ಕ್ರಿಕೇಟ್ ಎಂದರೆ ನಮ್ಮ ದೇಶದಲ್ಲಿ ಒಂದು ಧರ್ಮವೆಂದು ಮತ್ತು ಅದಕ್ಕೆ ಸಚಿನ್ ತೆಂಡೂಲ್ಕರ್ ಒಬ್ಬ ದೇವರೆಂದೇ ಪರಿಗಣಿಸಲಾಗುತ್ತದೆ. ಅದು ಕ್ರಿಕೆಟ್ ಆಟದ ಬಗ್ಗೆ ನಮ್ಮ ದೇಶದಲ್ಲಿನ ಜನರ ಪ್ರೀತಿ ಮತ್ತು ಅಭಿಮಾನ ಎನ್ನಬಹುದು. ಹೀಗಾಗಿಯೇ ಕ್ರಿಕೆಟ್ ಆಟಕ್ಕೆ ಸಂಭಂದಿಸಿದ ಯಾವುದೇ ಹುದ್ದೆ ಅಥವಾ ಸ್ಥಾನವು ಬಹಳ ಮಹತ್ವ ಪಡೆದುಕೊಳ್ಳುತ್ತದೆ. ಅದರಲ್ಲೂ ಆಯ್ಕೆ ಸಮಿತಿಯ ಸದಸ್ಯತ್ವ ಹಾಗು ಅಧ್ಯಕ್ಷರ ಪಟ್ಟ ಎಂದರೆ ಇಡೀ ದೇಶವೇ ಗಮನಿಸುವ ಹುದ್ದೆಯಾಗಿದ್ದು ತುಂಬಾ ಪ್ರಾಮುಖ್ಯತೆಯನ್ನು ಹೊಂದಿದೆ.

ಇಷ್ಟು ದಿನಗಳವರೆಗೆ ಕನ್ನಡದ ಖ್ಯಾತ ಮಾಜಿ ಕ್ರಿಕೆಟಿಗ ಸುನೀಲ್ ಜೋಶಿ ಅವರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು ಆದರೆ ಈಗ ಅವರ ಸ್ಥಾನಕ್ಕೆ ಚೇತನ್ ಶರ್ಮಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಕನ್ನಡಿಗನ ಸ್ಥಾನ ಕೈತಪ್ಪಿದಂತಾಗಿದೆ. ಹೌದು ಮಾಜಿ ವೇಗಿಗಳಾದ ಚೇತನ್ ಶರ್ಮಾ ಅಬೆ ಕೊರವಿಲ್ಲಾ ಹಾಗೂ ಮೋಹಂತಿ ಅವರು ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಬಿಸಿಸಿಐನ ನಿಯಮಾವಳಿಗಳ ಪ್ರಕಾರ ಆಯ್ಕೆ ಸಮಿತಿಯಲ್ಲಿರುವ ಐದು ಜನ ಸದಸ್ಯರ ಪೈಕಿ ಅತಿ ಹೆಚ್ಚು ಪಂದ್ಯಗಳನ್ನು ಆಡಿರುವ ಸದಸ್ಯನಿಗೆ ಅಧ್ಯಕ್ಷ ಪಟ್ಟ ಒಲಿಯುತ್ತದೆ.

ಹೀಗಾಗಿ ಸುನಿಲ್ ಜೋಶಿ 15 ಟೆಸ್ಟ್ ಪಂದ್ಯಗಳನ್ನು ಆಡಿದ್ದರೆ ಚೇತನ ಶರ್ಮಾ ಅವರು 23 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಹಾಗಾಗಿ ನಿಯಮಾವಳಿಗಳ ಪ್ರಕಾರ ಚೇತನ್ ಶರ್ಮ ಅವರು ಹೊಸ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಹೊಸ ಅಧ್ಯಕ್ಷರಾಗಿ ಆಯ್ಕೆಗೊಂಡ ಚೇತನ್ ಶರ್ಮಾ ಮಾತನಾಡಿ ಭಾರತೀಯ ಕ್ರಿಕೆಟ್ ಗೆ ಮತ್ತೊಮ್ಮೆ ಸೇವೆಸಲ್ಲಿಸುವ ಸೌಭಾಗ್ಯ ನನಗೆ ಸಿಕ್ಕಿರುವುದು ನನ್ನ ಅದೃಷ್ಟ, ನಾನು ಹೆಚ್ಚಾಗಿ ಮಾತನಾಡುವ ಅಂತಹ ವ್ಯಕ್ತಿಯಲ್ಲ ನನ್ನ ಕೆಲಸಗಳೇ ಮಾತನಾಡುವಂತೆ ಮಾಡುತ್ತೇನೆ ಎಂದು ಹೇಳಿದರು.

ಚೇತನ್ ಶರ್ಮಾ ಅವರು ವಿಶ್ವಕಪ್ ಪಂದ್ಯಾವಳಿಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯನ್ನು ಹೊಂದಿರುವವರು. ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಬಹುಮುಖ್ಯ ಸರಣಿಗೆ ತಂಡವನ್ನು ಆಯ್ಕೆ ಮಾಡುವುದು ಹೊಸದಾಗಿ ನೇಮಕಗೊಂಡಿರುವ ಸದಸ್ಯ ಪೀಠದ ಮುಂದಿರುವ ಮೊದಲ ಹಾಗೂ ಬಹುದೊಡ್ಡ ಜವಾಬ್ದಾರಿಯಾಗಿದೆ. ಒಟ್ಟಾರೆ ಇಷ್ಟು ದಿನ ಬಹುಮುಖ್ಯ ಪದವಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕನ್ನಡಿಗ ಸುನಿಲ್ ಜೋಶಿಯವರ ಸ್ಥಾನ ಈಗ ಕೈತಪ್ಪಿದ್ದು ಕನ್ನಡಿಗರಿಗೆ ನಿರಾಶೆ ತಂದಿದೆ.