ಮನೆಯೇ ಮಂತ್ರಾಲಯ ಮನಸ್ಸೇ ದೇವಾಲಯ ಎನ್ನುವ ಹಿರಿಯರ ಮಾತಿದೆ. ಅಂದರೆ ಇದರರ್ಥ ಮನೆಯಲ್ಲಿ ಸಿಗುವ ಸುಖ, ನೆಮ್ಮದಿ ಬೇರೆ ಯಾವ ಪ್ರಸಿದ್ಧ ಸ್ಥಳಕ್ಕೆ ಹೋಗಿ ಬಂದರು ಸಹ ಮನೆಯಲ್ಲಿ ಸಿಗುವಂತಹ ನೆಮ್ಮದಿ, ಸುಖ, ಶಾಂತಿ, ನಿರ್ಭಯ ಭಾವ ಬೇರೆ ಎಲ್ಲಿಯೂ ಕೂಡ ಸಿಗುವುದಿಲ್ಲ. ಕೆಲವರಿಗೆ ಮಾತ್ರ ಮನೆಯೆಂದರೆ ಸಾಕು ನರಕದ ಕೂಪದಂತೆ ಭಾಸವಾಗುತ್ತದೆ. ಕಾರಣ ಮನೆಯಲ್ಲಿರುವ ಸದಸ್ಯರು ಸದಾ ಗಲಾಟೆ, ಅಶಾಂತಿಯ ವಾತಾವರಣ, ವಾಗ್ವಾದ, ಮನಸ್ತಾಪದಿಂದ ಮುಖ ಗಂಟಿಕ್ಕಿಕೊಂಡು ಒಬ್ಬೊರೊಬ್ಬರನ್ನು ಕಂಡರೆ ಸಾಕು ದ್ವೇಷದ ಭಾವನೆಯಿರುವ ಮನೆಯಲ್ಲಿ ಯಾರಿಗೆ ತಾನೆ ಇರಲು ಇಷ್ಟವಾಗುತ್ತದೆ. ಆದ್ದರಿಂದ ಇವರಿಗೆ ಮನೆಯಲ್ಲಿರುವುದು ಎಂದರೆ ನರಕದಂತೆ ಅನುಭವವಾಗುತ್ತದೆ.

ಅದಕ್ಕಾಗಿ ಮನೆಯಲ್ಲಿ ಆದಷ್ಟು ಶಾಂತಿಯಿಂದ ಇರಲು ಪ್ರಯತ್ನಿಸಿ, ಅನಾವಶ್ಯಕ ಮಾತು, ಹರಟೆಯಿಂದ ಇನ್ನೊಬ್ಬರಿಗೆ ಕಿರಿಕಿರಿ ಆಗಬಹುದು. ನಮ್ಮ ಹಿರಿಯರು ಅನಾದಿ ಕಾಲದಿಂದಲೂ ಕೆಲವು ನೇಮ, ನಿಯಮಗಳನ್ನು ಪಾಲಿಸಿಕೊಂಡು ಬಂದಿರುತ್ತಾರೆ. ಅವುಗಳಲ್ಲಿ ಕೆಲವು ವೈಜ್ಞಾನಿಕವಾಗಿಯೂ ಸಾಂಪ್ರದಾಯಿಕ ವಾಗಿಯೂ ಇರುತ್ತದೆ. ವಿಶೇಷವಾಗಿ ಹೊಸ್ತಿಲಿನ ಮಹತ್ವವನ್ನು ನಮ್ಮ ಹಿರಿಯರು ತಿಳಿಸುತ್ತಾ ಬಂದಿದ್ದಾರೆ. ಅಂದರೆ ಹೊಸ್ತಿಲ ಮೇಲೆ ಕೂರುವುದನ್ನು, ನಿಲ್ಲುವುದನ್ನು ಮಾಡಬಾರದು ಎಂದು ಬಾಲ್ಯದಿಂದ ಹೊಸ್ತಿಲಿನ ಮಹತ್ವ ತಿಳಿಸುತ್ತಾರೆ. ಹೊಸ್ತಿಲು ಲಕ್ಷ್ಮಿಯ ಸ್ವರೂಪ ಎಂದು ಅದನ್ನು ಪೂಜ್ಯ ಭಾವನೆಯಿಂದ ನೋಡಲು ಹಿರಿಯರು ತಿಳಿಸುತ್ತಾರೆ.

ಹೊಸ್ತಿಲನ್ನು ಪ್ರತಿ ಮಂಗಳವಾರ ಮತ್ತು ಶುಕ್ರವಾರ ದಿನಗಳಲ್ಲಿ, ಅರಿಶಿನ, ಕುಂಕುಮ, ಗಂಧದಿಂದ ಅಲಂಕರಿಸಿ ಹೊಸ್ತಿಲನ್ನು ಪೂಜಿಸಬೇಕು. ಈ ರೀತಿಯಾಗಿ ಹೊಸ್ತಿಲನ್ನು ಪೂಜಿಸುವುದರಿಂದ ನಿಮ್ಮ ಮನೆಗೆ ಲಕ್ಷ್ಮಿ ಆಗಮನವಾಗಿ ನಿಮ್ಮ ಮನೆಯು ಸುಖ ಸಂಪತ್ತಿನಿಂದ ಸಮೃದ್ದಿಯಾಗುತ್ತದೆ ಹೇಳುತ್ತಾರೆ. ಸಾಮಾನ್ಯವಾಗಿ ಮನೆಗಳಲ್ಲಿ ನಡೆಯುವ ಎಲ್ಲಾ ಶುಭಕಾರ್ಯ ಸಂದರ್ಭಗಳಲ್ಲಿ ಹೊಸ್ತಿಲನ್ನು ಅರಿಶಿನ, ಕುಂಕುಮ ಹೂವಿನೊಂದಿಗೆ ಸಿಂಗರಿಸುವುದು ನಮ್ಮ ಸಾಂಪ್ರದಾಯ ಪದ್ದತಿಯಾಗಿದೆ. ಇನ್ನು ಮನೆಯಿಂದ ಹೊರಗೆ ಹೋಗಬೇಕಾದಾಗ ಮತ್ತು ಹೊರಗಡೆಯಿಂದ ಮನೆಗೆ ಬರುವಾಗ ಹೊಸ್ತಿಲನ್ನು ದಾಟಿ ಹೋಗಬೇಕು ಎಂದು ನಮ್ಮ ಹಿರಿಯರು ತಿಳಿಸುತ್ತಾರೆ. ಲಕ್ಷ್ಮಿಯ ಸ್ವರೂಪವಾದ ಹೊಸ್ತಿಲನ್ನು ತುಳಿದರೆ ಹಣದ ದಾರಿದ್ರ್ಯತನ ಬರುವ ಸಾಧ್ಯತೆ ಇರುತ್ತದೆ ಇದು ದೈವ ಲಕ್ಷಣವನ್ನು ಹೊಂದಿದೆ.

ಇನ್ನು ಮನೆಯ ಹೊಸ್ತಿಲನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಶುಭ್ರಗೊಳಿಸಿ, ಕಾಟಚಾರಕ್ಕೆ ಮಾಡದೇ ಶ್ರದ್ದಾಭಕ್ತಿಯಿಂದ ಪೂಜಿಸಬೇಕು. ಸಾಧ್ಯವಾದರೆ ಪ್ರತಿದಿನ ಹೊಸ್ತಿಲು ಪೂಜೆ ಮಾಡುವುದರಿಂದ ಲಕ್ಷ್ಮಿ ಅನುಗ್ರಹವಾಗಿ ಧನಪ್ರಾಪ್ತಿ ಆಗುತ್ತದೆ. ಹಬ್ಬ ಹರಿದಿನಗಳಲ್ಲಿಹೊಸ್ತಿಲಿಗೆ ವಿಶೇಷ ಪೂಜೆ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಹೊಸ್ತಿಲು ಮನೆಯ ವಾಸ್ತು ಪುರುಷ ಎಂಬ ನಂಬಿಕೆಯಾಗಿದ್ದು, ಮನೆರ ಮುಂಭಾಗ ಹೊರಾಂಗಣದಲ್ಲಿ ಸ್ವಚ್ಛಗೊಳಿಸಿ, ರಂಗೋಲಿ ಹಾಕುವುದರಿಂದ ನಿಮ್ಮ ಮನಸ್ಸಲ್ಲಿ ಉಲ್ಲಾಸ, ಉತ್ಸಾಹ ಮೂಡುತ್ತದೆ. ಹೀಗೆ ನಮ್ಮ ಹಿರಿಯರು ಪಾಲಿಸಿಕೊಂಡ ಬಂದ ನಿಯಮಗಳು, ಸಂಪ್ರದಾಯಗಳು ವೈಜ್ಞಾನಿಕ ಕಾರಣವನ್ನು ಹೊಂದಿರುತ್ತದೆ. ಆದ್ದರಿಂದ ಕೆಲವು ಆಚರಣೆಗಳನ್ನು ಮೂಢನಂಬಿಕೆ ಎಂದು ಜರಿಯಬಾರದು.