ಇತ್ತೀಚೆಗೆ ಹೊಸ ಧಾರಾವಾಹಿಗಳ ಇನ್ನಿಂಗ್ಸ್ ಶುರುವಾಗಿದೆ. ಒಂದಾದಮೇಲೊಂದರಂತೆ ಅನೇಕ ಹೊಸ ಧಾರಾವಾಹಿಗಳು ಸ್ಮಾಲ್ ಸ್ಕ್ರೀನ್ ಗೆ ಲಗ್ಗೆ ಇಡುತ್ತಿವೆ. ಕಿರುತೆರೆಯಲ್ಲಿ ಧಾರಾವಾಹಿಗಳು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸುತ್ತಲೇ ಇರುತ್ತವೆ. ಚಾನೆಲ್ ಗಳ ಟಿ ಆರ್ ಪಿ ಗೋಸ್ಕರ ಹೊಸ ಹೊಸ ಕಥೆಗಳನ್ನು ಹುಡುಕಿ ಜನರ ಮುಂದೆ ತರುತ್ತಲೇ ಇರುತ್ತವೆ. ಸದ್ಯಕ್ಕೆ ಉದಯವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಬರಲು ಸಜ್ಜಾಗಿದೆ. ರಾಧಿಕಾ ಎಂಬ ಹೆಸರಿನಿಂದ ಬರುತ್ತಿರುವ ಈ ಧಾರಾವಾಹಿ, ತಮಿಳು ಭಾಷೆಯಿಂದ ಡಬ್ ಆಗಿದೆ. ತಮಿಳಿನ ಸನ್ ಟಿವಿಯಲ್ಲಿ ಪ್ರಸಾರವಾಗುವ ಕಾಯಲ್ ಎಂಬ ಧಾರಾವಾಹಿ ಕನ್ನಡಕ್ಕೆ ಡಬ್ ಆಗುತ್ತಿದೆ. ಈ ಧಾರಾವಾಹಿಯು ಒಬ್ಬ ಹೆಣ್ಣುಮಗಳು ತನ್ನ ಕುಟುಂಬ ಹಾಗೂ ಮನೆಗಾಗಿ ಒಬ್ಬಳೇ ದುಡಿಯುತ್ತಿರುತ್ತಾಳೆ.

ತುಂಬಾ ಧೈರ್ಯವಂತೆ ಯಾಗಿರುವ ಇವಳ ಸುತ್ತ ನಡೆಯುವ ಕಥೆಯನ್ನು ಈ ಧಾರವಾಹಿ ಒಳಗೊಂಡಿದೆ. ಈ ಗಟ್ಟುಗಿತ್ತಿಯ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಈಗಾಗಲೇ ಈ ಪಾತ್ರಕ್ಕಾಗಿ ನಟಿಯನ್ನು ಆಯ್ಕೆ ಮಾಡಲಾಗಿದೆ. ಹೌದು ರಾಧಿಕಾ ಧಾರವಾಹಿಯಲ್ಲಿ ರಾಧಿಕಾ ಪಾತ್ರಕ್ಕಾಗಿ ನಟಿ ಕಾವ್ಯ ಶಾಸ್ತ್ರಿ ಬಣ್ಣ ಹಚ್ಚುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ನರ್ಸ್ ಪಾತ್ರವನ್ನು ವಹಿಸುತ್ತಿರುವ ಇವರು, ತಾನೊಬ್ಬಳೇ ಮನೆಯನ್ನು ನಿಭಾಯಿಸುತ್ತಿರುತ್ತಾಳೆ. ರಾಧಿಕಾ ಎಂಬ ಹುಡುಗಿ ಮಧ್ಯಮವರ್ಗದ ಅವಿವಾಹಿತ ಮಹಿಳೆ. ಕುಟುಂಬದ ಏಕೈಕ ಆಧಾರಸ್ತಂಭ. ತನ್ನ ಒಡಹುಟ್ಟಿದವರ ಭವಿಷ್ಯ ರೂಪಿಸಲು ಹಗಲು ಇರುಳು ದುಡಿಯುತ್ತಿರುತ್ತಾಳೆ.



ತನ್ನ ಸಹೋದರ ಪೊಲೀಸ್ ಆಗಲಿ, ಒಬ್ಬ ಸಹೋದರಿ ಡಾಕ್ಟರ್ ಆಗಲಿ, ಮತ್ತು ಇನ್ನೊಬ್ಬಳು ಕಾರ್ಪೊರೇಟ್ ಉದ್ಯೋಗ ಪಡೆಯಲಿ ಎಂಬುದು ರಾಧಿಕಾಳ ಆಸೆ. ಇದಕ್ಕಾಗಿ ಅವಳು ಉಪ್ಪಿರುವ ಆಹಾರವನ್ನು ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುತ್ತಾಳೆ. ರಾಧಿಕಾ ತನ್ನ ಜೀವನದ ಪ್ರತಿಯೊಂದು ಸವಾಲನ್ನು ನಗುಮುಖದಿಂದ ಸ್ವೀಕರಿಸುತ್ತಾ, ಆರ್ಥಿಕವಾಗಿ ದುರ್ಬಲವಾಗಿರುವ ಹುಡುಗಿಯರ ಜೀವನದಲ್ಲಿ ಯಶಸ್ವಿಯಾಗಲು ಇರುವ ಏಕೈಕ ಆಸ್ತಿ ಧೈರ್ಯವೆಂದು ನಂಬಿರುತ್ತಾಳೆ. ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುವ ರಾಧಿಕಾ, ಆಸ್ಪತ್ರೆಯಲ್ಲಿ ಎಲ್ಲರ ಬಗ್ಗೆ ಕಾಳಜಿಯುಳ್ಳ, ಎಲ್ಲರೂ ಇವಳನ್ನು ಇಷ್ಟಪಡುವಂತಹ ನರ್ಸ್ ಆಗಿರುತ್ತಾಳೆ.



ತನ್ನ ಒಡಹುಟ್ಟಿದವರ ಜೀವನವನ್ನು ದಡ ಮುಟ್ಟಿಸುವಲ್ಲಿ ರಾಧಿಕಾ ಗೆಲ್ಲುತ್ತಾಳಾ, ರಾಧಿಕಾ ತನ್ನ ಸ್ವಾತಂತ್ರ್ಯ ಜೀವನವನ್ನು ಅನುಭವಿಸಲು ಮುಂದೆ ಸಾಧ್ಯವೇ, ಇಷ್ಟೆಲ್ಲಾ ಕುತೂಹಲಗಳಿಂದ ರಾಧಿಕಾ ತನ್ನ ಪ್ರಸಾರವನ್ನು ಶುರು ಮಾಡಲಾಗಿದೆ. ಶ್ರೀ ದುರ್ಗಾ ಕ್ರಿಯೇಷನ್ಸ್ ಅಡಿಯಲ್ಲಿ ಬರಲಿರುವ ರಾಧಿಕಾ ಧಾರಾವಾಹಿಯನ್ನು ಗಣಪತಿ ಭಟ್ ಅವರು ನಿರ್ಮಾಣ ಮಾಡುತ್ತಿದ್ದು, ದರ್ಶಿತ್ ಭಟ್ ಅವರು ನಿರ್ದೇಶಿಸುತ್ತಿದ್ದಾರೆ. ಗಣೇಶ್ ಹೆಗಡೆ ಮತ್ತು ಕೃಷ್ಣ ಕಂಚನಹಳ್ಳಿ ಛಾಯಾಗ್ರಹಣ ನೀಡಿದ್ದು, ಸುನಾದ್ ಗೌತಮ್ ಅವರು ಶೀರ್ಷಿಕೆ ಗೀತೆ ಸಂಯೋಜನೆ ಮಾಡಿದ್ದಾರೆ. ಧಾರಾವಾಹಿಗೆ ಸಂಭಾಷಣೆಯನ್ನು ತುರುವೇಕೆರೆ ಪ್ರಸಾದ್ ಬರೆದಿದ್ದು, ರಾಘವೇಂದ್ರ ಅವರು ಸಂಕಲನದ ಹೊಣೆ ಹೊತ್ತಿದ್ದಾರೆ. ಧಾರಾವಾಹಿಯ ವಿಶೇಷತೆಯೆಂದರೆ ಕಾಸ್ಟಿಂಗ್.



ರಾಧಿಕಾ ಪಾತ್ರವನ್ನು ಜನಪ್ರಿಯ ನಟಿ ಕಾವ್ಯ ಶಾಸ್ತ್ರಿ ನಿರ್ವಹಿಸುತ್ತಿದ್ದು, ಈ ಹಿಂದೆ ನಂದಿನಿ ಧಾರಾವಾಹಿಯಲ್ಲಿ ತ್ರಿಶಲಾ ಎಂಬ ಆತ್ಮವಿಶ್ವಾಸ ಹೊತ್ತ ಶಕ್ತಿಯುತವಾದ ಕಾಲ್ಪನಿಕ ಪಾತ್ರವನ್ನು ನಿರ್ವಹಿಸಿದ್ದರು. ಉದಯವಾಹಿನಿಯಲ್ಲಿ ಇಂತಹ ಪಾತ್ರಗಳನ್ನು ಪಡೆಯಲು ನಾನು ನಿಜಕ್ಕೂ ಅದೃಷ್ಟಶಾಲಿ ಎಂದು ನಟಿ ಕಾವ್ಯ ಶಾಸ್ತ್ರಿ ಹೇಳಿಕೊಂಡಿದ್ದಾರೆ. ಇನ್ನು ಈ ದಾರಾವಾಹಿಯ ನಾಯಕ ನಟ ಶರತ್ ಕ್ಷತ್ರೀಯ. ಹಿರಿಯ ನಟರಾದ ಗಾಯತ್ರಿ ಪ್ರಭಾಕರ್, ರವಿ ಕಲಾ ಬ್ರಹ್ಮ, ಮಾಲತಿ, ಸುರೇಶ್ ರೈ, ಸವಿತಾ ಕೃಷ್ಣಮೂರ್ತಿ, ಶ್ವೇತಾ ರಾವ್, ಸುನಿಲ್, ಜೀವನ್, ರೇಖಾ ಸಾಗರ್ ಮತ್ತು ನವ ನಟರಾದ ಇಂಚರ ಶೆಟ್ಟಿ, ಪ್ರಿಯದರ್ಶಿನಿ ಮತ್ತು ಬೇಬಿ ದೃಯಾ ಆದಿತ್ಯ ಇದ್ದಾರೆ.