ಕಿಚ್ಚನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಭಾರತದ ಖ್ಯಾತ ನಿರ್ದೇಶಕ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಇದೇ ಗುರುವಾರ ವಿಶ್ವವಾದ್ಯಂತ ಬಿಡುಗಡೆಯಾಗಿ ಸಕ್ಕತ್ತಾಗಿ ಸದ್ದು ಮಾಡುತ್ತಿದೆ. ಬಿಡುಗಡೆಗೆ ಮುನ್ನ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದ್ದ ವಿಕ್ರಾಂತ್ ರೋಣ ಚಿತ್ರ ನಿರೀಕ್ಷೆಗೆ ತಕ್ಕಂತೆ ಜನರಿಗೆ ಹಬ್ಬದ ಊಟ ಬಡಿಸಿದೆ. ಕಳೆದೆರಡು ವರ್ಷಗಳಿಂದ ಈ ಚಿತ್ರ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಮಾಡುತ್ತಲೇ ಇತ್ತು. ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನ ಬುರ್ಜ್ ಖಲೀಫಾ ಮೇಲೆ ತನ್ನ ಟೀಸರ್ ಲಾಂಚ್ ಮಾಡಿ ವಿಶ್ವದಲ್ಲೇ ಇದನ್ನು ಮಾಡಿದ ಮೊದಲ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅದಾದ ಮೇಲೆ ಚಿತ್ರದ ಒಂದೊಂದೇ ಪಾತ್ರಗಳನ್ನು ಬಹಳ ವಿಶೇಷವಾಗಿ ಚಿತ್ರತಂಡ ಜನರ ಮುಂದೆ ತಂದಿತು ಹಾಗೂ ಇದೆ ಮೊದಲ ಬಾರಿ ಅಭಿನಯ ಚಕ್ರವರ್ತಿ ಇಂತಹ ಒಂದು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು ಅದನ್ನು ಕಣ್ತುಂಬಿಕೊಳ್ಳುವ ಕಾತುರ ಎಲ್ಲರಲ್ಲೂ ಮನೆ ಮಾಡಿತ್ತು.

ಇದೀಗ ಚಿತ್ರ ಬಿಡುಗಡೆಗೊಂಡು ಎಲ್ಲ ಭಾಷೆಗಳಲ್ಲೂ ಸಖತ್ ಸೌಂಡ್ ಮಾಡಿದ್ದು ಮೂರೆ ದಿನಕ್ಕೆ ಬರೋಬ್ಬರಿ 48 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದೆ. ಕೆಜಿಎಫ್ ಹಾಗೂ ಚಾರ್ಲಿ ನಂತರ ಈ ಚಿತ್ರ ಮತ್ತೊಮ್ಮೆ ಕನ್ನಡದ ತಾಕತ್ತು ಏನೆಂದು ಇಡೀ ವಿಶ್ವಕ್ಕೆ ಪರಿಚಯಿಸಿದೆ. ಕಿಚ್ಚ ಸುದೀಪ್ ಅವರ ಈ ವಿಶೇಷ ಚಿತ್ರಕ್ಕೆ ಎಲ್ಲ ಚಿತ್ರರಂಗದಿಂದಲೂ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು ಇದೀಗ ಭಾರತದ ಖ್ಯಾತ ನಿರ್ದೇಶಕ ಒಬ್ಬರು ಈ ಕುರಿತು ಹೊಗಳಿ ಮಾತನಾಡಿದ್ದಾರೆ.

ಹೌದು ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ವಿಕ್ರಾಂತ ರೋಣ ಚಿತ್ರದ ಕುರಿತು ಮೆಚ್ಚುಗೆಯ ಮಾತನಾಡಿ ಟ್ವೀಟ್ ಮಾಡಿದ್ದಾರೆ. ಇಂತಹ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಲು ಧೈರ್ಯ ಬೇಕು. ಸುದೀಪ್ ಅವರು ಆ ಧೈರ್ಯ ಮಾಡಿ ಚಿತ್ರಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ. ಚಿತ್ರದ ಅಭೂತಪೂರ್ವ ಯಶಸ್ಸಿಗೆ ಶುಭಾಶಯಗಳು ಎಂದು ಸುದೀಪ್ ಅವರ ಬಗ್ಗೆ ಹಾಗೂ ಚಿತ್ರದ ಬಗ್ಗೆ ಹೊಗಳಿ ಮಾತನಾಡಿದ್ದಾರೆ. ಒಟ್ಟಾರೆಯಾಗಿ ಇದೀಗ ಮತ್ತೊಂದು ಕನ್ನಡ ಚಿತ್ರ ಕನ್ನಡಿಗರ ಹೆಮ್ಮೆಯನ್ನು ಇಮ್ಮಡಿಗೊಳಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

%d bloggers like this: