ಕನ್ನಡಕ್ಕೆ ಬಂತು ಸುಪ್ರಸಿದ್ಧ ಫೋರೆನ್ಸಿಕ್ ಚಿತ್ರ

ವಿಶೇಷವಾದ ಕಥಾವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಭಾರತೀಯ ಚಿತ್ರರಂಗದ ಮಾಲಿವುಡ್ ಮೊದಲನೇ ಸ್ಥಾನ ಗಿಟ್ಟಿಸಿಕೊಳ್ಳುತ್ತದೆ. ಹೌದು ಮಲಯಾಳಂ ಸಿನಿಮಾಗಳು ಯಾವಾಗಲೂ ವಿಶೇಷವಾದ ಮತ್ತು ಯೂನಿಕ್ ಕಂಟೆಂಟ್ ಗಳನ್ನು ಹೊರತರುತ್ತವೆ. 2020ರಲ್ಲಿ ಮಲಯಾಳಂನಲ್ಲಿ ಬಿಡುಗಡೆಯಾದ ಫೋರೆನ್ಸಿಕ್ ಚಿತ್ರವು ತನ್ನ ವಿಶೇಷವಾದ ಕಂಟೆಂಟ್ ಗಳಿಂದ ಭರ್ಜರಿ ಹಿಟ್ ನೀಡಿದೆ. ಈ ಚಿತ್ರವನ್ನು ಸಿನಿಪ್ರೇಕ್ಷಕರು ತುಂಬಾ ಮೆಚ್ಚಿಕೊಂಡಿದ್ದರು. ಮಲಯಾಳಂ ನಲ್ಲಿ ಧೂಳೆಬ್ಬಿಸಿದ ಈ ಸಿನಿಮಾ ಈಗ ಕನ್ನಡದಲ್ಲಿ ರಿಲೀಸ್ ಆಗಲು ರೆಡಿಯಾಗುತ್ತಿದೆ. ಫೋರೆನ್ಸಿಕ್ ಚಿತ್ರವು ಅಂತಿಮ ಕ್ಷಣ ಎಂಬ ಶೀರ್ಷಿಕೆಯಿಂದ ಕನ್ನಡದ ಅಭಿಮಾನಿಗಳನ್ನು ರಂಜಿಸಲು ಬರುತ್ತಿದೆ. ವಿಶೇಷವೆಂದರೆ ರತ್ನನ್ ಪ್ರಪಂಚ ಚಿತ್ರದಲ್ಲಿ ನಟ ಡಾಲಿ ಧನಂಜಯ್ ಅವರಿಗೆ ನಾಯಕಿಯಾಗುವ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದ ರೆಬಾ ಮೋನಿಕಾ ಜಾನ್ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

2016 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ರೆಬಾ ಅವರು, ತಮ್ಮ ಸಿನಿಪಯಣವನ್ನು ಆರಂಭಿಸಿದ್ದು ಮಲಯಾಳಂ ಚಿತ್ರದ ಮೂಲಕ. ಮಲಯಾಳಂನಲ್ಲಿ ಸಿಕ್ಕ ಯಶಸ್ಸಿನ ನಂತರ ಅನೇಕ ಸ್ಟಾರ್ ಕಲಾವಿದರ ಜೊತೆ ಅಭಿನಯಿಸಿ ಸೈ ಎನಿಸಿಕೊಂಡರು. ನಂತರ ರತ್ನನ್ ಪ್ರಪಂಚ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಈ ನಟಿ ಕನ್ನಡಿಗರಿಗೂ ಅಚ್ಚುಮೆಚ್ಚು. ಒಟಿಟಿಯಲ್ಲಿ ಬಿಡುಗಡೆಯಾದ ರತ್ನನಪ್ರಪಂಚ ಚಿತ್ರವು ಜನರ ಮೆಚ್ಚುಗೆಯನ್ನು ಗಳಿಸಿತ್ತು. ರತ್ನನ್ ಪ್ರಪಂಚ ಚಿತ್ರದಿಂದ ಅನೇಕ ಕನ್ನಡ ಅಭಿಮಾನಿಗಳನ್ನು ಹೊಂದಿರುವ ಈ ನಟಿ, ಅಂತಿಮ ಕ್ಷಣ ಚಿತ್ರದ ಬಳಿಕ ಕನ್ನಡದಲ್ಲಿ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿಸಿಕೊಳ್ಳುವುದಂತೂ ಗ್ಯಾರಂಟಿ. ಅಖಿಲ್ ಪೌಲ್ ಹಾಗೂ ಅನಾಸ್ ಖಾನ್ ಅವರು ಫೋರೆನ್ಸಿಕ್ ಚಿತ್ರವನ್ನು ಮಲೆಯಾಳಂನಲ್ಲಿ ನಿರ್ದೇಶನ ಮಾಡಿದ್ದಾರೆ.

ಟೋವಿನೋ ಥಾಮಸ್, ರೆಬಾ ಮೋನಿಯಾ ಜಾನ್, ಮಮತಾ ಮೋಹನದಾಸ್, ಪ್ರತಾಪ್ ಪೋಪನ್ ಮತ್ತು ಬಿಜು ಜಾನ್ ಅವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮಲಯಾಳಂ ಫೋರೆನ್ಸಿಕ್ ಚಿತ್ರಕ್ಕೆ ಜೇಕ್ಸ್ ಬಿಜೋಯ್ ಸಂಗೀತ ನಿರ್ದೇಶನ ಮಾಡಿದ್ದು, ಅಖಿಲ್ ಜಾರ್ಜ್ ಛಾಯಾಗ್ರಹಣ ಮಾಡಿದ್ದಾರೆ. ಸಮೀರ್ ಅಹಮದ್ ಅವರ ಸಂಕಲನ, ಬಿ.ಮಂಜುನಾಥ್ ಹಾಗೂ ರಜನೀಶ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ತನ್ನ ವಿಭಿನ್ನ ಕಂಟೆಂಟ್ ಮೂಲಕ ಎಲ್ಲರ ಗಮನ ಸೆಳೆದಿರುವ ಈ ಚಿತ್ರವನ್ನು ಕನ್ನಡ ಸಿನಿಪ್ರೇಕ್ಷಕರು ನೋಡುವಂತಾಗಲಿ ಎಂದು ಕನ್ನಡಕ್ಕೆ ಡಬ್ ಮಾಡಲಾಗುತ್ತಿದೆ. ಫೋರೆನ್ಸಿಕ್ ಚಿತ್ರವನ್ನು ಗೋಪಿನಾಥ್ ಮತ್ತು ಚಂದ್ರಶೇಖರ್ ಅವರು ಕನ್ನಡಕ್ಕೆ ಡಬ್ ಮಾಡಿಸುತ್ತಿದ್ದಾರೆ. ಈಗಾಗಲೇ ಡಬ್ಬಿಂಗ್ ಕೆಲಸಗಳು ವೇಗದಿಂದ ಸಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಅಂತಿಮ ಕ್ಷಣ ಚಿತ್ರವು ಬಿಡುಗಡೆಯಾಗಲಿದೆ.

ಕನ್ನಡಕ್ಕೆ ಡಬ್ ಆಗಿ ಅಂತಿಮ ಕ್ಷಣ ಶೀರ್ಷಿಕೆಯಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾವನ್ನು ನೋಡಲು ರೆಬಾ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ರೆಬಾ ಅವರ ಜೊತೆ, ಮಿನ್ನಲ್ ಮುರುಳಿ ಚಿತ್ರದಲ್ಲಿ ನಟಿಸಿದ್ದ ಟೋವಿನೋ ಥಾಮಸ್ ಕೂಡ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಫ್ಯಾಂಟಸಿ ಶೈಲಿಯಲ್ಲಿ ಮೂಡಿ ಬಂದಿದ್ದ ಮಿನ್ನಲ್ ಮುರುಳಿ ಚಿತ್ರವು ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಕನ್ನಡದಲ್ಲಿ ಡಬ್ ಆಗಿ ವೀಕ್ಷಣೆಗೆ ಲಭ್ಯವಾಗಿತ್ತು. ಈ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿರುವ ಟೋವಿನೋ ಥಾಮಸ್ ಅಂತಿಮ ಕ್ಷಣ ಸಿನಿಮಾ ಮೂಲಕ ಮನರಂಜನೆ ನೀಡಲಿದ್ದಾರೆ. ರತ್ನನ್ ಪ್ರಪಂಚ ಸಿನಿಮಾದಲ್ಲಿ ರೆಬಾ ಮೋನಿಕಾ ಜಾನ್ ಅವರ ನಟನೆಯನ್ನು ನೋಡಿ ಮೆಚ್ಚಿಕೊಂಡಿದ್ದ ಎಲ್ಲರೂ ಈಗ ಅಂತಿಮ ಕ್ಷಣ ಚಿತ್ರವನ್ನು ನೋಡಲು ಕಾಯುತ್ತಿದ್ದಾರೆ.

%d bloggers like this: