ದೇಶದಲ್ಲಿ ಅತಿ ಹೆಚ್ಚು ಫ್ಯಾನ್ಸ್ ಗಳನ್ನು ಹೊಂದಿರುವ ಕ್ರೀಡೆ ಕ್ರಿಕೆಟ್. ಸಣ್ಣ ವಯಸ್ಸಿನವರಿಂದ ಹಿಡಿದು ಹಿರಿಯ ವಯಸ್ಕರವರೆಗೂ ಎಲ್ಲರ ನೆಚ್ಚಿನ ಕ್ರೀಡೆ ಇದಾಗಿದೆ. ಜಗತ್ತಿನಲ್ಲಿ ಯಾವುದೇ ಕ್ರೀಡೆಗೂ ಇರಲಾರದಷ್ಟು ಕ್ರೇಜ್ ಕ್ರಿಕೆಟ್ಗೆ ಇದೆ. ಬೇರೆ ಸ್ಫೋರ್ಟ್ಸ್ ಪರ್ಸನ್ ಗಳಿಗೆ ಹೋಲಿಸಿದರೆ ಕ್ರಿಕೆಟಿಗರ ಅಭಿಮಾನಿ ಬಳಗವೆ ಹೆಚ್ಚಾಗಿದೆ. ಅದರಲ್ಲೂ ಐಪಿಎಲ್ ಶುರುವಾದರಂತೂ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ಔತಣವಿದ್ದಂತೆ. ಈ ಬಾರಿಯ 15ನೇ ಆವೃತ್ತಿಯ ಐಪಿಎಲ್ ನಲ್ಲಿ ಹೊಸದಾಗಿ 2ತಂಡಗಳು ಸೇರ್ಪಡೆಗೊಂಡಿರುವುದು ಗೊತ್ತಿರುವ ಸಂಗತಿ. ಐಪಿಎಲ್ ಆಟಗಾರರ ಮೆಗಾ ಹರಾಜಿಗೆ ಕೆಲವೇ ದಿನಗಳು ಬಾಕಿ ಇರುವಾಗಲೇ, ಅಹಮದಾಬಾದ್ ಐಪಿಎಲ್ ತಂಡಕ್ಕೆ ಅಧಿಕೃತ ಹೆಸರೊಂದನ್ನು ಘೋಷಿಸಲಾಗಿದೆ.

2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹೊಸದಾಗಿ ಪಾಲ್ಗೊಳ್ಳುತ್ತಿರುವ ಅಹಮದಾಬಾದ್ ಮೂಲದ ತಂಡಕ್ಕೆ ಗುಜರಾತ್ ಟೈಟಾನ್ಸ್ ಎಂದು ಹೆಸರಿಟ್ಟಿರುವುದಾಗಿ ಅಹಮದಾಬಾದ್ ಮೂಲದ ಐಪಿಎಲ್ ಫ್ರಾಂಚೈಸಿ ಅಧಿಕೃತವಾಗಿ ಘೋಷಿಸಿದೆ. ಈ ಮೊದಲು ತಂಡಕ್ಕೆ ಅಹಮದಾಬಾದ್ ಟೈಟಾನ್ಸ್ ಎಂದು ಹೆಸರಿಡಲಾಗಿತ್ತು. ಕಳೆದ ಹಲವು ವರ್ಷಗಳಿಂದ ಭಾರತದ ಕ್ರಿಕೆಟ್ ತಂಡಕ್ಕೆ ಹಲವು ಕ್ರಿಕೆಟ್ ದಿಗ್ಗಜರನ್ನು ಗುಜರಾತ್ ನೀಡಿದೆ. ಫ್ರಾಂಚೈಸಿಯು ಕ್ರಿಕೆಟ್ ಪರಂಪರೆಯನ್ನು ಇನ್ನೂ ಬಲಿಷ್ಠವಾಗಿ ಕಟ್ಟಿ ಮುಂದುವರೆಸಲು ಇದು ಒಂದು ಅವಕಾಶ ಎಂದು ಭಾವಿಸಿಕೊಂಡು ಅಭಿಮಾನಿಗಳು ಹೆಮ್ಮೆಪಡುವಂತಹ ತಂಡವನ್ನು ಕಟ್ಟಲಿದ್ದೇವೆ. ಅದಕ್ಕಾಗಿ ಈ ತಂಡಕ್ಕೆ ಗುಜರಾತ್ ಟೈಟಾನ್ಸ್ ಎಂದು ಹೆಸರಿಡಲಾಗಿದೆ.

ಹಾಗೂ ಗುಜರಾತ್ ಕ್ರಿಕೆಟನ ಶ್ರೀಮಂತ ಪರಂಪರೆಗೆ ಗೌರವ ಸೂಚಿಸುವ ಸಲುವಾಗಿ ರಾಜ್ಯದ ಹೆಸರನ್ನು ಇಡಲಾಗಿದೆ ಎಂದು ಅಹಮದಾಬಾದ್ ಫ್ರಾಂಚೈಸಿ ಮಾಲೀಕರಾದ ಸಿವಿಸಿ ಕ್ಯಾಪಿಟಲ್ಸ್ ಹಾಗೂ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಐಪಿಎಲ್ ಆಟಗಾರರ ಹರಾಜು ಮುನ್ನ ಗುಜರಾತ್ ಟೈಟಾನ್ಸ್ ತಂಡವು ಮೂರು ಆಟಗಾರರನ್ನು ಆಯ್ದುಕೊಂಡಿದೆ. ಟೀಮ್ ಇಂಡಿಯಾ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ರಶೀದ್ ಖಾನ್ ಅವರಿಗೆ ತಲಾ 15ಕೋಟಿ ರೂಪಾಯಿ ಮತ್ತು ಶುಭಮನ್ ಗಿಲ್ ಅವರಿಗೆ 8ಕೋಟಿ ರೂಪಾಯಿ ನೀಡಿ ತನ್ನಡೆ ಸೆಳೆದುಕೊಂಡಿದೆ. ಇನ್ನು ಈ ಫ್ರಾಂಚೈಸಿಯ ಬಳಿ 52 ಕೋಟಿ ರೂಪಾಯಿ ಉಳಿದುಕೊಂಡಿದ್ದು ಈ ಹಣದಲ್ಲಿಯೇ ಉಳಿದ ಆಟಗಾರರನ್ನು ಖರೀದಿಸಬೇಕಿದೆ. ಇನ್ನೊಂದೆಡೆ ಆರ್ಪಿ ಸಂಜೀವ್ ಗೊಎಂಕ ಒಡೆತನದ ಲಖನೌ ಫ್ರಾಂಚೈಸಿ ಬರೋಬ್ಬರಿ 7090 ಕೋಟಿ ರೂಪಾಯಿ ಹಣವನ್ನು ನೀಡಿ ಲಕನೌ ಸೂಪರ್ ಜಯಿಂಟ್ಸ್ ತಂಡವನ್ನು ಖರೀದಿಸಿದೆ.

ಕೆಎಲ್ ರಾಹುಲ್ ಅವರಿಗೆ ಲಖನೌ ತಂಡದ ನಾಯಕನ ಪಟ್ಟ ಕಟ್ಟಲಾಗಿದ್ದು, ಸುಮಾರು 17ಕೋಟಿ ರೂಪಾಯಿ ನೀಡಲಾಗಿದೆ. ಆಸ್ಟ್ರೇಲಿಯಾದ ಆಲ್-ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಅವರಿಗೆ 9.2 ಕೋಟಿ ರೂಪಾಯಿ ಮತ್ತು ಯುವ ಲೆಗ್ ಸ್ಪಿನ್ನರ್ ರವಿ ಬಿಷ್ನೋಯ್ ಅವರಿಗೆ ನಾಲ್ಕು ಕೋಟಿ ರೂಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಉಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲು ಲಖನೌ ತಂಡದ ಬಳಿ 59 ಕೋಟಿ ರೂಪಾಯಿ ಉಳಿದಿದೆ. ಅಹಮದಾಬಾದ್ ಟೈಟಾನ್ಸ್ ತಂಡದ ಕೋಚ್ ಆಗಿ ಟೀಮ್ ಇಂಡಿಯಾ ಮಾಜಿ ವೇಗಿ ಆಶಿಶ್ ನೆಹ್ರಾ ನೇಮಕವಾಗಿದ್ದು, ಗ್ಯಾರಿ ಕಸ್ಟರ್ನ್ ಬ್ಯಾಟಿಂಗ್ ಕೋಚ್ ಹಾಗೂ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ವಿಕ್ರಂ ಸೋಳಂಕಿ ಕ್ರಿಕೆಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.