like this: