ಕನ್ನಡಕ್ಕೆ ದೂರದರ್ಶನ ತರುತ್ತಿದ್ದಾರೆ ‘ದಿಯಾ’ ಖ್ಯಾತಿಯ ನಟ 

2020ರಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿದ ದಿಯಾ ಚಿತ್ರದ ನಾಯಕ ಪ್ರಿಥ್ವಿ ಅಂಬರ್ ಅವರು ಮೂಲತಃ ಕಾಸರಗೋಡಿನವರು. ಹಾಗೆಯೇ ಚಿಕ್ಕವರಿದ್ದಾಗ ಪ್ರಿಥ್ವಿ ಅವರು ಮನೆಯವರೊಂದಿಗೆ ಕೃಷಿ ಮಾಡುತ್ತಿದ್ದರಂತೆ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಪ್ರಿಥ್ವಿ ಅವರು ಕೃಷಿಯ ಜೊತೆ ಜೊತೆಗೆ ಸಿನಿಮಾಗಳ ಬಗ್ಗೆ ಗಮನ ಹರಿಸುವುದನ್ನು ಕೂಡ ಕಡಿಮೆ ಮಾಡಿಲ್ಲ. ದಿಯಾ ಸಿನಿಮಾ ನಂತರ ಸಾಕಷ್ಟು ಆಫರ್ ಗಳು ಇವರತ್ತ ಬಂದವು, ಹೀಗಾಗಿ ಇಷ್ಟು ದಿನ ಕೇವಲ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರಂತೆ. ಹಾಗೆಯೇ ಸ್ನೇಹಿತರೊಂದಿಗೆ ಸೇರಿ ಸ್ಕ್ರಿಪ್ಟ್ ಕೂಡ ಬರೆಯುತ್ತಿದ್ದಾರೆ. ಇವರು ಸ್ಕ್ರಿಪ್ಟ್ ಬರೆದ ಒಂದು ಪ್ರಾಜೆಕ್ಟ್ ಶೂಟಿಂಗ್ ಗೆ ರೆಡಿ ಆಗಿದೆಯಂತೆ.

ದಿಯಾ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ದರ್ಶನ್ ಅಪೂರ್ವ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಹಾಗೂ ಇವರ ಶುಗರ್ ಲೆಸ್, ಲೈಫ್ ಈಸ್ ಬ್ಯೂಟಿಫುಲ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ. ಇವರು ಫ್ರೆಂಡ್ಸ್ ಜೊತೆ ಸೇರಿ ಹಾರರ್ ಸಿನಿಮಾ ಕೂಡ ಮಾಡ್ತಾ ಇದ್ದಾರಂತೆ. ಇದೀಗ ನಟ ಪೃಥ್ವಿ ಅಂಬರ್ ರವರ ಮತ್ತೊಂದು ಸಿನಿಮಾ ರೆಡಿಯಾಗುತ್ತಿದೆ. ಮಂಗಳೂರು ಮೂಲದ ಸುಕೇಶ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ದೂರದರ್ಶನ’ ಎಂದು ಹೆಸರಿಡಲಾಗಿದೆ. ದೂರದರ್ಶನ ಚಿತ್ರದ ಬಗ್ಗೆ ಮಾಹಿತಿ ನೀಡಿದ ಸುಕೇಶ್ ಶೆಟ್ಟಿ ಅವರು, ಈ ಸಿನಿಮಾದ ಕಥೆ 1986 ಸೆಪ್ಟೆಂಬರ್ ನಿಂದ 1987 ಅಕ್ಟೋಬರ್ ಅವಧಿಯಲ್ಲಿ ನಡೆಯುವಂಥದ್ದು.

ಕರಾವಳಿ ಮತ್ತು ಪಶ್ಚಿಮ ಘಟ್ಟದಲ್ಲಿರುವ ಸಣ್ಣ ಹಳ್ಳಿಗೆ ಒಂದು ದೂರದರ್ಶನ ಬಂದರೆ ಅಲ್ಲಿನ ಸ್ಥಿತಿ ಹೇಗೆ ಬದಲಾಗಬಹುದು ಎಂಬುದು ಕಥೆಯ ಸಾರಾಂಶ. ಕೇವಲ ರೇಡಿಯೋ, ಚಿತ್ರಗೀತೆ, ನಾಟಕ, ಯಕ್ಷಗಾನ ಇತ್ಯಾದಿಗಳಷ್ಟೇ ಇರುವ ಕರಾವಳಿ ತೀರದಲ್ಲಿ ದೂರದರ್ಶನದಿಂದಾಗುವ ಆಗುಹೋಗುಗಳನ್ನು ಸೊಗಸಾಗಿ ಈ ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರದಲ್ಲಿ ನಾಯಕ ಪೃಥ್ವಿ ಅವರು ಟಿವಿ ಬಂದ ಮನೆಯ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗುಂಪು ಗುಂಪಾಗಿ ಜನರು ದೂರದರ್ಶನವನ್ನು ನೋಡಲು ಬರುವಾಗ ಮನೆಯವರ ಸ್ಥಿತಿ, ಆ ಊರಿನ ಗುಂಪು, ಗಲಾಟೆ ಕ್ರೇಜ್ ಗಳನ್ನು ತಮಾಷೆಯ ರೀತಿಯಲ್ಲಿ ಹೇಳಲಾಗಿದೆ. ಇವೆಲ್ಲದರ ನಡುವೆ ಒಂದು ಪ್ರೀತಿಯ ಎಳೆಯೂ ಇದೆ. ಇಡೀ ಚಿತ್ರದಲ್ಲಿ ಟಿವಿಯೇ ಪ್ರಧಾನ. ಥಿಯೇಟರ್, ಡ್ಯಾನ್ಸ್ ಹಿನ್ನೆಲೆ ಇರುವ ಪವಿತ್ರಾ ಈ ಚಿತ್ರದ ನಾಯಕಿ.

ಈ ಸಬ್ಜೆಕ್ಟ್ ಯುನಿವರ್ಸಲ್ ಆಗಿರುವ ಕಾರಣ ಸಿನಿಮಾದಲ್ಲಿ ಮಂಗಳೂರು ಭಾಷೆಯನ್ನು ಉಪಯೋಗಿಸಲಾಗಿಲ್ಲ. ಇದೊಂಥರಾ ನಮ್ಮ ನಾಸ್ಟಾಲ್ಜಿಯಾ ಕೆದಕುವ ಪ್ರಯತ್ನ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ಈ ಚಿತ್ರ ಕನೆಕ್ಟ್ ಆಗುತ್ತದೆ ಎಂದು ನಿರ್ದೇಶಕರು ಹೇಳುತ್ತಾರೆ. ವಾಸುಕಿ ವೈಭವ್ ಅವರ ಸಂಗೀತ ಚಿತ್ರಕ್ಕಿದ್ದು, ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಇದೊಂದು ನೈಜ ಘಟನೆ ಹಾಗೂ ಕಾಲ್ಪನಿಕತೆಯನ್ನು ಬೆರೆತ ಕಾಮಿಡಿ ಡ್ರಾಮಾ ಆಗಿದ್ದು, ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಪುತ್ತೂರು ಕಾಸರಗೋಡು ಮಧ್ಯದ ಆರ್ಲಪದವಿನಲ್ಲಿ ಚಿತ್ರೀಕರಣ ನಡೆದಿದ್ದು ಬಹಳ ರಿಯಲಿಸ್ಟಿಕ್ ಆಗಿ ಮೂಡಿಬಂದಿದೆ ಎನ್ನುತ್ತಾರೆ ನಿರ್ದೇಶಕರು.

%d bloggers like this: