ಮಕ್ಕಳಿಗೆ ಟೀ/ಕಾಫಿ ಕುಡಿಸುವ ಪೋಷಕರೇ, ಈ ವಿಷಯ ನಿಮಗೆ ತಿಳಿದಿರಲಿ

ಮಕ್ಕಳು ಹಿರಿಯರನ್ನು ಅನುಸರಿಸುತ್ತಾರೆ. ಮನೆಯಲ್ಲಿ ಹಿರಿಯರ ದೈನಂದಿನ ಚಟುವಟಿಕೆಗಳನ್ನು ವೀಕ್ಷಿಸುವ ಮಕ್ಕಳು ದೊಡ್ಡವರ ಹವ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಇನ್ನು ಮನೆಯಲ್ಲಿ ದೊಡ್ಡವರಿಗೆ ಕಾಫಿ ಅಥವಾ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಇದನ್ನು ಕಂಡ ಮಕ್ಕಳು ತಾವು ಕೂಡ ಚಹಾ ಅಥವಾ ಕಾಫಿ ಕುಡಿಯಲು ಬಯಸುತ್ತಾರೆ. ಆದರೆ ವೈದ್ಯರ ಸಲಹೆಯ ಪ್ರಕಾರ ಮಕ್ಕಳು ಹಾಲನ್ನು ಕುಡಿಯಬೇಕು. ಮನೆಯಲ್ಲಿ ಮಕ್ಕಳು ಚಹಾ ಅಥವಾ ಕಾಫಿಯನ್ನು ಕುಡಿಯುವುದರಿಂದ ಅವರಲ್ಲಿ ಎದುರಾಗಬಹುದಾದ ಆರೋಗ್ಯದ ಸಮಸ್ಯೆಗಳು, ದುಷ್ಪರಿಣಾಮಗಳು ಅಥವಾ ಪ್ರಯೋಜನಗಳು ಏನೆಂಬುದನ್ನು ತಿಳಿಯಲು ಮುಂದೆ ಓದಿ. ವೈದ್ಯರು ಹೇಳುವ ಪ್ರಕಾರ ಮಕ್ಕಳು ಕಾಫಿ ಕುಡಿಯಬಾರದು.

ಕಾಫಿಯಲ್ಲಿ ಕೆಫಿನ್ ಎಂಬ ಅಂಶವಿರುವುದರಿಂದ ಇದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಕಾಫಿಯಲ್ಲಿರುವ ಕೆಫಿನ್ ಅಂಶವು ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮೆದುಳಿನಲ್ಲಿ ನಿದ್ರೆ ಪ್ರಚೋದಕ ರಾಸಾಯನಿಕವನ್ನು ತಡೆದು ಹೆಚ್ಚು ಜಾಗರೂಕರಾಗಿರುವಂತೆ ಮಾಡುತ್ತದೆ. ಹೀಗಾಗಿ ಕಾಫಿಯನ್ನು ಮಕ್ಕಳು ಕುಡಿದರೆ, ನಿದ್ರೆಯ ತೊಂದರೆ ಉಂಟಾಗುತ್ತದೆ. ಕಾಫಿಯು ಮೂತ್ರದ ರಚನೆಯನ್ನು ಹೆಚ್ಚಿಸುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗಿ ಮೂಳೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಮಕ್ಕಳ ಹಸಿವನ್ನು ಕಡಿಮೆ ಮಾಡುತ್ತದೆ. ಕಾಫಿಯನ್ನು ಸಾಮಾನ್ಯವಾಗಿ ಆಮ್ಲೀಯ ಎಂದು ಪರಿಗಣಿಸಲಾಗುತ್ತದೆ. ಇದು ದಂತದ ಕವಚವನ್ನು ದುರ್ಬಲಗೊಳಿಸುತ್ತದೆ ಇದರಿಂದ ಮಕ್ಕಳಿಗೆ ಹಲ್ಲಿನ ಸಮಸ್ಯೆ ಉಂಟಾಗಬಹುದು.

ಅಲ್ಲದೆ ಏಕಾಗ್ರತೆಯ ಕೊರತೆ, ಹೈಪರ್ ಆಕ್ಟಿವಿಟಿ, ಚಡಪಡಿಕೆ ಮುಂತಾದ ಲಕ್ಷಣಗಳಿಗೆ ಇದು ಕಾರಣವಾಗುತ್ತದೆ. ಇನ್ನು ನೀವು ಮಕ್ಕಳಿಗೆ ಟಿ ನೀಡುತ್ತಿದ್ದರೆ, ಹರ್ಬಲ್ ಅಥವಾ ಗ್ರೀನ್ ಟೀ ನೀಡುವುದು ಉತ್ತಮ. ಏಕೆಂದರೆ ಇದು ನೈಸರ್ಗಿಕ ಉತ್ಕರ್ಷಣ ನಿರೋಧಕಗಳಾದ ಕ್ಯಾಟೇಚಿನ್ ಗಳನ್ನು ಹೊಂದಿರುತ್ತದೆ. ಇದು ಸೂಕ್ಷ್ಮಜೀವಿಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಇನ್ನು ಮಕ್ಕಳಿಗಾಗಿ ಚಹಾ ತಯಾರಿಸುವ ವಿಧಾನ, ಒಂದು ಲೋಹದ ಪಾತ್ರೆಗೆ ಅರ್ಧ ಗ್ಲಾಸ್ ನೀರನ್ನು ಕುದಿಸಿ ಅದಕ್ಕೆ ಶುಂಠಿ ಅಥವಾ ಏಲಕ್ಕಿ ಪುಡಿಯನ್ನು ಸೇರಿಸಿ ಒಂದು ಚಮಚ ಚಹಾ ಪುಡಿಯನ್ನು ಸೇರಿಸಿ ಸುಮಾರು ಎರಡು ಮೂರು ನಿಮಿಷಗಳ ಕಾಲ ಕುದಿಯಲು ಬಿಟ್ಟು ಹಾಲನ್ನು ಸೇರಿಸಿ ಕೊಡಿ. ನಿಮ್ಮ ಮಕ್ಕಳಿಗೆ ಮಲಬದ್ಧತೆ ತೊಂದರೆ ಇದ್ದರೆ ಅವರಿಗೆ ಚಹಾವನ್ನು ನೀಡಬಹುದು.

ಅಥವಾ ಜ್ವರದಿಂದ ಬಳಲುತ್ತಿದ್ದರೆ ಚಹಾದಲ್ಲಿ ಶುಂಠಿ ಅಥವಾ ಏಲಕ್ಕಿಯನ್ನು ಬೆರೆಸಿ ಚಹಾ ಕೊಡಬಹುದು. ಹೊಟ್ಟೆಯುಬ್ಬರ ಅಥವಾ ವಾಂತಿ ಸಮಸ್ಯೆಗಳಾದಾಗ ಶುಂಠಿ ಚಹಾ ನೀಡುವುದರಿಂದ ಈ ಸಮಸ್ಯೆಯನ್ನು ಬಗೆಹರಿಸಬಹುದು. ಶೀತ ಕೆಮ್ಮು ಬಂದಾಗ ವಯಸ್ಕರಲ್ಲದೇ ಮಕ್ಕಳು ಕೂಡ ಚಹಾ ಸೇವಿಸುವುದರಿಂದ ಶೀತ ನೆಗಡಿ ಕೆಮ್ಮಿನಿಂದ ಆರೋಗ್ಯವಾಗಬಹುದು. ನೀವು ಮಕ್ಕಳಿಗೆ ಚಹಾವನ್ನು ನೀಡಲು ಬಳಸಿದರೆ ನಾಲ್ಕರಿಂದ 10 ವರ್ಷದೊಳಗಿನ ಮಕ್ಕಳಿಗೆ ಗಿಡಮೂಲಿಕೆ ಚಹಾಗಳನ್ನು ಮಾತ್ರ ನೀಡಬೇಕು. 12 ರಿಂದ 13 ವರ್ಷ ವಯಸ್ಸಿನ ಮಕ್ಕಳಿಗೆ ಗ್ರೀನ್ ಟೀ ಅಥವಾ ಹಾಲಿನಿಂದ ತಯಾರಿಸಿದ ಟಿಯನ್ನು ನೀಡಬಹುದು. ನಿಮ್ಮ ಬೆಳೆಯುತ್ತಿರುವ ಮಗುವಿಗೆ ಸಮತೋಲಿತ ಪೋಷಣೆಯ ಅಗತ್ಯವಿದೆ ಆದ್ದರಿಂದ ಮೇಲಿನ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಉತ್ತಮ.

%d bloggers like this: