ಪರಿಶುದ್ದ ಪ್ರೇಮ ಕಥಾ ಹಂದರ ಹೊಂದಿರುವ ಲವ್ಲೀ ಸ್ಟಾರ್ ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯಂ ಸಿನಿಮಾ ಇದೀಗ ಯಶಸ್ವಿ ಇಪ್ಪತ್ತೈದು ದಿನಗಳತ್ತ ಸಾಗುತ್ತಿದೆ. ವಿಶೇಷ ಅಂದರೆ ಈ ಪ್ರೇಮಂ ಪೂಜ್ಯಂ ಸಿನಿಮಾ ಪ್ರೇಮ್ ಅವರ ಇಪ್ಪತ್ತೈದನೇ ಚಿತ್ರವಾಗಿತ್ತು. ಕೋವಿಡ್ ಲಾಕ್ ಡೌನ್ ಮಾರ್ಗಸೂಚಿಯಲ್ಲಿ ಸಿನಿಮಾ ಮಂದಿರಗಳಿಗೆ ಸಂಪೂರ್ಣ ವಿನಾಯಿತಿ ಸಿಕ್ಕ ಬಳಿಕ ಕನ್ನಡದ ಬಹುತೇಕ ಬಿಗ್ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೊಳ್ಳಲು ಆರಂಭವಾದವು. ದೊಡ್ಡ ಸ್ಟಾರ್ ನಟರ ಸಿನಿಮಾಗಳ ನಡುವೆಯೇ ಬಿಡುಗಡೆಯಾದ ಪ್ರೇಮಂ ಪೂಜ್ಯಂ ಸಿನಿಮಾ ಕನ್ನಡ ಸಿನಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ವೈದ್ಯರಾದ ರಾಘವೇಂದ್ರ ಅವರು ನಿರ್ದೇಶನದ ಜೊತೆಗೆ ಸಾಹಿತ್ಯ ಮತ್ತು ರಾಗ ಸಂಯೋಜನೆ ಮಾಡಿದ್ದು, ಚಿತ್ರದ ಎಲ್ಲಾ ಹಾಡುಗಳು ಕೂಡ ಮಾಧುರ್ಯಭರಿತವಾಗಿವೆ.

ಯುವ ಮನಸ್ಸುಗಳನ್ನು ಸೆಳೆಯುತ್ತಿರುವ ಪ್ರೇಮಂ ಪೂಜ್ಯಂ ಸಿನಿಮಾ ಇದೀಗ ಹತ್ತು ಕೋಟಿ ಕ್ಲಬ್ ಸೇರುವ ಮೂಲಕ ಇಡೀ ಸಿನಿಮಾ ತಂಡದ ಸಂತೋಷ ಸಂಭ್ರಮ ಪಡಲು ಕಾರಣವಾಗಿದೆ. ಇತ್ತೀಚೆಗೆ ಕನ್ನಡ ಸೇರಿದಂತೆ ಪರಭಾಷೆಯ ಸಿನಿಮಾಗಳು ಕೂಡ ಸಾಲು ಸಾಲಾಗಿ ಬಿಡುಗಡೆಯಾಗುತ್ತಿದ್ದು, ರಾಜ್ಯದಲ್ಲಿರುವ ಅದರಲ್ಲೂ ಪ್ರಮುಖ ನಗರದ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳಿಗೆ ಥಿಯೇಟರ್ ಸಮಸ್ಯೆ ಕಾಡುತ್ತಿದೆ. ಇಂತಹ ಸಂಧರ್ಭದಲ್ಲಿಯೂ ಕೂಡ ಪ್ರೇಮಂ ಪೂಜ್ಯಂ ಸಿನಿಮಾ ತನಗೆ ಸಿಕ್ಕ ಥಿಯೇಟರ್ ಗಳಲ್ಲೇ ಹೌಸ್ ಫುಲ್ ಪ್ರದರ್ಶನ ಕಂಡು ಯಶಸ್ವಿಯಾಗಿದೆ.

ಕೆದಂಬಾಡಿ ಕ್ರಿಯೇಷನ್ಸ್ ಬ್ಯಾನರ್ ಅಡಿ ಸಂಪೂರ್ಣವಾಗಿ ವೈದ್ಯರ ತಂಡವೇ ಬಂಡವಾಳ ಹೂಡಿ ನಿರ್ಮಾಣ ಮಾಡಿರುವ ಈ ಮ್ಯೂಸಿಕಲ್ ಲವ್ ಸ್ಟೋರಿ ಪ್ರೇಮಂ ಪೂಜ್ಯಂ ಸಿನಿಮಾಗೆ ನವೀನ್ ಅವರ ಛಾಯಾಗ್ರಹಣ ಪ್ಲಸ್ ಪಾಯಿಂಟ್ ಎನ್ನಬಹುದು. ಅಷ್ಟರ ಮಟ್ಟಿಗೆ ನವೀನ್ ಅವರ ಕ್ಯಾಮಾರಾ ಕೈ ಚಳಕ ಪ್ರೇಕ್ಷಕರ ಕಣ್ಮನ ಸೆಳೆಯುವಂತಿದೆ. ಇತ್ತೀಚೆಗೆ ಪ್ರೇಮಂ ಪೂಜ್ಯಂ ಸಿನಿಮಾ ನೋಡಲು ಬೆಂಗಳೂರಿನ ಮೂವಿಲ್ಯಾಂಡ್ ಥಿಯೇಟರ್ ಮುಂಭಾಗ ಕಾಲೇಜ್ ಹುಡುಗರ ದಂಡೇ ಸೇರಿದ ದೃಶ್ಯವೊಂದು ಗಾಂಧಿನಗರದರಲ್ಲಿ ಭಾರಿ ಗಮನ ಸೆಳೆಯಿತು. ನಟ ಲವ್ಲೀ ಸ್ಟಾರ್ ಪ್ರೇಮ್ ಅವರು ತಮ್ಮ ಚಿತ್ರಕ್ಕೆ ಸಿಗುತ್ತಿರುವ ಮೆಚ್ಚುಗೆ ಬೆಂಬಲ ಪ್ರೋತ್ಸಾಹಕ್ಕೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದಷ್ಟು ಪೋಸ್ಟ್ ಹಾಕುವ ಮೂಲಕ ಧನ್ಯವಾದ ತಿಳಿಸುತ್ತಿದ್ದಾರೆ.