ಮನೆಯ ಮುಂದೆ ಈ‌ ಗಿಡಗಳನ್ನು ಬೆಳೆಸಿದರೆ ಮನೆಯಲ್ಲಿ ಶಾಂತಿ, ನೆಮ್ಮದಿ ಹೆಚ್ಚು ಇರುತ್ತದೆ

ಮರಗಿಡ ಬೆಳೆಸಿ ಪರಿಸರ ಉಳಿಸಿ. ಗಿಡ ಬೆಳೆಸಿ ಅರಣ್ಯ ಸಂರಕ್ಷಿಸಿ, ಮರವಿದ್ದರೆ ನಾಡು ಮರವಿದ್ದರೆ ಕಾಡು ಎಂಬಂತಹ ಅನೇಕ ವಾಕ್ಯಗಳನ್ನು ಕೇಳಿರುತ್ತೇವೆ. ಅಂತೆಯೇ ಮರಗಿಡಗಳು ಇದ್ದರೇನೇ ಮನುಷ್ಯ ಬದುಕಲು ಸಾಧ್ಯ. ಸಾಮಾನ್ಯವಾಗಿ ಇಂದಿನ ದಿನಮಾನಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಸುತ್ತಾ ಮುತ್ತಾ ಅಭಿವೃದ್ದಿಯ ಹೆಸರಿನಲ್ಲಿ ಮರಗಳ ಮಾರಣ ಹೋಮ ನಡೆಸಲಾಗುತ್ತಿದೆ. ಇದಕ್ಕೆ ಪರಿಸರವಾದಿಗಳು, ಪರಿಸರ ಪ್ರೇಮಿಗಳು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ಆಶಾದಾಯಕ ಬೆಳವಣಿಗೆ ಅಂದರೆ ಅನೇಕರು ತಮ್ಮ ಮನೆಯ ಅಂಗಳ ಅಥವಾ ಮೇಲ್ಚಾವಣೆಯ ಮೇಲೆ ಗಿಡಗಳನ್ನು ಬೆಳೆಸುತ್ತಿದ್ದಾರೆ.

ತಮಗೆ ಇರುವಂತಹ ಸ್ಥಳಾವಕಾಶವನ್ನು ಸೂಕ್ತವಾಗಿ ಬಳಸಿಕೊಂಡು ಹೋಂ ಗಾರ್ಡನ್ ಆಗಿ ಮಾಡಿಕೊಂಡು ಒಂದಷ್ಟು ಮರಗಿಡಗಳನ್ನು ಬೆಳೆಸುತ್ತಿದ್ದಾರೆ. ಕೆಲವರು ಮನೆಯನ್ನು ವಾಸ್ತು ಪ್ರಕಾರವಾಗಿ ಕಟ್ಟಿರುತ್ತಾರೆ. ಅದರಂತೆ ಜ್ಯೋತಿಷ್ಯರ ಸಲಹೆಯಂತೆ ಮನೆಯ ಆವರಣದಲ್ಲಿ ಕೆಲವು ಗಿಡ ಮರಗಳನ್ನು ಕೂಡ ಬೆಳೆಸುತ್ತಾರೆ. ಇದು ಆ ಮನೆಯ ಶ್ರೇಯೋಭಿವೃದ್ದಿಗೆ ಎಂದು ಹೇಳುತ್ತಾರೆ. ಹಾಗಾದರೆ ಯಾವ ಗಿಡ ಮರಗಳನ್ನು ಮನೆಯ ಆವರಣದಲ್ಲಿ ಬೆಳೆಸಿದರೆ ಆ ಮನೆಯು ಸಮೃದ್ದಿಯಾಗುತ್ತದೆ ಎಂದು ತಿಳಿಯೋಣ. ಮನೆಯ ವಾಯುವ್ಯ ದಿಕ್ಕಿನಲ್ಲಿ ದೇವಮರ ಎಂದೇ ಕರೆಸಿಕೊಳ್ಳುವ ಬೇವಿನ ಮರವನ್ನ ಬೆಳೆಸುವುದು ಒಳಿತು ಎಂದು ಹೇಳಲಾಗುತ್ತದೆ.

ಅದೇ ರೀತಿಯಲ್ಲಿ ನೇರಳೆ ಗಿಡವನ್ನು ದಕ್ಷಿಣದ ದಿಕ್ಕಿನಲ್ಲಿ ಬೆಳೆಸಿದರೆ ಮನೆಯಲ್ಲಿ ಕೆಡಕುಗಳು ಸಂಭವಿಸುವುದಿಲ್ಲ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಮನೆಯ ಅಂಗಳದ ಸುತ್ತಾ ಮುತ್ತಾ ಅರಿಶಿಣವನ್ನು ಬೆಳೆಯುವುದಿಲ್ಲ. ಆದರೆ ಇದನ್ನ ಬೆಳೆಯುವುದರಿಂದ ಮನೆಯಲ್ಲಿ ಸಕರಾತ್ಮಕ ವಾತಾವರಣ ನಿರ್ಮಾಣ ಆಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಹಣ್ಣು ಹಂಪಲು ಗಿಡಗಳಾದ ದಾಳಿಂಬೆ, ಬಾಳೆ ಗಿಡ, ಸಪೋಟ ಅಂತಹ ಗಿಡಗಳನ್ನು ಬೆಳೆಸಿದರೆ ಮನೆಯು ತುಂಬಿದ ಮನೆಯಂತೆ ಇರುತ್ತದೆಯಂತೆ. ಇನ್ನು ಮನೆಯ ಮುಂಭಾಗ ತೆಂಗಿನ ಮರವಿದ್ದರೆ ಅದೃಷ್ಟವಂತೆ. ದಿನ ಬೆಳಿಗ್ಗೆ ತೆಂಗಿನ ಮರವನ್ನು ನೋಡುವುದರಿಂದ ಯೋಗ ಇರುತ್ತದೆ ಎಂದು ಹೇಳುತ್ತಾರೆ.

ಮನೆಯ ಪೂರ್ವದ ದಿಕ್ಕಿನಲ್ಲಿ ಆಲದ ಮರ ಇರುವುದರಿಂದ ಮನಸ್ಸು ಉಲ್ಲಾಸವಾಗಿರುವಂತೆ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಇನ್ನು ಮನೆಯಲ್ಲಿ ಅಶೋಕ ವೃಕ್ಷವನ್ನು ಬೆಳೆಸುವುದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ಹೆಚ್ಚು ಇರುತ್ತದೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ತುಳಸಿ ಗಿಡಕ್ಕೆ ವಿಶೇಷವಾದ ಪ್ರಾಧಾನ್ಯತೆಯನ್ನ ನೀಡಲಾಗುತ್ತದೆ. ಅದನ್ನ ದೈವಾಂಶವಾಗಿ ಕಾಣಲಾಗುತ್ತದೆ. ಇದರಿಂದ ಮನೆಯಲ್ಲಿ ಸುಖ,ಶಾಂತಿ ಆರ್ಥಿಕವಾಗಿ ಅಭಿವೃದ್ದಿ ಕಾಣುತ್ತಾರೆ ಎಂದು ಕೂಡ ತಿಳಿಸಲಾಗಿದೆ. ಆದರೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಪಪ್ಪಾಯಿ ಗಿಡ ನೆಡಬಾರದು. ಮತ್ತು ಎಕ್ಕದ ಗಿಡವು ತಾನಾಗೇ ಹುಟ್ಟಿದ್ದರೆ ಅದನ್ನ ಕೀಳಲು ಹೋಗಬೇಡಿ. ಇದರಿಂದ ಮನೆಗೆ ದಾರಿದ್ರ್ಯತನ ಉಂಟಾಗುತ್ತದೆ.

%d bloggers like this: